ಆರಿಕ್ಕಾಡಿ ಟೋಲ್ ಗೇಟ್‌ನಲ್ಲಿರುವ ಅಪಾಯಕಾರಿಯಾದ ಹಂಪ್ಸ್, ವಿಭಾಜಕಗಳು. 
ಉಡುಪಿ

ಟೋಲ್ ಗೇಟ್ ಮುಚ್ಚಿದರೂ ತೆರವಾಗದ ಹಂಪ್ಸ್

ಕುಂಬಳೆ: ಕೇಂದ್ರ ಸರ್ಕಾರ ಆರಿಕ್ಕಾಡಿ ಟೋಲ್ ಗೇಟ್‌ನ್ನು ತೀವ್ರ ಹೋರಾಟದ ಬಳಿಕ ತೆಗೆದರೂ ಹಂಪ್‌ಗಳು ಮತ್ತು ವಿಭಾಜಕಗಳನ್ನು ಉಳಿಸಿಕೊಂಡಿರುವುದು ವಾಹನಗಳಿಗೆ ದೊಡ್ಡ ಅಪಾಯವನ್ನುಂಟುಮಾಡುತ್ತಿವೆ ಎಂಬ ದೂರುಗಳು ಕೇಳಿಬರುತ್ತಿದೆ. ವಾಹನಗಳು ಸಂಚರಿಸುವಾಗ ಆಗಾಗ್ಗೆ ಡಿಕ್ಕಿ ಹೊಡೆಯುವುದರಿಂದ ಸಂಪೂರ್ಣ ವಿಲೇವಾರಿಗೊಳಿಸಬೇಕೆಂದು ಪ್ರಯಾಣಿಕರು ಮತ್ತು ವಾಹನ ಮಾಲೀಕರು ಒತ್ತಾಯಿಸಿದ್ದಾರೆ.
ತಲಪ್ಪಾಡಿ ಟೋಲ್ ಗೇಟ್‌ನಿಂದ 21 ಕಿ.ಮೀ. ದೂರದಲ್ಲಿ ಮತ್ತೊಂದು ಟೋಲ್ ಬೂತ್ ಸ್ಥಾಪನೆ ವಿರುದ್ಧ ಭಾರಿ ಸಾರ್ವಜನಿಕ ಪ್ರತಿರೋಧ ವ್ಯಕ್ತವಾಗಿತ್ತು. ಇದರ ಜತೆಗೆ, ಸುಪ್ರೀಂ ಕೋರ್ಟ್ ತೀರ್ಪು ಕೂಡ ವಿರುದ್ಧವಾಗಿರುತ್ತದೆ ಎಂಬ ಊಹೆ ಮೇಲೆ ರಾ.ಹೆ.ಪ್ರಾಧಿಕಾರ ಆರಿಕ್ಕಾಡಿ ಟೋಲ್‌ಗೇಟ್‌ನ್ನು ಮುಚ್ಚಲು ನಿರ್ಧರಿಸಿತು. ಅದರ ಕಾರ್ಯಾಚರಣೆ ಕೇವಲ 21 ದಿನಗಳಲ್ಲಿ ಮುಚ್ಚಲ್ಪಟ್ಟಿತು. ರಾ.ಹೆ. ಪ್ರಾಧಿಕಾರ ಟೋಲ್ ಬೂತ್‌ನಿಂದ, ಪ್ರಯಾಣಿಕರಿಂದ ಅಷ್ಟು ದಿನಗಳಲ್ಲಿ 2.75 ಕೋಟಿ ರೂ. ಸಂಗ್ರಹಿಸಿತ್ತು. ಮುಚ್ಚಿದ ಬಳಿಕ ಟೋಲ್ ಗೇಟ್‌ನ 70 ಪ್ರತಿಶತ ನಿರ್ಮಾಣ ಸಾಮಗ್ರಿ ಇಲ್ಲಿಂದ ಸ್ಥಳಾಂತರಿಸಲಾಗಿದೆ.
ಆದಾಗ್ಯೂ, ಉಳಿದ ಹಂಪ್‌ಗಳು ಮತ್ತು ವಿಭಾಜಕಗಳನ್ನು ತೆಗೆದುಹಾಕದೆ ಪ್ರಯಾಣಿಕರು ಮತ್ತು ವಾಹನಗಳಿಗೆ ಅಪಾಯದ ಬಲೆಯಾಗಿ ಮಾರ್ಪಟ್ಟಿದೆ. ರಾತ್ರಿಯಲ್ಲಿ ಬೆಳಕಿನ ಕೊರತೆಯಿಂದ ವಾಹನಗಳು ವಿಭಾಜಕಗಳಿಗೆ ಡಿಕ್ಕಿ ಹೊಡೆಯುವುದು ಹೆಚ್ಚಾಗಿದ್ದು, ಇದರಿಂದ ಅನೇಕ ವಾಹನ ಹಾನಿಗೊಳಗಾಗುತ್ತವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪಘಾತ ತಪ್ಪಿಸಲು ಟೋಲ್ ಗೇಟ್‌ನ ಉಳಿದ ಭಾಗಗಳನ್ನು ತ್ವರಿತವಾಗಿ ಕೆಡವಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಲಭಿಸದಿದ್ದರೆ ಆರಿಕ್ಕಾಡಿ ಟೋಲ್ ಗೇಟ್ ಮತ್ತೊಂದು ಮುಷ್ಕರಕ್ಕೆ ವೇದಿಕೆಯಾಗಲಿದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ಹೋರಾಟ ಸಮಿತಿ ಪ್ರಬಲ ಪ್ರತಿಭಟನೆ ಫಲವಾಗಿ ಟೋಲ್ ಗೇಟ್ ನಿಲುಗಡೆಗೊಂಡಿತು. ಆದರೂ ಆ ಕರಾಳತೆ ಪ್ರತಿಬಿಂಬಿಸಲು ಹಲವು ವಸ್ತುಗಳು ಈಗಲೂ ಅಲ್ಲೇ ಉಳಿದುಕೊಂಡಿದೆ. ಹಂಪ್ಸ್, ಮಾಹಿತಿ ಫಲಕ ಇತ್ಯಾದಿಗಳು ವಾಹನ ಚಾಲಕರಿಗೆ ಗೊಂದಲ, ಸಮಸ್ಯೆ ಸೃಷ್ಟಿಸುತ್ತಿದ್ದು, ಅಧಿಕೃತರು ಮಳೆಗಾಲದ ಮೊದಲು ಪರಿಹಾರ ಕಲ್ಪಿಸದಿದ್ದರೆ ಮತ್ತೊಂದು ಪ್ರತಿಭಟನೆಗೆ ಇಳಿಯುವುದು ಖಂಡಿತ. ಸಂಬಂಧಪಟ್ಟ ಅಧಿಕೃತರು ಇನ್ನಾದರೂ ಜನಪರರಾಗಬೇಕು.

— ಆರೀಫ್ ಆರಿಕ್ಕಾಡಿ, ಟೋಲ್ ವಿರೋಧಿ ಕ್ರಿಯಾ ಸಮಿತಿ ಕಾರ್ಯದರ್ಶಿ