ಕಾಪು ಪುರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಮಾತನಾಡಿದರು. ಪ್ರಮುಖರಾದ ಮೋಹಿನಿ ಶೆಟ್ಟಿ, ನೀಲಕಂಠ ಮೇಸ್ತ, ಕಿರಣ್​ ಆಳ್ವ ಮೊದಲಾದವರಿದ್ದರು. 
ಉಡುಪಿ

ಫುಡ್​ಕೋರ್ಟ್​ಗೆ ಜಮೀನು ಗುರುತು

ಪ್ರಮುಖ ಮುಖ್ಯಾಂಶಗಳು

  • ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಸೂಚನೆ
  • ಕಾಪು ಪುರಸಭೆ ವಿಶೇಷ ಸಾಮಾನ್ಯ ಸಭೆ
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕಾಪು ಪುರಸಭೆ ವ್ಯಾಪ್ತಿಯಲ್ಲಿನ ಬೀದಿಬದಿ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಸಕಲ ಮೂಲಸೌಕರ್ಯಗಳೊಂದಿಗೆ ಫುಡ್​ಕೋರ್ಟ್​ ನಿಮಾರ್ಣಕ್ಕೆ ಸೂಕ್ತ ಸರ್ಕಾರಿ ಜಮೀನು ಗುರುತಿಸುವಂತೆ ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.
ಕಾಪು ಪುರಸಭೆ ವ್ಯಾಪ್ತಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಪುರಸಭೆ ಇಂದಿರಾ ಗಾಂಧಿ ಸಭಾಂಗಣದಲ್ಲಿ ಸೋಮವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಇದರಿಂದ ಬೀದಿಬದಿ ವ್ಯಾಪಾರಕ್ಕೆ ಕಡಿವಾಣ ಹಾಕುವುದರೊಂದಿಗೆ ಪುರಸಭೆಗೂ ಆದಾಯ ಬರಲಿದೆ. ಕೌನ್ಸಿಲ್​ ಈ ಬಗ್ಗೆ ಸೂಕ್ತ ರ್ನಿಣಯ ಕೈಗೊಳ್ಳುವಂತೆ ಶಾಸಕರು ತಿಳಿಸಿದರು.

ಡಿಸಿಗೆ ಮನವಿ:

ಪುರಸಭೆ ವ್ಯಾಪ್ತಿಯಲ್ಲಿ ವ್ಯವಸ್ಥಿತ ಪಾರ್ಕಿಂಗ್​ಗಾಗಿ ಜಿಲ್ಲಾಧಿಕಾರಿ ಅಧಿಸೂಚನೆಗಾಗಿ ಕಾಯಲಾಗುತ್ತಿದೆ. ಅದಕ್ಕೆ ಬೇಕಾದ ಜಾಗದ ಗುರುತು ಸಹಿತ ಚೌಕಟ್ಟುಗಳನ್ನು ರೂಪಿಸಿ ಅಧಿಸೂಚನೆ ಹೊರಡಿಸಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಾಧಿಕಾರಿ ನೀಲಕಂಠ ಮೇಸ್ತ ತಿಳಿಸಿದರು.

ವಾಹನಗಳ ನಿಲುಗಡೆಗೆ ಸೂಕ್ತ ಜಾಗ:

ಕಾಪು ಪೇಟೆ, ಸರ್ವಿಸ್​ ರಸ್ತೆಗಳಲ್ಲಿ ವಾಹನಗಳ ನಿಲುಗಡೆಯಿಂದ ಸಮಸ್ಯೆಗಳಾಗುತ್ತಿವೆ. ದ್ವಿಚಕ್ರ ಸಹಿತ ಇತರ ವಾಹನಗಳ ನಿಲುಗಡೆಗೆ ಸೂಕ್ತ ಜಾಗ ಗುರುತಿಸಿ ವರದಿ ನೀಡುವಂತೆ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.

ಸರ್ವೀಸ್​ ರಸ್ತೆಗಳಲ್ಲಿ ಬಸ್​ ಸಂಚಾರಕ್ಕೆ ಬ್ರೇಕ್​:

ಪುರಸಭೆ ವ್ಯಾಪ್ತಿಯ ಹೆದ್ದಾರಿ ಆಸುಪಾಸಿನ ಸರ್ವೀಸ್​ ರಸ್ತೆಗಳಲ್ಲಿ ಬಸ್​ ಸಂಚಾರದಿಂದ ಅಪಘಾತಗಳಾಗಿ ಸಾವು ನೋವು ತಪ್ಪಿಸುವ ಸಲುವಾಗಿ ಬಸ್​ಗಳು ಕೇವಲ ಹೆದ್ದಾರಿಯಲ್ಲಿಯೇ ಸಂಚರಿಸಲು ಕ್ರಮ ವಹಿಸುವಂತೆ ಸದಸ್ಯರು ಸಾರಿಗೆ ಹಾಗೂ ಪೊಲೀಸ್​ ಇಲಾಖಾಧಿಕಾರಿಗಳನ್ನು ಒತ್ತಾಯಿಸಿದರು.

