ಗಂಗೊಳ್ಳಿ ಬಂದರು ಪ್ರದೇಶದಲ್ಲಿ ಸಹಕಾರಿ ಸಂಘದ ಸಮೀಪ ಇಟ್ಟಿರುವ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳು.
ಕುಂದಾಪುರ: ಗಂಗೊಳ್ಳಿ ಬಂದರಿನಲ್ಲಿ ಮೀನುಗಾರಿಕಾ ಬೋಟ್‌ಗಳಿಗೆ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ಅಕ್ರಮವಾಗಿ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಗಂಗೊಳ್ಳಿ ಮೀನುಗಾರಿಕಾ ಬಂದರಿನ ಮೂಲಕ ಮೀನುಗಾರಿಕೆಗೆ ತೆರಳುವ ಬೋಟ್‌ಗಳಿಗೆ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ಗಂಗೊಳ್ಳಿ ಬಂದರು ಪ್ರದೇಶದ ಸೇವಾ ಸಹಕಾರಿ ಸಂಘವೊಂದು ಒದಗಿಸುತ್ತಿದ್ದು, ಇದು ಕಾನೂನು ಬಾಹಿರ ಎಂದು ಸ್ಥಳೀಯ ಮೀನುಗಾರರು ಆರೋಪಿಸಿದ್ದಾರೆ. ಜನಸಾಮಾನ್ಯರು ಅಥವಾ ಹೋಟೆಲ್ ಮಾಲೀಕರು ಸಿಲಿಂಡರ್ ಬೇಕಾದರೆ ಬುಕ್ ಮಾಡಿ, ಕೆಲದಿನ ಕಾಯಬೇಕಾಗುತ್ತದೆ. ಸಿಲಿಂಡರ್ ಪಡೆಯಲು ಸಾರ್ವಜನಿಕರಿಗೆ ಅನ್ವಯಿಸುವ ಕಾನೂನು ಇಲ್ಲಿ ಅನ್ವಯಿಸುದಿಲ್ಲವೇ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಎದ್ದಿದೆ.
ಸಹಕಾರಿ ಸಂಘದ ವಠಾರದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗುತ್ತಿದ್ದು, ಯಾವುದೇ ಸೂಕ್ತ ಮುನ್ನೆಚ್ಚರಿಕಾ ಕ್ರಮಕೈಗೊಂಡಿಲ್ಲ. ಪರವಾನಗಿ ಇಲ್ಲದೆ ಸಿಲಿಂಡರ್‌ಗಳನ್ನು ಸಂಗ್ರಹಿಸಿ ಮೀನುಗಾರಿಕೆ ಬೋಟ್‌ಗಳಿಗೆ ಸರಬರಾಜು ಮಾಡುವುದು ಕಾನೂನು ಬಾಹಿರ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ತಹಸೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲು ಸ್ಥಳೀಯರು ಮುಂದಾಗಿದ್ದಾರೆ.
ಸ್ಥಳೀಯ ಸೇವಾ ಸಹಕಾರಿ ಸಂಘದ ಸದಸ್ಯರ ಬೋಟ್‌ಗಳಲ್ಲಿ ಅಡುಗೆ ಮಾಡುವ ಉದ್ದೇಶದಿಂದ ಬಿಪಿಸಿಎಲ್ ಸಂಸ್ಥೆಯ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಈ ಸಂಸ್ಥೆಯಿಂದ ನೇರವಾಗಿ ಸಿಲಿಂಡರ್ ಖರೀದಿಸಿ ಬೋಟ್‌ಗಳಿಗೆ ಪೂರೈಕೆ ಮಾಡಲಾಗುತ್ತಿದೆ ಎಂದು ಸಿಲಿಂಡರ್ ಸರಬರಾಜು ಮಾಡುತ್ತಿರುವ ಸ್ಥಳೀಯ ಸೇವಾ ಸಹಕಾರಿ ಸಂಘ ಸ್ಪಷ್ಟನೆ ನೀಡಿದೆ. ಆದರೆ ಬೋಟ್‌ಗಳಿಗೆ ವಾಣಿಜ್ಯ ಬಳಕೆಯ ಸಿಲಿಂಡರ್ ಸರಬರಾಜು ಆಗುತ್ತಿರುವ ವಿಷಯ ಭಾರಿ ವಿವಾದಕ್ಕೆ ಕಾರಣವಾಗಿದೆ.
ಗಂಗೊಳ್ಳಿ ಬಂದರು ಪ್ರದೇಶದಲ್ಲಿ ಸಹಕಾರಿ ಸಂಘದ ಸಮೀಪ ಇಟ್ಟಿರುವ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳು.