ಉಡುಪಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಾರ್ವಜನಿಕರಿಂದ ಟಿ.ಶ್ಯಾಮ್ ಭಟ್ ಅಹವಾಲು ಸ್ವೀಕರಿಸಿದರು. ಎಸ್.ಕೆ. ವಂಟಿಗೋಡಿ, ಸ್ವರೂಪಾ ಟಿ.ಕೆ. ಪ್ರತೀಕ್ ಬಾಯಲ್ ಇದ್ದರು.
* ಅಧಿಕಾರಿಗಳಿಗೆ ಟಿ.ಶ್ಯಾಮ್ ಭಟ್ ಸೂಚನೆ
* ಉಡುಪಿಯಲ್ಲಿ ಅಹವಾಲು ಸ್ವೀಕಾರ ಸಭೆ
ಉಡುಪಿ: ನಾಗರಿಕರಿಗೆ ನೀಡಿರುವ ಮೂಲ ಹಕ್ಕುಗಳೇ ಮಾನವ ಹಕ್ಕುಗಳಾಗಿದ್ದು ಅವುಗಳ ಸಂರಕ್ಷಣೆ ಕಾರ್ಯ ಸರ್ಕಾರಿ ಅಧಿಕಾರಿಗಳ ಕರ್ತವ್ಯ. ಅವುಗಳ ಉಲ್ಲಂಘನೆಯಾದಲ್ಲಿ ಸಾರ್ವಜನಿಕರು ಆಯೋಗಕ್ಕೆ ದೂರು ನೀಡಬಹುದು. ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿ ಇಲಾಖಾ ಅಧಿಕಾರಿಗಳ ಮುಂದೆ ಅಹವಾಲು ತಂದಾಗ ಅವರೊಂದಿಗೆ ಸೌಜನ್ಯ ಹಾಗೂ ಸಂಯಮದೊಂದಿಗೆ ನಡೆದುಕೊಂಡು ನಿಯಮಾನುಸಾರ ಬಗೆಹರಿಸಬೇಕು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಸೂಚಿಸಿದರು.
ಉಡುಪಿಯ ಜಿಪಂ ಕಚೇರಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ವತಿಯಿಂದ ಗುರುವಾರ (ಫೆ.19) ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಕರಣಗಳ ವಿಲೇವಾರಿ, ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ದೂರುಗಳ ವಿಚಾರಣೆ ಕುರಿತ ಸಭೆಯಲ್ಲಿ ಮಾತನಾಡಿದರು.
ಎಲ್ಲರಿಗೂ ಇದೆ ಪ್ರಶ್ನಿಸುವ ಹಕ್ಕು
ಆಯೋಗದ ಸದಸ್ಯ ಎಸ್.ಕೆ. ವಂಟಿಗೋಡಿ ಮಾತನಾಡಿ, ಪ್ರತಿಯೊಬ್ಬರೂ ಹುಟ್ಟಿನಿಂದಲೇ ನೈಸರ್ಗಿಕವಾಗಿ ಮಾನವ ಹಕ್ಕು ಪಡೆದಿರುತ್ತಾರೆ. ಸಮಾಜದಲ್ಲಿ ಎಲ್ಲರಿಗೂ ಗೌರವಯುತವಾಗಿ ಬದುಕುವ ಹಕ್ಕಿದೆ. ಅವುಗಳು ಉಲ್ಲಂಘನೆಯಾದರೆ ಪ್ರಶ್ನಿಸುವ ಹಕ್ಕೂ ಸಹ ಇದೆ. ಸರ್ಕಾರ ಜಾರಿಗೆ ತರುವ ಜನಪರ ಯೋಜನೆಗಳು ಅರ್ಹರಿಗೆ ತಲುಪುವಂತಾಗಬೇಕು. ಕಾನೂನಿನಡಿ ಸೇವೆಗಳನ್ನು ಪಡೆಯಲು ಎಲ್ಲರೂ ಹಕ್ಕು ಹೊಂದಿದ್ದು ಅವುಗಳನ್ನು ನೀಡಲು ವಿಳಂಬ ಮಾಡುವುದೂ ಸಹ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದರು.
ಸಿಬ್ಬಂದಿ ಕೊರತೆ
ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿ, ಜಿಲ್ಲೆಯು ಭೌಗೋಳಿಕವಾಗಿ ಇನ್ನಿತರ ಜಿಲ್ಲೆಗಳಿಗಿಂತ ಭಿನ್ನವಾಗಿದೆ. ಸರ್ಕಾರದ ಕೆಲವು ಯೋಜನೆ, ಕಾರ್ಯಕ್ರಮ ಹಾಗೂ ನಿಯಮಾವಳಿ ಅನುಷ್ಠಾನಕ್ಕೆ ಕೆಲವೊಂದು ಮಾರ್ಪಾಡು, ವಿನಾಯಿತಿ ನೀಡಬೇಕಿದೆ. ಜಿಲ್ಲೆಯಲ್ಲಿ ಹೆಚ್ಚಿನ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಈ ಹಿಂದೆ 3 ತಾಲೂಕು ಇದ್ದ ಉಡುಪಿ ಜಿಲ್ಲೆಯು ಪ್ರಸ್ತುತ 7 ತಾಲೂಕಾಗಿ ಮಾರ್ಪಟ್ಟಿದ್ದರೂ ಸಹ ಅಧಿಕಾರಿ ಹಾಗೂ ಸಿಬ್ಬಂದಿ ಉತ್ತಮವಾಗಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಸಭೆಯಲ್ಲಿ ಜಿಪಂ ಸಿಇಒ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಂ ಶಂಕರ್, ಡಿಎಫ್ಒ ರುದ್ರೇನ್ ಪಿ., ವೈಲ್ಡ್ ಲೈಫ್ ಡಿಎಫ್ಒ ಶಿವರಾಂ ಎಂ. ಬಾಬು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸೀಲ್ದಾರರು ಉಪಸ್ಥಿತರಿದ್ದರು.
ದೂರುಗಳಿಗೆ ಸಂಬಂಧಿಸಿ ವರದಿ ನೀಡಲು ಇಲಾಖೆಗೆ ನೋಟಿಸ್ ನೀಡುತ್ತೇವೆ. ಅವುಗಳನ್ನು ಸಕಾಲದಲ್ಲಿ ನೀಡಬೇಕು. ಅವುಗಳನ್ನು ಪರಿಶೀಲಿಸಿದಾಗ ತಪ್ಪು ಮಾಡಿರುವುದು ಕಂಡುಬಂದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಕೆಲವೊಂದು ಗಂಭೀರ ಪ್ರಕರಣಗಳಲ್ಲಿ ಪರಿಹಾರ ಒದಗಿಸಲೂ ಸಹ ಶಿಫಾರಸು ಮಾಡಲಾಗುವುದು.