ಉಡುಪಿ: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 2ನೇ ಮುಖ್ಯಮಂತ್ರಿಯಾಗಿ ಡಿಕೆಶಿ ನೇಮಕವಾಗಿದ್ದಾರೆ. ಕಳೆದ ಮೂರುಕಾಲು ವರ್ಷ ಸಿಎಂ ಆಗಿದ್ದ ಅವರ 1ನೇ ಸಿಎಂ ಸಿದ್ದರಾಮಯ್ಯ ಅವರು ಕೇವಲ ಐದು ಗ್ಯಾರಂಟಿ ಯೋಜನೆಯನ್ನಷ್ಟೇ ಮುಂದಿಟ್ಟುಕೊಂಡು ಸಮ್ಮೇಳನ ನಡೆಸಿ ರಾಜ್ಯದ ಅಭಿವೃದ್ಧಿ ಕಡೆಗಣಿಸಿದರು. ಈಗಿನ 2ನೇ ಸಿಎಂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ನಡೆಸಿ, ಉಡುಪಿ ಮತ್ತು ದಕ್ಷಿಣ ಕನ್ನಡಕ್ಕೆ 32 ಸಾವಿರ ಕೋಟಿ ರೂ. ಕಾರ್ಯಕ್ರಮ ಘೋಷಿಸಿದ್ದರು. ನಾನಾಗ ಕರಾವಳಿ ಜಿಲ್ಲೆಗಳ ಸಮಸ್ಯೆಗೆ ಮೋಕ್ಷ ಸಿಗಬಹುದು ಎಂಬ ಆಶಾಭಾವನೆ ಹೊಂದಿದ್ದೆ. ಆದರೆ, 3 ತಿಂಗಳು ಕಳೆದರೂ ಎಷ್ಟು ಕಾರ್ಯಕ್ರಮ ಅನುಷ್ಠಾನವಾಗಿವೆ ಎನ್ನುವುದು ಯಾರಿಗೂ ತಿಳಿದಿಲ್ಲ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.
ಉಡುಪಿಯ ಪ್ರವಾಸಿ ಮಂದಿರದಲ್ಲಿ ಭಾನುವಾರ (ನ.29) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಿನ ಮುಖ್ಯಮಂತ್ರಿಗೆ ಭೂಮಿಯ ವ್ಯಾಮೋಹ ಬೆಂಗಳೂರಿನ ಸುತ್ತಮುತ್ತಲಿನಲ್ಲಿ ಮಾತ್ರ ಇದೆಯೆಂದು ಭಾವಿಸಿದ್ದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಭೂಮಿಯ ಬಗ್ಗೆಯೂ ಅವರಿಗೆ ವ್ಯಾಮೋಹವಿದೆ ಎಂದು ನಮ್ಮ ಸ್ನೇಹಿತರು, ಸ್ಥಳೀಯರು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
350 ಕೋಟಿ ರೂ. ಹೊರೆಯೇ?
ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ 15 ಸಾವಿರ ರೂ. ಗೌರವಧನ ನೀಡಬೇಕೆಂದು ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ತಮ್ಮ ಸಣ್ಣ ಮಕ್ಕಳೊಂದಿಗೆ ಫ್ರೀಡಂ ಪಾರ್ಕ್ನಲ್ಲಿ 15 ದಿನದಿಂದ ಧರಣಿ ನಡೆಸುತ್ತಿದ್ದಾರೆ. ಅವರೊಂದಿಗೆ ಮಾತನಾಡಿ ಮನವೊಲಿಸುವ ಕನಿಷ್ಠ ಸೌಜನ್ಯವೂ ಮುಖ್ಯಮಂತ್ರಿ ಹಾಗೂ ಅವರ ಮಂತ್ರಿಗಳಿಗಿಲ್ಲ. ನುಡಿದಂತೆ ನಡೆದಿದ್ದೇವೆ ಎಂದು ನಿತ್ಯ ಭಜನೆ ಮಾಡುವ ಇವರು ಈಗ ಕೇಂದ್ರದಿಂದ ಹಣ ಕೊಡಿಸಲಿ ಎಂದು ಜಾರಿಕೊಳ್ಳುವುದೇಕೆ? ಭಾರತ್ ಜೋಡೋ ಹೆಸರಿನಲ್ಲಿ ತೆರಿಗೆದಾರರ 1 ಸಾವಿರ ಕೋಟಿ ರೂ. ಹಣವನ್ನು ಕಾರ್ಯಕರ್ತರಿಗೆ ಹಂಚುವ ಸರ್ಕಾರಕ್ಕೆ ರಾಜ್ಯದ 41 ಸಾವಿರ ಆಶಾ ಕಾರ್ಯಕರ್ತರಿಗೆ ತಲಾ 5 ಸಾವಿರ ರೂ. ನೀಡಲು ಬೇಕಾಗುವ ಕೇವಲ 350 ಕೋಟಿ ರೂ. (4.75 ಲಕ್ಷ ಕೋಟಿ ರೂ. ಬಜೆಟ್ನಲ್ಲಿ) ಹೊರೆಯೇ ಎಂದು ಪ್ರಶ್ನಿಸಿದರು.