ಸೂಕ್ತ ತಂಗುದಾಣ ಬೇಡಿಕೆ:

ಉಡುಪಿ ಕಡೆ ಸಂಚರಿಸುವ ವೇಗಧೂತ ಬಸ್​ಗಳ ನಿಲುಗಡೆ ಸ್ಥಳದಲ್ಲಿ ಸೂಕ್ತ ತಂಗುದಾಣ ನಿರ್ಮಿಸಬೇಕು. ಕರ್ಕಶ ಹಾರ್ನ್​ ವಿರುದ್ಧ ಕ್ರಮ ಕೈಗೊಳ್ಳಬೇಕು. ನಿಶಬ್ದ ವಲಯ ಎಂಬ ಫಲಕ ಅಳವಡಿಸುವಂತೆ ಸದಸ್ಯ ಅರುಣ್​ ಶೆಟ್ಟಿ ಪಾದೂರು ಒತ್ತಾಯಿಸಿದರು.

ಕರ್ಕಶ ಹಾರ್ನ್​ಗೆ ಕಡಿವಾಣ

ಹೆದ್ದಾರಿಯಲ್ಲಿ ಬಸ್​ ನಿಲುಗಡೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಅಧಿಸೂಚನೆ ಬಳಿಕ ಕ್ರಮ ಕೈಗೊಳ್ಳುವುದಾಗಿ ಕಾಪು ಠಾಣಾಧಿಕಾರಿ ತೇಜಸ್ವಿ ತಿಳಿಸಿದರು. ಸಾರಿಗೆ ಇಲಾಖೆಯಿಂದ ತಪಾಸಣೆ ನಡೆಸಿ ಬಸ್​ಗಳ ಕರ್ಕಶ ಹಾರ್ನ್​ಗಳನ್ನು ತೆರವು ಮಾಡಿ ದಂಡ ಹಾಕಲಾಗುತ್ತಿದೆ. ಹಾರ್ನ್​ಗೆ 3 ಸಾವಿರ ರೂ. ದಂಡವಿದ್ದರೂ ಬಸ್​ಗಳು ಮತ್ತೆ ಹಾರ್ನ್​ ಅಳವಡಿಸಿ ನಿಯಮ ಉಲ್ಲಂಸುತ್ತಿವೆ ಎಂದು ಮೋಟಾರು ವಾಹನ ನಿರೀಕ್ಷಕರು ಅಸಹಾಯಕತೆ ವ್ಯಕ್ತಪಡಿಸಿದರು. ಕಾಪು ಪ್ರದೇಶದಲ್ಲಿ ಕರ್ಕಶ ವಾರ್ನ್​ ವಿರುದ್ಧ ಕ್ರಮ ವಹಿಸಿ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆಯಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು. ಸರ್ವೀಸ್​ ರಸ್ತೆ ಪ್ರವೇಶ ಹಾಗೂ ನಿರ್ಗಮನ ಸ್ಥಳದಲ್ಲಿ ವೇಗ ತಡೆ ಅಳವಡಿಸಲು ಹೆದ್ದಾರಿ, ಪೊಲೀಸ್​ ಹಾಗೂ ಸಾರಿಗೆ ಇಲಾಖೆ ಸಂಯುಕ್ತವಾಗಿ ಸೇರಿ ಕ್ರಮ ವಹಿಸಬೇಕು ಎಂದು ಶಾಸಕರು ತಿಳಿಸಿದರು.

ತಾಲೂಕು ಆಸ್ಪತ್ರೆಗೆ ಆದ್ಯತೆ

ಕಾಪು ತಾಲೂಕು ಕೇಂದ್ರದಲ್ಲಿಯೇ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆ ನಿಮಾರ್ಣಕ್ಕೆ ಕೌನ್ಸಿಲ್​ ರ್ನಿಣಯ ಕೈಗೊಂಡಿತು. ಈಗಾಗಲೇ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸರ್ಕಾರ ಕಳೆದ ವರ್ಷದ ಬಜೆಟ್​ನಲ್ಲಿ ಸಮುದಾಯ ಆಸ್ಪತ್ರೆಯಾಗಿಸಿ ಘೋಷಣೆ ಮಾಡಿತ್ತು. ಇದೀಗ ಆರ್ಥಿಕ ಸಮಸ್ಯೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬ್ಲಾಕ್​ ಆಸ್ಪತ್ರೆಯನ್ನಾಗಿಸಿ ಸರ್ಕಾರ ಆದೇಶ ಮಾಡಿದೆ ಎಂದು ಶಾಸಕರು ತಿಳಿಸಿದರು. ಹೆದ್ದಾರಿ ಬಳಿಯಲ್ಲಿಯೇ ಇರುವ ಕೇಂದ್ರವನ್ನು ಆದ್ಯತೆಯಲ್ಲಿ ತಾಲೂಕು ಆಸ್ಪತ್ರೆಯನ್ನಾಗಿಸಬೇಕಿದೆ. ಅದಕ್ಕಾಗಿ ಸರ್ಕಾರಕ್ಕೆ ಒತ್ತಡ ತರಲಾಗುವುದು ಎಂದರು.
ಪುರಸಭೆ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷ ಕಿರಣ್​ ಆಳ್ವ ಉಪಸ್ಥಿತರಿದ್ದರು.