ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ.
* ಸಂಸದ ಕೋಟ ಶ್ರೀನಿವಾಸ ಪೂಜಾರಿ ಭರವಸೆ
ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿ, ಮಹಿಳೆ ಸಾವು ಪ್ರಕರಣ
ಉಡುಪಿ: ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮಹಿಳೆ ಮೃತಪಟ್ಟಿರುವ ಘಟನೆ ಬಹಳ ನೋವಿನ ಸಂಗತಿ. ಈ ವಿಚಾರದಲ್ಲಿ ಒಬ್ಬರನ್ನೊಬ್ಬರು ದೂರುವುದು ಸರಿಯಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಎರಡೂ ಇದಕ್ಕೆ ಜವಾಬ್ದಾರರು. ಈ ವಿಚಾರವಾಗಿ ಟಾಸ್ಕ್ಫೋರ್ಸ್ ರಚನೆಗೆ ರಾಜ್ಯದಿಂದ ಸಮಗ್ರ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾದರೆ ತಕ್ಷಣವೇ ಅನುಮೋದನೆ ಕೊಡಿಸಲು ಪ್ರಯತ್ನಿಸುವುದಾಗಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.
ಉಡುಪಿಯಲ್ಲಿ ಭಾನುವಾರ (ಫೆ.22) ಮಾಧ್ಯಮದವರೊಂದಿಗೆ ಮಾತನಾಡಿ, ಆನೆ ದಾಳಿ ತಡೆಯುವ ನಿಟ್ಟಿನಲ್ಲಿ 32 ಸಿಬ್ಬಂದಿ ಒಳಗೊಂಡ ಟಾಸ್ಕ್ಫೋರ್ಸ್ಅನ್ನು ಅರಣ್ಯ ಇಲಾಖೆ ಸರ್ಕಾರಕ್ಕೆ ಸಿದ್ಧಪಡಿಸಿಕೊಟ್ಟಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಾನೂ ಮಾತನಾಡಿದ್ದೇನೆ ಎಂದರು.
ಅಧಿಕಾರಿಗಳೊಂದಿಗೆ ಮಾತನಾಡಿರುವೆ
ಟಾಸ್ಕ್ಫೋರ್ಸ್ ಅನುಮೋದನೆಯಾದರೆ ಆನೆಗಳ ಮೇಲೆ ಕಣ್ಗಾವಲು ಇಡಲು ಸಾಧ್ಯವಾಗಲಿದ್ದು, ಜನರ ಸಾವು ತಡೆಯಲು ಸಾಧ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಆ ವಿಚಾರವಾಗಿ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೂ ಮಾತನಾಡಿದ್ದೇನೆ. ಅವರೂ ಸಹ ಅನುಮೋದನೆಯ ಭರವಸೆ ನೀಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಅರಣ್ಯ ಸಚಿವರೊಂದಿಗೂ ಸಹ ಈ ವಿಚಾರ ಮಾತನಾಡಿದ್ದಾಗಿ ಸಂಸದ ಕೋಟ ತಿಳಿಸಿದರು.