ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹೂವಿನಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಉಡುಪಿ: ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಜನ್ಮಸ್ಥಳ ಹೂವಿನಕೆರೆಯಲ್ಲಿ ಮಠಕ್ಕೆ ಸಂಬಂಧಿಸಿದ ಸುಮಾರು 118 ಎಕರೆ ಅರಣ್ಯ ಪ್ರದೇಶದಲ್ಲಿ ಪ್ರಾಣಿ ಪಕ್ಷಿಗಳಿಗಾಗಿ ವಿವಿಧ ಹಣ್ಣಿನ ಗಿಡಗಳು ಹಾಗೂ ಸಾಗುವಾನಿ ಮುಂತಾದ ವೃಕ್ಷಗಳನ್ನು ಬೆಳೆಸಿ ಕೃತಕ ಅರಣ್ಯವನ್ನು ರೂಪಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ತಿಳಿಸಿದರು.
ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆಯ ಮೂಲಕ 1 ಕೋಟಿ ರೂ. ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಹೂವಿನಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಠದ ವತಿಯಿಂದ ನಿರ್ವಹಿಸಲಾಗುತ್ತಿರುವ ಗೋಶಾಲೆಯಲ್ಲಿರುವ 400ಕ್ಕೂ ಹೆಚ್ಚು ವೃದ್ಧ ಗೋವುಗಳಿಗೆ ಸುಂದರ ಹಾಗೂ ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ ಉದ್ದೇಶದಿಂದ ಈ ಜಾಗದಲ್ಲಿ ಕೆರೆ ನಿಮಾರ್ಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ ಇಂಜಿನಿಯರ್ ಶಾಂತರಾಮ್ ಮೊದಲಾದವರು ಉಪಸ್ಥಿತರಿದ್ದರು.