ಬರ ಪರಿಹಾರದಲ್ಲೂ ವೈಫಲ್ಯ
ಐದು ಗ್ಯಾರಂಟಿ ಯೋಜನೆಗಾಗಿ ಜನರ ಮೇಲೆ ತೆರಿಗೆ ಹೊರೆ ಹೇರಿರುವ ಸರ್ಕಾರ 2026&-27ನೇ ಸಾಲಿಗೆ 1.32 ಲಕ್ಷ ಕೋಟಿ ರೂ. ಸಾಲ ಮಾಡಲು ಹೊರಟಿದೆ. ಬರಗಾಲದ ಪರಿಹಾರವಾಗಿ 2,500 ರೂ. ಘೋಷಿಸಿ ಕೇವಲ 500, 1 ಸಾವಿರ ರೂ. ನೀಡಿದ್ದಾರೆ. ಗುತ್ತಿಗೆದಾರರ ಹಳೆಯ ಬಿಲ್ ಪಾವತಿಸಲಾಗದವರು ಹಳ್ಳಿ ರಸ್ತೆಗಳಿಗೆ 16 ಸಾವಿರ ಕೋಟಿ ರೂ. ಘೋಷಿಸಿದ್ದಾರೆ. ಎಲ್ಲಿದೆ ನಿಮ್ಮ ಬಳಿ ದುಡ್ಡು? ಹಿಂದಿನ ಸರ್ಕಾರದ ಅವಧಿಯಲ್ಲಿ ಮುಗಿದ ಬೆಂಗಳೂರಿನ ವಿವಿಧ ಕಾಮಗಾರಿಗಳಿಗೆ ಮತ್ತೆ ಟೇಪ್ ಕಟ್ ಮಾಡಿ ಪ್ರಚಾರ ಪಡೆಯುತ್ತಿದ್ದೀರಿ ಎಂದರು.
ಕೆಪಿಎಸ್ಸಿ ಅಕ್ರಮ ತನಿಖೆಗೂ ಹಿಂದೇಟು
ಕೆಪಿಎಸ್ಸಿಯಲ್ಲಿ ಕೇವಲ ಪಶು ವೈದ್ಯಾಧಿಕಾರಿಗಳ ನೇಮಕಾತಿಯಷ್ಟೇ ಅಲ್ಲದೆ, ಕಳೆದ 3-4 ವರ್ಷದಲ್ಲಿ ಹಲವು ಇಲಾಖೆಗಳಲ್ಲಿ ಅಕ್ರಮ ನಡೆದಿದೆ. ಈ ಕುರಿತು ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದ್ದು, ಇ.ಡಿ. ಕೂಡ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದೆ. ಆದರೂ ಪ್ರಕರಣದ ತನಿಖೆಯನ್ನು ಎಸ್ಐಟಿಗೆ ವಹಿಸುವ ನೈತಿಕತೆ ಹಾಗೂ ಧೈರ್ಯ ಈ ಸರ್ಕಾರಕ್ಕಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ನಲ್ಲಿ ಹಲವು ಒಡಕು
ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಬಗ್ಗೆ ಪ್ರಶ್ನಿಸಿದರೆ ಸಿದ್ದರಾಮಯ್ಯನವರು 'ಇದು ನನ್ನ ಸರ್ಕಾರವಲ್ಲ' ಎಂದಿದ್ದಾರೆ. ಈ ಸರ್ಕಾರದ ಬಗ್ಗೆ ಅವರಿಗೇ ಅಪನಂಬಿಕೆ ಮತ್ತು ಅಸಹ್ಯ ಬಂದಂತಿದೆ. ಕಾಂಗ್ರೆಸ್ನಲ್ಲಿ ಎರಡಲ್ಲ, ಹಲವು ಒಡಕುಗಳಿದ್ದು, ಯಾವಾಗ ಬೇಕಾದರೂ ಸ್ಫೋಟವಾಗಬಹುದು. ಬೇರೆ ಪಕ್ಷಗಳನ್ನು ನಾಶ ಮಾಡಲು ಹೊರಟ ಅವರ ಟಾರ್ಗೆಟ್ ಅವರಿಗೇ ಮುಳುವಾಗಲಿದೆ. ಹಿರಿಯೂರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ನ ದೌರ್ಜನ್ಯ ರಾಜಕಾರಣ ಮೆಟ್ಟಿ ನಿಲ್ಲಲು ಜೆಡಿಎಸ್-ಬಿಜೆಪಿ ಮೈತ್ರಿಕೂಟದಿಂದ (ಎನ್ಡಿಎ) ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದರು.
