ಬಂಟ್ವಾಳ ತಾಪಂ ಸಭಾಂಗಣದಲ್ಲಿ ತಾಲೂಕುಮಟ್ಟದ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆ ತಹಸೀಲ್ದಾರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಮುಖರಾದ ಸಚಿನ್ ಕುಮಾರ್, ತೀರ್ಥಪ್ರಸಾದ್, ವಿನಯಾ ಕುಮಾರಿ ಇದ್ದರು.
ಬಂಟ್ವಾಳ: ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದುಕೊರತೆ ಸಮಿತಿ ಸಭೆ ತಹಸೀಲ್ದಾರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾಪಂ ಎಸ್.ಜೆ.ಎಸ್.ವೈ. ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಪರಿಶಿಷ್ಟ ಜಾತಿ, ವರ್ಗದವರ ಪ್ರಗತಿ ಕಾಲನಿ ಯೋಜನೆ ಅನುದಾನ ಸರಿಯಾಗಿ ವಿನಿಯೋಗವಾಗುತ್ತಿಲ್ಲ, ಪ.ಜಾತಿ, ವರ್ಗದ ಜನರು ವಾಸಿಸದಿರುವ ಪ್ರದೇಶದಲ್ಲಿಯೂ ಈ ಯೋಜನೆ ಕೈಗೆತ್ತಿಕೊಳ್ಳಲಾಗಿರುವ ಕುರಿತು ಮಹಾಲಿಂಗ ನಾಯ್ಕ ಗಮನ ಸೆಳೆದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಮಾತನಾಡಿ, ಪರಿಶಿಷ್ಟ ಜಾತಿ, ಪಂಗಡಕ್ಕೆಂದು ಮೀಸಲಿರಿಸಲಾದ ಹಣ ವರ್ಗಾವಣೆ ಮಾಡಲು ಸಾಧ್ಯವಿಲ್ಲ, ವೈಯಕ್ತಿಕ ಫಲಾನುಭವಿಗಳಿಗೆ ನೀಡಲು ಅವಕಾಶವಿದೆ ಎಂದರು.
ಬಂಟ್ವಾಳ ಬಡ್ಡಕಟ್ಟೆ ಸ್ಮಶಾನ ಅಭಿವೃದ್ಧಿ ಕಾಮಗಾರಿ ಗುಣಮಟ್ಟದ ಕುರಿತು ಸಂಶಯ ವ್ಯಕ್ತಪಡಿಸಿದ ಮೋಹನ್ ಚಂಡ್ತಿಮಾರ್, ಇದರ ಗುಣಮಟ್ಟದ ಕುರಿತು ಪರಿಶೀಲನೆಯಾಗಬೇಕು ಎಂದರು. ಇದರ ಕುರಿತು ಮಾಹಿತಿ ಇಲ್ಲ ಗಮನಹರಿಸಲಾಗುವುದು ಎಂದು ಮುಖ್ಯಾಧಿಕಾರಿ ತೀರ್ಥಪ್ರಸಾದ್ ಉತ್ತರಿಸಿದರು.
ಪುರಸಭೆಗೆ ಎಷ್ಟು ಅನುದಾನ ಬಂದಿದೆ, ಎಷ್ಟು ಖರ್ಚು ಮಾಡಿದ್ದೀರಿ ಎಂಬ ಕುರಿತು ಸಮರ್ಪಕ ಮಾಹಿತಿ ಮುಖ್ಯಾಧಿಕಾರಿ ಬಳಿ ಇದೆಯೇ ಎಂದು ಗಂಗಾಧರ ಪರಾರಿ ಪ್ರಶ್ನಿಸಿ, ನೀರು ವಿತರಣೆ ಸಮಸ್ಯೆಯ ಬಗ್ಗೆ ಗಮನಸೆಳೆದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವಿನಯಾ ಕುಮಾರಿ, ನಾನಾ ಇಲಾಖೆಗಳ ಅಧಿಕಾರಿಗಳು, ಪ.ಜಾತಿ, ಪಪಂ ಮುಖಂಡರು ಉಪಸ್ಥಿತರಿದ್ದರು.
ಫಲಾನುಭವಿಗಳಿಗೆ ಹಕ್ಕುಪತ್ರ ಸಿದ್ಧ
ಪುಣಚದ ಮೂವರು ಫಲಾನುಭವಿಗಳಿಗೆ ಹಕ್ಕುಪತ್ರ ಪಡೆಯಲು ನಡೆಸಿದ ಹೋರಾಟವನ್ನು ಸಭೆಯ ಗಮನಕ್ಕೆ ತಂದ ಮುಖಂಡ ಗಿರಿಧರ ನಾಯ್ಕ, ತಹಸೀಲ್ದಾರ್ ಹಕ್ಕುಪತ್ರ ಕೊಡುತ್ತಾರೋ, ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು. ಹಕ್ಕುಪತ್ರ ವಿತರಣೆ ಕುರಿತು ಈಗಾಗಲೇ ಪ್ರಸ್ತಾಪಿಸಲಾಗಿದ್ದು, ಹಕ್ಕುಪತ್ರ ಸಿದ್ಧವಾಗಿದೆ. ಸರ್ಕಾರದ ಸುತ್ತೋಲೆ ಪ್ರಕಾರ, ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ನೀಡಬೇಕು. ಮುಂದಿನ ಅಕ್ರಮ-ಸಕ್ರಮ ಸಭೆಯಲ್ಲಿ ವಿತರಿಸಲಾಗುವುದು ಎಂದು ತಹಸೀಲ್ದಾರ್ ಮಂಜುನಾಥ್ ಹೇಳಿದರು.
ಹೆಣ್ಣುಮಕ್ಕಳ ಭದ್ರತೆಗೆ ಕ್ರಮ
ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಂಚಾರಿ ಪೊಲೀಸರು ಕೆಸ್ಸಾರ್ಟಿಸಿ ಬಸ್‌ಗಳಿಗೆ ಒಂದು ನೀತಿ, ಇತರ ಬಸ್, ವಾಹನಗಳಿಗೆ ಮತ್ತೊಂದು ರೀತಿ ಮಾಡುವುದು ಏಕೆ, ಮಿತಿಮೀರಿ ಜನರನ್ನು ಹೇರಿಕೊಂಡು ಹೋಗುವ ಕೆಎಸ್ಸಾರ್ಟಿಸಿ ಬಸ್ಸುಗಳ ವಿರುದ್ಧ ಕ್ರಮ ಯಾಕಿಲ್ಲ? ಎಂದು ವಿಶ್ವನಾಥ ಚಂಡ್ತಿಮಾರ್ ಪ್ರಶ್ನಿಸಿದರು. ಪ.ಜಾತಿ, ಪಂಗಡದ ಹೆಣ್ಣುಮಕ್ಕಳ ಸುರಕ್ಷೆ ಕುರಿತು ಆತಂಕ ವ್ಯಕ್ತಪಡಿಸಿದ ಸತೀಶ್ ಅರಳ, ಪೊಲೀಸ್ ಇಲಾಖೆ ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.