ಉಡುಪಿ: ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ ಅಕ್ರಮ ಬಳಕೆ ಮತ್ತು ದುರುಪಯೋಗ ತಡೆಯುವ ನಿಟ್ಟಿನಲ್ಲಿ ಪೊಲೀಸರು ವಿಶೇಷ ತಪಾಸಣಾ ಕಾರ್ಯಾಚರಣೆ ಕೈಗೊಂಡಿದ್ದು, ಅನಧಿಕೃತವಾಗಿ ಡಿಸೈನ್ ಮಾರ್ಪಾಡು ಮಾಡಿದ್ದ 4 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಶಸ್ತ್ರಾಸ್ತ್ರ ಬಳಕೆಗೆ ಸಂಬಂಧಿಸಿದಂತೆ ದೂರುಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ, ಎಸ್ಪಿ ಮಾರ್ಗದರ್ಶನದಲ್ಲಿ ಜಿಲ್ಲಾದ್ಯಂತ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಗನ್ ಲೈಸೆನ್ಸ್ ಹೊಂದಿರುವವರ ಹಿನ್ನೆಲೆ, ಶಸ್ತ್ರಾಸ್ತ್ರಗಳ ಪ್ರಸ್ತುತ ಸ್ಥಿತಿ ಬಗ್ಗೆ ಪೊಲೀಸರು ಸತತ ಒಂದು ತಿಂಗಳು ಜಾಲಾಡಿದ್ದಾರೆ.
2,925 ಶಸ್ತ್ರಾಸ್ತ್ರ ಪರಿಶೀಲನೆ
ಕಾರ್ಯಾಚರಣೆ ವೇಳೆ ಜಿಲ್ಲಾದ್ಯಂತ ಒಟ್ಟು 2,925 ಶಸ್ತ್ರಾಸ್ತ್ರಗಳನ್ನು ಖುದ್ದು ತಪಾಸಣೆಗೊಳಪಡಿಸಲಾಗಿದೆ. ತಪಾಸಣೆ ವೇಳೆ 4 ಗನ್ಗಳನ್ನು ನಿಯಮಬಾಹಿರವಾಗಿ ಮಾರ್ಪಾಡು ಮಾಡಿರುವುದು ಕಂಡುಬಂದಿದೆ. ಈ ಸಂಬಂಧ ಶಂಕರನಾರಾಯಣ, ಕೋಟ, ಬ್ರಹ್ಮಾವರ ಹಾಗೂ ಕಾರ್ಕಳ ಟೌನ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಜೊತೆಗೆ ಜಿಲ್ಲೆಯಲ್ಲಿ ರೌಡಿಶೀಟರ್ಗಳಾಗಿದ್ದು ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವವರ ನಡವಳಿಕೆ ಹಾಗೂ ಅವರ ಮೇಲೆ ಹೊಸ ಕೇಸ್ಗಳು ದಾಖಲಾಗಿವೆಯೇ ಎಂಬುದರ ಬಗ್ಗೆಯೂ ಪೊಲೀಸರು ತೀವ್ರ ನಿಗಾವಹಿಸಿದ್ದಾರೆ.