ಕ್ಷೇತ್ರ ಪುನರ್ವಿಂಗಡಣೆ ದಕ್ಷಿಣ ಭಾರತಕ್ಕೆ ಲಾಭ
ಕ್ಷೇತ್ರ ಪುನರ್ವಿಂಗಡಣೆ ಕುರಿತು ಕಾಂಗ್ರೆಸ್ ನಡೆಸುತ್ತಿರುವ ಸಭೆಗಳಿಗೆ ಅರ್ಥವಿಲ್ಲ. ಚಂದ್ರಬಾಬು ನಾಯ್ಡು ಇದನ್ನು ಐತಿಹಾಸಿಕ ತೀಮಾರ್ನವೆಂದಿದ್ದು, ಸ್ಟಾಲಿನ್ ಈಗಾಗಲೇ ಕಾಂಗ್ರೆಸ್ನಿಂದ ದೂರ ಸರಿದಿದ್ದಾರೆ. ಜನಸಂಖ್ಯೆ ಆಧಾರದ ಬದಲು ಎಲ್ಲ ರಾಜ್ಯಗಳಲ್ಲಿ ಏಕರೂಪವಾಗಿ ಶೇ.50 ಕ್ಷೇತ್ರಗಳನ್ನು ಹೆಚ್ಚಿಸುವುದರಿಂದ ಕರ್ನಾಟಕದ ಲೋಕಸಭಾ ಸ್ಥಾನಗಳು 28ರಿಂದ 42ಕ್ಕೆ, ತಮಿಳುನಾಡು 39ರಿಂದ 59ಕ್ಕೆ, ಕೇರಳ 20ರಿಂದ 30ಕ್ಕೆ ಹಾಗೂ ತೆಲಂಗಾಣ 9ರಿಂದ 14-15ಕ್ಕೆ ಏರಿಕೆಯಾಗಲಿದೆ. ಇದರಿಂದ 26-28 ಲಕ್ಷ ಮತದಾರರಿರುವ ಕ್ಷೇತ್ರಗಳು 12-13 ಲಕ್ಷಕ್ಕೆ ಇಳಿಕೆಯಾಗಿ ಜನಪ್ರತಿನಿಧಿಗಳಿಗೆ ಕೆಲಸ ಮಾಡಲು ಅನುಕೂಲವಾಗುತ್ತದೆ. ಅಲ್ಲದೆ, ದಕ್ಷಿಣ ರಾಜ್ಯಗಳ ಸಂಸದರ ಸಂಖ್ಯೆ ಹೆಚ್ಚುವುದರಿಂದ ಕೇಂದ್ರದೊಂದಿಗೆ ಆರ್ಥಿಕ ಹಂಚಿಕೆ ಕುರಿತು ಚರ್ಚಿಸಲು ಬಲ ಸಿಗುತ್ತದೆ. ಇದರಲ್ಲಿ ಬಿಜೆಪಿ ಶಾಶ್ವತವಾಗಿ ಅಧಿಕಾರದಲ್ಲಿರಲು ಈ ಹುನ್ನಾರ ನಡೆಸುತ್ತಿದ್ದೆ ಎಂಬ ವಿರೊಧ ಪಕ್ಷಗಳ ಆರೋಪ ಆಧಾರರಹಿತ ಎಂದು ಎಚ್ಡಿಕೆ ತಿಳಿಸಿದರು.
