ಬ್ರಹ್ಮಾವರ ತಾಲೂಕಲ್ಲಿ 14 ವರ್ಷದ ಬಾಲಕಿಯರಿಗೆ ಎಚ್.ಪಿ.ವಿ. ಲಸಿಕೆ ನೀಡಲಾಯಿತು.
ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ
ದೇಶಾದ್ಯಂತ 14 ವರ್ಷದ ಬಾಲಕಿಯರಿಗೆ ಗರ್ಭಕೋಶದ ಕ್ಯಾನ್ಸರ್ ಮತ್ತು ಕಂಠದ ಸೋಂಕನ್ನು ತಡೆಗಟ್ಟುವ ಎಚ್.ಪಿ.ವಿ. ಲಸಿಕೆಯನ್ನು ನೀಡಲಾಗುತ್ತಿದ್ದು, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 2026 ಏಪ್ರಿಲ್ ತಿಂಗಳಿಂದ ಜೂನ್ ತನಕ ಮಾತ್ರ ಇದ್ದ ಅವಕಾಶವನ್ನು ಮತ್ತೆ 3 ತಿಂಗಳು ವಿಸ್ತರಿಸಲಾಗಿದೆ.
ಬ್ರಹ್ಮಾವರ ತಾಲೂಕಿನ ಬಾರಕೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬಾರಕೂರು ನ್ಯಾಷನಲ್ ಪ್ರೌಢ ಶಾಲೆ, ಹೇರಾಡಿ ವಿದ್ಯೇಶ ವಿದ್ಯಾಮಾನ್ಯ ಪ್ರೌಢ ಶಾಲೆ ಮತ್ತು ಕೂರಾಡಿ ಬಿಎಂಎಂ ಪ್ರೌಢಶಾಲೆಯಲ್ಲಿ ಬಾರಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ರೋಹಿಣಿ ಮತ್ತು ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರ ತಂಡದಿಂದ ವಿದ್ಯಾರ್ಥಿಗಳಿಗೆ ಮಂಗಳವಾರ ಲಸಿಕೆ ನೀಡಲಾಯಿತು.
ಎಲ್ಲ ಪ್ರೌಢಶಾಲೆಯಲ್ಲಿ 14 ವರ್ಷದ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಪ್ರತಿ, ದೂರವಾಣಿ ಸಂಖ್ಯೆ ಪಡೆದು 64 ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಲಭ್ಯ ಇರುವ ಈ ಲಸಿಕೆಗೆ 4 ಸಾವಿರ ರೂ. ವೆಚ್ಚ ಇದ್ದು, ಸರ್ಕಾರ ಉಚಿತವಾಗಿ ನೀಡುವುದರೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆ.
ಉಡುಪಿ ಜಿಲ್ಲೆಯಲ್ಲಿ 61 ಪ್ರಾಥಮಿಕ ಆರೋಗ್ಯ ಕೇಂದ್ರ, 2 ಅರ್ಬನ್ ಪ್ರಾಥಮಿಕ ಆರೋಗ್ಯ ಕೇಂದ್ರ, 6 ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಟ್ಟು 5,054ರಲ್ಲಿ ಉಡುಪಿ ತಾಲೂಕಿನಲ್ಲಿ 2,345, ಕುಂದಾಪುರದಲ್ಲಿ 1,979 ಹಾಗೂ ಕಾರ್ಕಳದಲ್ಲಿ 730 ಮಂದಿ 14 ವರ್ಷದ ಬಾಲಕಿಯರಿಗೆ ಲಸಿಕೆ ನೀಡಲಾಗಿದೆ. ಇನ್ನು 2 ತಿಂಗಳಿನಲ್ಲಿ 14 ವರ್ಷದ ಮಕ್ಕಳು ಎಷ್ಟು ಮಂದಿ ಇದ್ದಾರೆ ಎಂದು ಮಾಹಿತಿ ಪಡೆದು ಅವರಿಗೆ ಲಸಿಕೆ ನೀಡಲಾಗುತ್ತಿದೆ.
— ಡಾ.ಜೋಸ್ನಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ, ಉಡುಪಿ
ಭಾರತ ಸರ್ಕಾರ ಕೆಲವು ವರ್ಷಗಳ ಹಿಂದೆಯೇ ಈ ಲಸಿಕೆಯನ್ನು ಬೇರೆ ಬೇರೆ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತಂದಿದೆ. ಕರ್ನಾಟಕದಲ್ಲಿ ಈ ವರ್ಷ ಏಪ್ರಿಲ್ ತಿಂಗಳಲ್ಲಿ ಆರಂಭಗೊಂಡು 3 ತಿಂಗಳು ಅವಧಿ ನೀಡಿದ್ದು, ಇನ್ನೂ 3 ತಿಂಗಳು ಅವಧಿ ವಿಸ್ತರಿಸಿದ ಕಾರಣ ಪುನಃ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಈ ಲಸಿಕೆ ಗರ್ಭಕೋಶದ ಕ್ಯಾನ್ಸರ್, ಗರ್ಭಕೋಶದ ಕಂಠಕ್ಕೆ ಬರುವ ಸೋಂಕು ತಡೆಗಟ್ಟಲು ಸಹಕಾರಿಯಾಗಿರುವ ಕಾರಣ ಅದನ್ನು 14 ವರ್ಷದ ಬಾಲಕಿಯರಿಗೆ ಮಾತ್ರ ನೀಡಲಾಗುತ್ತದೆ. ಅದರ ಕುರಿತು ಕೆಲವರಲ್ಲಿ ಅಸಡ್ಡೆ ಮತ್ತು ಆಲಸ್ಯ ಇರುವವರನ್ನು ಮನವೊಲಿಸಿ ಲಸಿಕೆ ನೀಡಲಾಗುತ್ತದೆ.
— ಡಾ.ರೋಹಿಣಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಾರಕೂರು