ಉಡುಪಿಯಲ್ಲಿ ಆಯೋಜಿಸಿದ್ದ ವಾದಿರಾಜ ಕನಕದಾಸ ಸಂಗೀತೋತ್ಸವ ಕಾರ್ಯಕ್ರಮವನ್ನು ಡಾ. ಬಿ.ಎ. ವಿವೇಕ ರೈ ಉದ್ಘಾಟಸಿದರು. ಡಾ. ರಮೇಶ್​ ಟಿ.ಎಸ್​., ಡಾ. ಬಿ.ಜಗದೀಶ್​ ಶೆಟ್ಟಿ, ಉಮಾಶಂಕರಿ ಇದ್ದರು. 
ಉಡುಪಿ

ಸಾಹಿತ್ಯದ ಓದಿನಿಂದ ಬದುಕಿನಲ್ಲಿ ತಾಳ್ಮೆ

* ಹಿರಿಯ ವಿದ್ವಾಂಸ ಡಾ. ಬಿ.ಎ. ವಿವೇಕ ರೈ ಅನಿಸಿಕೆ

 * ವಾದಿರಾಜ ಕನಕದಾಸ ಸಂಗೀತೋತ್ಸವ ಉದ್ಘಾಟನೆ

ಉಡುಪಿ: ಉಡುಪಿಯು ಬಹಳ ಪವಿತ್ರ ಸ್ಥಳವಾಗಿದ್ದು ತತ್ವಜ್ಞಾನಿಗಳು, ಕವಿಗಳು, ಯತಿಗಳು ಇದ್ದಂತಹ ಪುಣ್ಯದ ನಾಡು. ವಿದ್ವತ್ತಿನ ಜಿಜ್ಞಾಸೆಯ ಕೇಂದ್ರವೂ ಹೌದು. ಶ್ರೀ ವಾದಿರಾಜರು ಮಧ್ವಾಚಾರ್ಯರ ಹಲವು ಚಿಂತನೆಗಳನ್ನು ಕೃತಿರೂಪದಲ್ಲಿ ಕನ್ನಡ ಮತ್ತು ತುಳುವಿನಲ್ಲಿ ರಚಿಸಿದ್ದಾರೆ. ವಾದಿರಾಜರು ಮತ್ತು ಕನಕದಾಸರು ಹಲವು ಬಾರಿ ಮುಖಾಮುಖಿಯಾಗಿದ್ದು, ಚಿಂತನೆಗಳಲ್ಲಿ ಒಂದಾಗಿದ್ದಾರೆ. ಅವರಿಬ್ಬರ ಸಾಹಿತ್ಯ ಕೃತಿಗಳು ಕೇವಲ ಭಕ್ತಿಯ ಪ್ರತಿಕವಾಗಿರದೆ ಬದುಕಿನಲ್ಲಿ ತಾಳ್ಮೆ ತಂದುಕೊಡುತ್ತದೆ ಎಂದು ಹಿರಿಯ ವಿದ್ವಾಂಸ ಡಾ. ಬಿ.ಎ. ವಿವೇಕ ರೈ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕದಾಸ ಅಧ್ಯಯನ ಸಂಶೋಧನಾ ಪೀಠ ಉಡುಪಿ, ಮಣಿಪಾಲ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​, ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ.) ಪರ್ಕಳ ಸಹಕಾರದಲ್ಲಿ ಭಾನುವಾರ (ಡಿ.28) ಆಯೋಜಿಸಿದ್ದ 47ನೆಯ ವಾದಿರಾಜ ಕನಕದಾಸ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ರಮೇಶ್​ ಟಿ.ಎಸ್​. ವಾದಿರಾಜ ಕನಕದಾಸರ ಕುರಿತು ಉಪನ್ಯಾಸ ನೀಡಿದರು. ಕನಕದಾಸ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್​ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕನಕದಾಸ ಸಾಹಿತ್ಯ ಮಂಥನ ಕೃತಿ ಬಿಡುಗಡೆ ಮಾಡಲಾಯಿತು.
ಸರಿಗಮ ಭಾರತಿ ಸಂಗೀತ ವಿದ್ಯಾಲಯ ಪರ್ಕಳದ ನಿರ್ದೇಶಕಿ ಉಮಾಶಂಕರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಡಾ. ಅರುಣಕುಮಾರ್​ ಎಸ್​.ಆರ್​. ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ವಿಭಾ ಎಸ್​. ನಾಯಕ್​ ಮಂಗಳೂರು ಬಳಗದವರಿಂದ ಹಿಂದುಸ್ಥಾನಿ ಸಂಗೀತ ಕಛೇರಿ ನಡೆಯಿತು.

ಸ್ಪರ್ಧಾ ವಿಜೇತರಿಂದ ಗಾಯನ

ವಾದಿರಾಜ ಕನಕದಾಸ ಸಂಗೀತೋತ್ಸವದ ಪ್ರಯುಕ್ತ ನಡೆಸಿದ್ದ ಗಾಯನ ಸ್ಪರ್ಧಾ ವಿಜೇತರಿಂದ ಗಾಯನ ಪ್ರಸ್ತುತಿ, ಸಮಾರೋಪ ಹಾಗೂ ಬಹುಮಾನ ವಿತರಣೆ ನಡೆಯಿತು. ಎಂಜಿಎಂ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ ಉಪಸ್ಥಿತರಿದ್ದರು. ಬಳಿಕ ಉಷಾ ರಾಮಕೃಷ್ಣ ಭಟ್​ ಬೆಂಗಳೂರು ಮತ್ತು ಬಳಗದವರಿಂದ ಕರ್ನಾಟಕ ಸಂಗೀತ ಕಛೇರಿ ನಡೆಯಿತು.
"

ಶಾಸ್ತ್ರೀಯ ಸಂಗೀತವು ವಾದಿರಾಜ ಕನಕರ ರಚನೆಗಳನ್ನು ಜನರಿಗೆ ತಲುಪಿಸಿದೆ. ವಾದಿರಾಜರು ಶ್ರೀಕೃಷ್ಣನ ಪೂಜೆಯಲ್ಲಿ ಪರ್ಯಾಯದ ಚಿಂತನೆ ಆರಂಭಿಸಿದ್ದು ಪ್ರಜಾಪ್ರಭುತ್ವದ ಬೀಜಾಂಕುರಕ್ಕೆ ನಾಂದಿಯಾಯಿತು. ಈ ಬಗೆಯ ಸುಧಾರಣೆ ಆ ಕಾಲದಲ್ಲಿ ಮಾಡಿದ್ದು ಅವರ ದೊಡ್ಡ ಕೊಡುಗೆಯಾಗಿದೆ. ಕನಕರ ಭಕ್ತಿಮಾರ್ಗದಲ್ಲಿ ದಟ್ಟ ವೈಚಾರಿಕತೆಯ ಚೈತನ್ಯ ಅಡಕವಾಗಿದೆ.