ಕ್ಲೌಡ್ ಆಸ್ಪತ್ರೆ ವಿರುದ್ಧ ಕಾನೂನು ಹೋರಾಟ
ಕ್ಲೌಡ್ ಆಸ್ಪತ್ರೆಯಲ್ಲಿ ಒಂದೂವರೆ ವರ್ಷದ ಚುರುಕಾದ ಮಗುವಿನ ಕಿವಿಯ ಸಣ್ಣ ಗಾಯಕ್ಕೆ ಹೊಲಿಗೆ ಹಾಕುವಾಗ ಅನಸ್ತೇಶಿಯಾ ನೀಡುವಲ್ಲಿ ವೈದ್ಯರು ಮಾಡಿದ ನಿರ್ಲಕ್ಷ್ಯದಿಂದ ಮಗುವಿನ ಜೀವನವೇ ಹಾಳಾಗಿದೆ. ಆಸ್ಪತ್ರೆಯವರು ದುರಹಂಕಾರದಿಂದ ವರ್ತಿಸುತ್ತಿದ್ದು, ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ. ಇಂದು ಸಂಜೆ ಆಸ್ಪತ್ರೆಗೆ ಭೇಟಿ ನೀಡಲಿದ್ದು, ಪಾಲಕರ ನೋವಿಗೆ ನ್ಯಾಯ ಕೊಡಿಸಲು ಕಾನೂನು ಹೋರಾಟ ನಡೆಸಲಾಗುವುದು. ಸರ್ಕಾರ ಇಂತಹ ಆಸ್ಪತ್ರೆಗಳ ಉದ್ಧಟತನಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಕೃಷಿಕರಿಗೆ ರಾಜ್ಯ ಸರ್ಕಾರದಿಂದ ಅನ್ಯಾಯ
ಕೆಐಎಡಿಬಿ ಹೆಸರಿನಲ್ಲಿ ಕೃಷಿಕರನ್ನು ಒಕ್ಕಲೆಬ್ಬಿಸುತ್ತಿರುವ ವಿಚಾರ ನಿನ್ನೆ ಗಮನಕ್ಕೆ ಬಂದಿದೆ. ದಾಖಲೆಗಳನ್ನು ಪರಿಶೀಲಿಸಿ ರೈತರ ಪರವಾಗಿ ಧ್ವನಿ ಎತ್ತಲಿದ್ದೇನೆ. ಇನ್ನು ಕರ್ನಾಟಕವನ್ನು ಜಪಾನ್ ಮಾದರಿಯಲ್ಲಿ ಅಭಿವೃದ್ಧಿ ಮಾಡುವುದಾಗಿ ಹೇಳುವ ಸಿಎಂ, ಈ ಹಿಂದೆ ದೇವೇಗೌಡರು ಬಿಡದಿಗೆ ತಂದಿದ್ದ ಜಪಾನ್ ಮೂಲದ ಟೊಯೋಟಾ ಕಂಪನಿಯು ಇಲ್ಲಿ ಹೂಡಿಕೆ ಮಾಡಲಾಗದೆ ಮಹಾರಾಷ್ಟ್ರದಲ್ಲಿ 25 ಸಾವಿರ ಕೋಟಿ ರೂ. ಹೂಡಿಕೆ ಮಾಡುತ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.
ಮಹಿಳಾ ಮೀಸಲಾತಿಗೆ ವಿರೋಧವೇಕೆ?
ಮಹಿಳಾ ಮೀಸಲಾತಿ ಕುರಿತು ಬಿ.ಕೆ. ಹರಿಪ್ರಸಾದ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, 1996ರಲ್ಲಿ ದೇವೇಗೌಡರು ಈ ಮಸೂದೆ ಮಂಡಿಸಿದ್ದರು. 2004ರಿಂದ 10 ವರ್ಷ ಅಧಿಕಾರದಲ್ಲಿದ್ದ ಅವರದೇ ಕಾಂಗ್ರೆಸ್ ಸರ್ಕಾರ 2008ರಲ್ಲಿ ಡಿಲಿಮಿಟೇಶನ್ ಮಾಡಿದಾಗಲೇ ಮಹಿಳಾ ಮೀಸಲಾತಿ ಯಾಕೆ ಜಾರಿ ಮಾಡಲಿಲ್ಲ? ಈಗ ಎನ್ಡಿಎ ಸರ್ಕಾರ ಮಾಡುತ್ತಿರುವಾಗ ನಿಮ್ಮ ವಿರೋಧವೇಕೆ ಎಂದು ಎಚ್ಡಿಕೆ ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಂಎಲ್ಸಿ ಎಸ್.ಎಲ್. ಭೋಜೇಗೌಡ, ಮಾಜಿ ಸಚಿವ ಸಾರಾ ಮಹೇಶ, ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ ಶೆಟ್ಟಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಶಾಲಿನಿ ಶೆಟ್ಟಿ, ವಾಸುದೇವ ರಾವ್ ಇದ್ದರು.
