ಉಡುಪಿ: ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರಿಗಾಗಿ ಜಾರಿಗೆ ತರಲಾಗಿರುವ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ'ಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ನೌಕರರ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲ ಪ್ರಮುಖ ಖಾಸಗಿ ಆಸ್ಪತ್ರೆಗಳು ನಗದು ರಹಿತ ಚಿಕಿತ್ಸಾ ಯೋಜನೆಯಡಿ ಶೀಘ್ರವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಸೂಚನೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ' ಕುರಿತು ಸ್ಥಳೀಯ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳೊಂದಿಗೆ ಆಯೋಜಿಸಿದ್ದ ಮಹತ್ವದ ಸಭೆಯಲ್ಲಿ ಮಾತನಾಡಿದರು.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ಜಿಲ್ಲಾ ಸಂಯೋಜಕಿ ಡಾ. ಯಶಸ್ವಿನಿ ಮಾತನಾಡಿ, ತಾಂತ್ರಿಕ ಪ್ರೆಸೆಂಟೇಷನ್ (ಪಿಪಿಟಿ) ಮೂಲಕ ಯೋಜನೆಯ ವಿವರ ನೀಡಿದರು. ಸರ್ಕಾರಿ ನೌಕರರು ಈ ಯೋಜನೆಯಡಿ ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಗಳಿಂದ ಯಾವುದೇ ರೆಫರಲ್ ಪತ್ರದ ಅಗತ್ಯವಿಲ್ಲ. ಯೋಜನೆಗೆ ಯಾವುದೇ ಗರಿಷ್ಠ ಆರ್ಥಿಕ ಮಿತಿಯೂ ಇರುವುದಿಲ್ಲ. ಯೋಜನೆಯ ಪ್ಯಾಕೇಜ್ ದರಗಳನ್ನು ಇತ್ತೀಚೆಗಿನ ಸಿಜಿಎಚ್ಎಸ್ ದರಗಳಿಗೆ ಅನುಗುಣವಾಗಿ ಪರಿಷ್ಕರಿಸಲಾಗಿದೆ ಎಂದು ವಿವರಿಸಿದರು.
ಆಸ್ಪತ್ರೆಗಳ ಪ್ರತಿನಿಧಿಗಳು ಕೇಳಿದ ವಿವಿಧ ತಾಂತ್ರಿಕ ಹಾಗೂ ಆಡಳಿತಾತ್ಮಕ ಪ್ರಶ್ನೆಗಳಿಗೆ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಲತಾ ನಾಯಕ ಅವರು ಸೂಕ್ತ ಉತ್ತರ ಹಾಗೂ ಸ್ಪಷ್ಟನೆ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮ ರಾವ್ ಕೆ., ಉಡುಪಿ ತಾಲೂಕು ಆರೋಗ್ಯಾಧಿಕಾರಿ ವಿನೋದ ಭೂತೆ ಇನ್ನಿತರರು ಉಪಸ್ಥಿತರಿದ್ದರು. ಸಭೆಯಲ್ಲಿ ಜಿಲ್ಲೆ ಪ್ರಮುಖ 16 ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳು ಪಾಲ್ಗೊಂಡಿದ್ದರು.