ನಾವುಂದ ಗ್ರಾಮದ ಅರೆಹೊಳೆ ಎಂಬಲ್ಲಿ ವಾಸದ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿರುವುದು 
ಉಡುಪಿ

ಭಾರಿ ಮಳೆಗೆ ಮನೆ ಧರಾಶಾಹಿ

ಬೈಂದೂರು: ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಬೈಂದೂರು ತಾಲೂಕಿನ ನಾವುಂದ ಗ್ರಾಮದ ಅರೆಹೊಳೆ ಎಂಬಲ್ಲಿ ಗುರುವಾರ ಮುಂಜಾನೆ ಬಡ ಕುಟುಂಬವೊಂದರ ವಾಸದ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.

ನಾವುಂದ ಗ್ರಾಮದ ಅರೆಹೊಳೆ ನಿವಾಸಿ ಸದಾಶಿವ ಗಾಣಿಗ ಅವರಿಗೆ ಸೇರಿದ ವಾಸದ ಮನೆ ಗುರುವಾರ ಮುಂಜಾನೆ 5.30ರ ವೇಳೆಗೆ ಮಳೆ ರಭಸಕ್ಕೆ ಏಕಾಏಕಿ ನೆಲಸಮಗೊಂಡಿದೆ. ಘಟನೆ ವೇಳೆ ಮನೆಯೊಳಗೆ ಸದಾಶಿವ ಗಾಣಿಗ ಹಾಗೂ ಅವರ ಪತ್ನಿ ಮಲಗಿದ್ದರು. ಬೃಹತ್ ಶಬ್ದದೊಂದಿಗೆ ಗೋಡೆ ಹಾಗೂ ಮೇಲ್ಪಾವಣಿ ಕುಸಿದು ಬೀಳುತ್ತಿದ್ದಂತೆಯೇ ಜಾಗೃತರಾದ ದಂಪತಿ ತಕ್ಷಣ ಹೊರಗೆ ಓಡಿಬಂದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸದೆ ಪಾರಾಗಿದ್ದಾರೆ. ಘಟನೆಯಲ್ಲಿ ಮನೆಯಲ್ಲಿದ್ದ ಗೃಹಬಳಕೆ ಸಾಮಗ್ರಿಗಳು, ಧಾನ್ಯಗಳು ಸಂಪೂರ್ಣವಾಗಿ ಮಣ್ಣುಪಾಲಾಗಿವೆ.
ಈ ಕುಟುಂಬ ಅತ್ಯಂತ ಕಡು ಬಡತನದಲ್ಲಿದ್ದು, ಮನೆಯ ಯಜಮಾನ ಸದಾಶಿವ ಗಾಣಿಗ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅನಾರೋಗ್ಯದ ಕಾರಣದಿಂದ ಅವರಿಗೆ ಯಾವುದೇ ಕೂಲಿ ಕೆಲಸಕ್ಕೂ ಹೋಗಲು ಸಾಧ್ಯವಾಗದ ಸ್ಥಿತಿಯಿದೆ. ಕುಟುಂಬದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು ಬದುಕಿನ ನಿರ್ವಹಣೆಯೇ ಸವಾಲಾಗಿದ್ದು, ವಾಸವಿದ್ದ ಮನೆಯೂ ಕಳೆದುಹೋಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಪ್ರಸ್ತುತ ವಾಸಿಸಲು ಸೂರಿಲ್ಲದೆ ಕುಟುಂಬಸ್ಥರು ಸಣ್ಣ ಬಾಡಿಗೆ ಮನೆಯೊಂದರಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಪರಿಹಾರಕ್ಕೆ ಮನವಿ

ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಹಾಗೂ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರ್ಕಾರದ ನಿಯಮಾವಳಿಯಂತೆ ತುರ್ತು ಪರಿಹಾರವಾಗಿ 2.5 ಲಕ್ಷ ರೂ.ವರೆಗೆ ಅನುದಾನ ಸಿಗುವ ಸಾಧ್ಯತೆಯಿದೆಯಾದರೂ ಬಸವ ವಸತಿ ಯೋಜನೆಯಡಿ ತಕ್ಷಣಕ್ಕೆ ಹೊಸ ಮನೆ ನಿರ್ಮಿಸಿಕೊಳ್ಳಲು ಅವಕಾಶವಿಲ್ಲದಿರುವುದು ಕುಟುಂಬವನ್ನು ಇನ್ನಷ್ಟು ಚಿಂತೆಗೀಡುಮಾಡಿದೆ.

ಸದಾಶಿವ ಗಾಣಿಗ ಅವರ ಕುಟುಂಬ ತೀವ್ರ ಕಷ್ಟದಲ್ಲಿದೆ. ಸರ್ಕಾರ ಹಾಗೂ ತಾಲೂಕು ಆಡಳಿತ ತಕ್ಷಣ ವಿಶೇಷ ಪ್ರಕರಣವೆಂದು ಪರಿಗಣಿಸಿ ಅವರಿಗೆ ಪೂರ್ಣ ಪ್ರಮಾಣದ ಪರಿಹಾರ ಧನ ಹಾಗೂ ನೂತನ ಮನೆ ನಿರ್ಮಾಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು.

— ನರಸಿಂಹ ದೇವಾಡಿಗ ಮಾಜಿ ಅಧ್ಯಕ್ಷ, ನಾವುಂದ ಗ್ರಾಮ ಪಂಚಾಯಿತಿ