ಮಹಿಳೆಯರ ಸಬಲೀಕರಣಕ್ಕೆ 2 ಸಾವಿರ ರೂ. ಹಾಗೂ ಬಸ್ನಲ್ಲಿ ಉಚಿತ ಪ್ರಯಾಣದಂತೆ ಯೋಜನೆಯಿಂದ ಆದಾಯ ಖರ್ಚು ಆಗುತ್ತದೆ. ಅದರ ಬದಲು ದಿನಕ್ಕೆ 20 ಲೀಟರ್ ಹಾಲು ಕೊಡುವ ಹಸು ನೀಡಿದರೆ ಖರ್ಚು ಕಳೆದು ದಿನಕ್ಕೆ 900-1,000 ರೂ. ಉಳಿದು ತಿಂಗಳಿಗೆ 30 ಸಾವಿರ ರೂ. ಗಳಿಸಬಹುದು. ಅದರಿಂದ ಕುಟುಂಬಗಳು ಸ್ವಾಭಿಮಾನದಿಂದ ಬದುಕುವುದರೊಂದಿಗೆ ತಲಾದಾಯವೂ ಹೆಚ್ಚುತ್ತದೆ. ನಗರ ಹಾಗೂ ಗ್ರಾಮೀಣ ಭಾಗಗಳಿಗೆ ತಕ್ಕಂತೆ ಮುಂದಿನ 15-20 ವರ್ಷದ ದೂರದೃಷ್ಟಿಯಲ್ಲಿ ಈ ಯೋಜನೆಯನ್ನು ಸದ್ಯದಲ್ಲೇ ಘೋಷಿಸಲಾಗುವುದು. ನಾನು ಸುಮ್ಮನೆ ಆಶ್ವಾಸನೆ ನೀಡುವುದಿಲ್ಲ. ಹಿಂದೆ ಸಿಎಂ ಆಗಿದ್ದ ಕೇವಲ 14 ತಿಂಗಳ ಅವಧಿಯಲ್ಲಿ ಕಾಂಗ್ರೆಸ್ ವಿರೋಧದ ನಡುವೆಯೂ ರೈತರ 25 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದೆ. ಸರ್ಕಾರದ ದುಂದುವೆಚ್ಚಗಳಿಗೆ ಕಡಿವಾಣ ಹಾಕಿದರೆ ಹಣದ ಕೊರತೆಯಾಗದು ಎಂದು ಕುಮಾರಸ್ವಾಮಿ ತಿಳಿಸಿದರು.
ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರವನ್ನು ದೂಷಿಸುವ ಚಾಳಿ ಬೆಳೆಸಿಕೊಂಡಿರುವ ಕಾಂಗ್ರೆಸ್ಸಿಗರಿಗೆ ದೆಹಲಿಗೆ ಹೋಗಿ ಕೆಲಸ ಮಾಡಿಸಿಕೊಳ್ಳುವ ತಿಳಿವಳಿಕೆಯೂ ಇಲ್ಲ. ಈ ಹಿಂದೆ ನಾನು ಎರಡು ಬಾರಿ ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರ ದುಡ್ಡು ಕೊಟ್ಟಿಲ್ಲವೆಂದು ಎಂದೂ ಹೇಳಿರಲಿಲ್ಲ. ಕಂದಾಯ ಸಚಿವರು ಬೆಂಗಳೂರಿನಲ್ಲಿ ಕುಳಿತು ಪತ್ರ ಬರೆದು, ಮಾಧ್ಯಮಗಳಿಗೆ ಬಿಡುಗಡೆ ಮಾಡಿದರೆ ಇರುವ ಸಮಸ್ಯೆ ಬಗೆಹರಿಯದು.ಎಚ್.ಡಿ. ಕುಮಾರಸ್ವಾಮಿ. ಕೇಂದ್ರ ಸಚಿವ.