ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿ.ಎಸ್. ಉಗ್ರಪ್ಪ ಮಾತನಾಡಿದರು. ಎನ್. ನರಸಿಂಹಯ್ಯ, ಮಂಜುನಾಥ್ ಮಡ್ಲೂರು, ಪ್ರಕಾಶ್ ಎನ್. ದೇಸಾಯಿ ಬೆಳಗಾವಿ, ಹನುಮಂತರಾಯಪ್ಪ ಇದ್ದರು.
* ಕೆಪಿಸಿಸಿ ಉಪಾಧ್ಯಕ ವಿ.ಎಸ್. ಉಗ್ರಪ್ಪ ಕೇಂದ್ರಕ್ಕೆ ಆಗ್ರಹ
* ನಿಯೋಗದೊಂದಿಗೆ ಪ್ರಧಾನಿಗೆ ಒತ್ತಡ ಹೇರಲು ಸಿಎಂಗೆ ಒತ್ತಾಯ
ಉಡುಪಿ: ರಾಜ್ಯದಲ್ಲಿ ಎಸ್ಸಿ&ಎಸ್ಟಿ ಹಾಗೂ ಒಬಿಸಿ ಸಮುದಾಯಕ್ಕೆ ಸಾಮಾಜಿಕವಾಗಿ ಆಗುತ್ತಿರುವ ಅನ್ಯಾಯ ಮುಂದುವರಿದಿದೆ. ಇದನ್ನು ವಿರೋಧಿಸಿ 3 ತಿಂಗಳಿಂದ ರಾಜ್ಯವ್ಯಾಪಿ ಹೋರಾಟ, ಅಭಿಯಾನ ನಡೆದಿದೆ. ಈ ಸಮುದಾಯಗಳನ್ನು ಕೂಡಲೇ ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಿ, ಶೇ.56 ಮೀಸಲಾತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ಆಗ್ರಹಿಸಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಸೋಮವಾರ (ಜು.13) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವಿಚಾರವಾಗಿ ಸಿಎಂ ಡಿ.ಕೆ. ಶಿವಕುಮಾರ್ ಸರ್ವಪಕ್ಷಗಳ ನಿಯೋಗದೊಂದಿಗೆ ಪ್ರಧಾನಿ ಮೋದಿ ಅವರನ್ನು ತ್ವರಿತ ಭೇಟಿಯಾಗಿ ಒತ್ತಡ ಹಾಕಬೇಕು. ಇಲ್ಲದಿದ್ದಲ್ಲಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಮ್ಮ ಹೋರಾಟ, ಪ್ರತಿಭಟನೆ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಕೇಂದ್ರ ಸರ್ಕಾರದ ನಿರ್ಲಕ್ಷ್ಯ
ಸಂವಿಧಾನದ ಆರ್ಟಿಕಲ್ 340, 341 ಹಾಗೂ 342ರ ಅಡಿಯಲ್ಲಿ ಕ್ರಮವಾಗಿ ಒಬಿಸಿ, ಎಸ್ಸಿ ಹಾಗೂ ಎಸ್ಟಿ ಸಮುದಾಯ ಎಂದು ಗುರುತಿಸಲಾಗಿದೆ, ಆದರೆ. ಪ್ರಧಾನಿ ಮೋದಿ ಅವರು 341 (ಎ) ಎಂಬ ಹೊಸ ಆರ್ಟಿಕಲ್ ಜಾರಿಗೊಳಿಸಿ ಆರ್ಥಿಕವಾಗಿ ಹಿಂದುಳಿದವರು ಎಂದು ಗುರುತಿಸಿ ಬ್ರಾಹ್ಮಣರು ಸೇರಿದಂತೆ ಇನ್ನಿತರ ವಿವಿಧ ಸಮುದಾಯ ಸೇರ್ಪಡಿಸಿ ನೈಜ ಹಿಂದುಳಿದವರಿಗೆ ಅನ್ಯಾಯ ಮಾಡಿದ್ದಾರೆ.
