ಪೆರ್ಣಂಕಿಲ ಗ್ರಾಮದ ಚಿತ್ರಬೈಲು ಎಂಬಲ್ಲಿ ತಲೆಗೆ ಚೊಂಬು ಸಿಲುಕಿ ಒದ್ದಾಡುತ್ತಿದ್ದ ಕೋತಿ. 
ಉಡುಪಿ

ತಲೆಗೆ ಚೊಂಬು ಸಿಲುಕಿಸಿಕೊಂಡಿದ್ದ ಕೋತಿಯ ರಕ್ಷಣೆ

* ಪೆರ್ಣಂಕಿಲ ಗ್ರಾಮದಲ್ಲಿ ಘಟನೆ

* ಯುವಕರ ಕಾರ್ಯಕ್ಕೆ ಮೆಚ್ಚುಗೆ

ಉಡುಪಿ: ಎರಡು ದಿನದಿಂದ ಚೊಂಬು ತಲೆಗೆ ಸಿಲುಕಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕೋತಿಯೊಂದನ್ನು ಸ್ಥಳೀಯರು ರಕ್ಷಿಸಿದ ಘಟನೆ ಉಡುಪಿ ತಾಲೂಕಿನ ಪೆರ್ಣಂಕಿಲ ಗ್ರಾಮದ ಚಿತ್ರಬೈಲು ಎಂಬಲ್ಲಿ ಗುರುವಾರ (ಮಾ.12) ನಡೆದಿದೆ.
ಎಲ್ಲಿಯೋ ಮನೆಯೊಂದರ ಹೊರವಲಯದಲ್ಲಿದ್ದ ಸ್ಟೀಲ್​ ಚೊಂಬಿನೊಳಗೆ ಏನಿದೆಯೆಂದು ನೋಡಲು ಯತ್ನಿಸಿದ್ದ ವೇಳೆಯಲ್ಲಿ ಕೋತಿಯ ತಲೆ ಸಿಲುಕಿಹಾಕಿಕೊಂಡಿತ್ತು ಎನ್ನಲಾಗಿದೆ. ಪೆರ್ಣಂಕಿಲ ಪರಿಸರದಲ್ಲಿ ತಲೆಗೆ ಸಿಲಿಕಿದ್ದ ಚೊಂಬು ತೆಗೆಯಲು ಕೋತಿ ಹರಸಾಹಸ ಪಡುತ್ತಿತ್ತಲ್ಲದೆ, ಭಯದಲ್ಲಿ ಒದ್ದಾಡುತ್ತಿತ್ತು.
ಸ್ಥಳೀಯ ಸಮಾಜ ಸೇವಕರು ಮತ್ತು ಪರಿಸರ ಪ್ರೇಮಿ ನವೀನ್​ ಕುಮಾರ್​ ಚಿತ್ರಬೈಲ್​, ಸುಕೇಶ್​, ಹರೀಶ ರಾಂ ಮತ್ತು ವಿಶ್ವನಾಥ್​ ಎಂಬವರು ಇದನ್ನು ಗಮನಿಸಿದರು. ಕೂಡಲೇ ಕಾರ್ಯ ಪ್ರವೃತ್ತರಾದ ಅವರು ಕೋತಿಯನ್ನು ಹಗ್ಗ ಕಟ್ಟಿ ಹಿಡಿದರು. ಚಿತ್ರಬೈಲು ಬ್ರಹ್ಮಲಿಂಗೇಶ್ವರ ದೇವಸ್ಥಾನದತ್ತ ಕೊಂಡೊಯ್ದರು. ಕೋತಿಯ ತಲೆಯನ್ನು ನೀರಿನಲ್ಲಿ ಒದ್ದೆ ಮಾಡಿ ಬಳಿಕ ಅತ್ಯಂತ ನಾಜೂಕಾಗಿ ಕೋತಿಗೆ ನೋವಾಗದ ರೀತಿಯಲ್ಲಿ ಚೊಂಬನ್ನು ತಲೆಯಿಂದ ಬೇರ್ಪಡಿಸಿದರು. ಚೊಂಬು ತೆಗೆದ ತಕ್ಷಣವೇ ಕೋತಿ ಅಲ್ಲಿಂದ ಓಡಿ ಪರಾರಿಯಾಗಿದೆ. ಸ್ಥಳೀಯ ಯುವಕರ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.