ಪಾಲಡ್ಕದಲ್ಲಿ ಜಾನ್ ಫರ್ನಾಂಡಿಸ್‌ಗೆ ಅವರಿಗೆ ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ನೇತೃತ್ವದಲ್ಲಿ ನಿರಂತರವಾಗಿ ನೆರವು ನೀಡಲಾಗುತ್ತಿದೆ.  
ಉಡುಪಿ

ಒಂಟಿ ಜೀವಕ್ಕೆ ಆಸರೆಯಾದ ಮಾನವೀಯತೆ

ವಿಜಯವಾಣಿ ಸುದ್ದಜಾಲ ಮೂಡುಬಿದಿರೆ
ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ಜೋಡಿಕಟ್ಟೆಯಲ್ಲಿ ಎರಡು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಅಪರೂಪದ ಸೇವಾ ಕಾರ್ಯವೊಂದು ಏಕಾಂಗಿಯಾಗಿ ಬದುಕು ಸಾಗಿಸುತ್ತಿರುವ ಜಾನ್ ಫರ್ನಾಂಡಿಸ್ ಜೀವನಕ್ಕೆ ಆಸರೆಯಾಗಿದೆ.
ಮಾತನಾಡಲು ಹಾಗೂ ಕೇಳಲು ಅಸಮರ್ಥರಾಗಿರುವ ಜಾನ್ ಫರ್ನಾಂಡಿಸ್ ಹಳೇ ಮನೆಯೊಂದರಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಸ್ಪೂರ್ತಿ ಶಾಲೆಯ ಸಂಸ್ಥಾಪಕ ಪ್ರಕಾಶ್ ಜೆ.ಶೆಟ್ಟಿಗಾರ್ ಅವರು ಜಾನ್ ಅವರ ಸಂಕಷ್ಟದ ಪರಿಸ್ಥಿತಿಯನ್ನು ತಿಳಿಸಿದಾಗ, ‘ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್’ ತಂಡ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಿತ್ತು. ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಜಾನ್ ಅವರಿಗೆ ತಂಡವು ಆರಂಭಿಕ ಆರು ತಿಂಗಳು ದಿನಸಿ ಸಾಮಗ್ರಿಗಳನ್ನು ಪೂರೈಸಿ ನೆರವಾಯಿತು.
ಜಾನ್ ಅವರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅವರ ಮನೆಯ ಸಮೀಪದ ಬಾಬು ಪೂಜಾರಿ ಕುಟುಂಬವನ್ನು ಸಂಪರ್ಕಿಸಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಬಾಬು ಪೂಜಾರಿ ಕುಟುಂಬವು ಕಳೆದ ಒಂದೂವರೆ ವರ್ಷಗಳಿಂದ ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಜಾನ್ ಅವರಿಗೆ ಪ್ರತಿದಿನದ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟ, ಸಂಜೆಯ ಟೀ-ಕಾಫಿ ಒದಗಿಸುವ ಮೂಲಕ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದೆ. ಇದಕ್ಕೆ ಪೂರಕವಾಗಿ ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ತಂಡವು ಪ್ರತಿ ತಿಂಗಳು ದಿನಸಿ ಸಾಮಗ್ರಿಗಳನ್ನು ಒದಗಿಸುತ್ತಿದೆ. ಜಾನ್ ಅವರ ಮನೆಗೆ ವಾಹನ ಸಂಚಾರದ ವ್ಯವಸ್ಥೆ ಇಲ್ಲದ ಕಾರಣ, ಸುಮಾರು ಒಂದು ಕಿ.ಮೀ. ದೂರ ಕಾಲ್ನಡಿಗೆಯಲ್ಲೇ ಸಾಗಬೇಕಿದ್ದರೂ, ‘ಲಯನ್ಸ್ ಕ್ಲಬ್ ಅಲಂಗಾರ್’ ಅಧ್ಯಕ್ಷ ಅಮಿತ್ ಅವರು ಸ್ವತಃ ಸಾಮಗ್ರಿಗಳನ್ನು ಹೊತ್ತುಕೊಂಡು ಹೋಗಿ ತಲುಪಿಸುವ ಮೂಲಕ ಶ್ಲಾಘನೀಯ ಸೇವೆ ಸಲ್ಲಿಸುತ್ತಿದ್ದಾರೆ.

ಸಮಾಜದಲ್ಲಿ ಮಾನವೀಯ ಮೌಲ್ಯಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಜಾನ್ ಫರ್ನಾಂಡಿಸ್ ಅವರ ಬದುಕಿಗೆ ಆಸರೆಯಾಗಿರುವ ಈ ಸೇವಾ ಕಾರ್ಯವೇ ಸಾಕ್ಷಿ. ಈ ತಂಡಗಳ ಸಹಕಾರ ಇತರರಿಗೂ ಮಾದರಿಯಾಗಿದೆ.

— ಜಗದೀಶ್ ಪೂಜಾರಿ, ಸ್ಥಳೀಯ ನಿವಾಸಿ

ಕಷ್ಟದಲ್ಲಿರುವವರಿಗೆ ನೆರವಾಗುವುದು ನಮ್ಮ ಮಾನವೀಯ ಕರ್ತವ್ಯ. ಜಾನ್ ಅವರ ಸ್ಥಿತಿ ಕಂಡು, ಅವರಿಗೆ ಅಗತ್ಯವಿರುವವರೆಗೂ ಬೆಂಬಲ ಮುಂದುವರಿಸಲು ನಿರ್ಧರಿಸಿದ್ದೇವೆ. ಯಾವುದೇ ಪ್ರಚಾರವಿಲ್ಲದೆ ನಡೆಯುತ್ತಿರುವ ಈ ಸೇವೆಗೆ ಕೈಜೋಡಿಸಿರುವ ದಾನಿಗಳಿಗೆ ನಾವು ಕೃತಜ್ಞರು.

— ಸುನೀಲ್ ಮೆಂಡೋನ್ಸ ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ಸಂಸ್ಥಾಪಕ