2022ರಲ್ಲಿ ಬಸವರಾಜ ಬೊಮ್ಮಾಯಿ ಅವರು ಸಿಎಂ ಇದ್ದಾಗ ಹೈಕೋರ್ಟ್ ಆದೇಶದಂತೆ ಜನಸಂಖ್ಯೆ ಆಧರಿಸಿ ಮೀಸಲಾತಿ ನೀಡುವ ಪ್ರಯತ್ನ ನಡೆದಿತ್ತು. ರಾಜ್ಯದಲ್ಲಿ ಅಂದು ಎಸ್ಸಿ ಸಮುದಾಯಕ್ಕೆ ಶೇ.15ರಿಂದ 17ಕ್ಕೆ, ಎಸ್ಟಿಗೆ ಶೇ.3ರಿಂದ ಶೇ.7ಕ್ಕೆ ಹಾಗೂ ಒಬಿಸಿಗೆ ಶೇ.32ರಿಂದ 42ಕ್ಕೆ ಮೀಸಲಾತಿ ಹೆಚ್ಚಿಸಿ ಅನುಮೋದನೆಗಾಗಿ ಮುಖ್ಯ ಕಾರ್ಯದರ್ಶಿಯವರು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದರು. ಆದರೆ, ಪ್ರಧಾನಿ ಮೋದಿ ಈ ವರೆಗೂ ಅನುಮೋದನೆ ತೋರದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದರು.
ತಮಿಳುನಾಡಿನಲ್ಲಿ ಶೇ.69 ಮೀಸಲಾತಿ ನೀಡಲಾಗಿದೆ. ಯಾರಾದರೂ ಶೌಚಾಲಯ ಇಲ್ಲವೆಂದು ಪತ್ರ ಬರೆದರೆ ಅದನ್ನು 'ಮನ್ಕಿ ಬಾತ್'ನಲ್ಲಿ ಮಾತನಾಡುವ ಪ್ರಧಾನಿ ಮೋದಿ, 4 ವರ್ಷ ಕಳೆದರೂ ಹಿಂದುಳಿದವರಿಗೆ ಮೀಸಲಾತಿ ಕೊಡದೆ ಅನ್ಯಾಯ ಮಾಡುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ವಾಲ್ಮೀಕಿ ಸಮಾಜ ಸಮಾನ ಮನಸ್ಕರ ವೇದಿಕೆಯ ಕಾರ್ಯಾಧ್ಯಕ್ಷ ಎನ್. ನರಸಿಂಹಯ್ಯ, ಮಂಜುನಾಥ್ ಮಡ್ಲೂರು, ಪ್ರಕಾಶ್ ಎನ್. ದೇಸಾಯಿ ಬೆಳಗಾವಿ, ನಿವೃತ್ತ ಇಂಜಿನಿಯರ್ ಹನುಮಂತರಾಯಪ್ಪ ಇದ್ದರು.
ಕುಲಶಾಸ್ತ್ರಗಳ ಅಧ್ಯಯನ ನಡೆಸಿ
ರಾಜ್ಯ ಸರ್ಕಾರ 72,183 ವಿವಿಧ ಸರ್ಕಾರಿ ಹುದ್ದೆಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ. ಆದರೆ, ಈವರೆಗೂ ಎಸ್ಸಿ, ಎಸ್ಟಿ ಹಾಗೂ ಒಬಿಸಿ ಸಮುದಾಯಕ್ಕೆ ಸೂಕ್ತ ಮೀಸಲಾತಿ ನಿಗದಿ ಮಾಡಿಲ್ಲ. ಇರುವ ಮೀಸಲಾತಿ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಇದರಿಂದ ನೈಜವಾಗಿ ಹಿಂದುಳಿದವರುಗೆ ಸರ್ಕಾರಿ ಹುದ್ದೆಯಲ್ಲಿ ಅತಿ ಕನಿಷ್ಠ ಅವಕಾಶ ಲಭಿಸುವಂತಾಗಿದೆ. ರಾಜ್ಯಾದ್ಯಂತ ಜನರು ಜಾತಿಯ ನಕಲಿ ದಾಖಲೆ ಮಾಡಿಸಿಕೊಂಡಿದ್ದಾರೆ. ಆದರೂ ಜಿಲ್ಲಾಡಳಿತ ಅಥವಾ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ವೋಟ್ ಬ್ಯಾಂಕ್ಗಾಗಿ ಶಾಸಕರೂ ಸಹ ಪೈಪೋಟಿಯಲ್ಲಿ ನಕಲಿ ದಾಖಲೆ ಮಾಡಿಸಿಕೊಡುತ್ತಿದ್ದಾರೆ. ಈ ಕುರಿತು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಮೀಸಲಾತಿ ಎನ್ನುವುದು ಯಾರಪ್ಪನ ಸ್ವತ್ತಲ್ಲ. ಕುಲಶಾಸ್ತ್ರದ ಅಧ್ಯಯನ ಆಗಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.