ಉಡುಪಿಯ ಕಿದಿಯೂರು ಹೋಟೆಲ್ನಲ್ಲಿ ಕಟ್ಟಿಗೆ ಒಲೆ ಮೂಲಕ ಅಡುಗೆ ಮಾಡುತ್ತಿರುವುದು.
ಉಡುಪಿ
ಹೋಟೆಲ್ಗಳಲ್ಲಿ 'ಕಟ್ಟಿಗೆ ಒಲೆ' ಅಡುಗೆ
* ಗ್ರಾಹಕರಿಗೆ ನಿತ್ಯ ಅಗತ್ಯ ಆಹಾರಗಳ ವ್ಯವಸ್ಥೆ
* ಮುಂದುವರಿದ ವಾಣಿಜ್ಯ ಸಿಲಿಂಡರ್ ಅವ್ಯವಸ್ಥೆ
ಪ್ರಶಾಂತ ಭಾಗ್ವತ ಉಡುಪಿ
ವಾಣಿಜ್ಯ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮಕ್ಕೆ ತೀವ್ರ ಹಿನ್ನಡೆಯಾಗಿದ್ದು, ಶೇ.60ಕ್ಕೂ ಹೆಚ್ಚು ಪ್ರಮಾಣದಲ್ಲಿ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಹೋಟೆಲ್ಗಳು ಉಡುಪಿ ಜಿಲ್ಲೆಯಲ್ಲಿ ಗುರುವಾರ ಬಂದ್ ಆಗಿವೆ.
ಕಮರ್ಷಿಯಲ್ ಗ್ಯಾಸ್ ಅಲಭ್ಯತೆಯಿಂದಾಗಿ ಉಡುಪಿಯ ಪ್ರಮುಖ ಹೋಟೆಲ್ಗಳ ಮಾಲೀಕರು ಕೈಕಟ್ಟಿ ಕುಳಿತುಕೊಳ್ಳದೆ ಕಟ್ಟಿಗೆ ಒಲೆ ಹಾಗೂ ಅಸ್ತ್ರ ಒಲೆಯಲ್ಲಿ ಅಡುಗೆ ಮಾಡಿಸುತ್ತಿದ್ದು, ಗ್ರಾಹಕರಿಗೆ ಅಗತ್ಯ ಆಹಾರ ಒದಗಿಸುತ್ತಿದ್ದಾರೆ.
ಇಡ್ಲಿ, ಅನ್ನ-ಸಾಂಬಾರ್ ವ್ಯವಸ್ಥೆ
ಉದ್ಯೋಗಿಗಳಿಗೆ, ಕಾರ್ಮಿಕರಿಗೆ, ಪ್ರಮುಖವಾಗಿ ಉಡುಪಿಗೆ ಆಗಮಿಸುವ ಪ್ರವಾಸಿಗರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲವು ಪ್ರಮುಖ ಹೋಟೆಲ್ಗಳು ತುರ್ತು ಆಹಾರ ತಯಾರಿಸುತ್ತಿವೆ. ಉಡುಪಿ ನಗರದಲ್ಲಿರುವ ಖ್ಯಾತ ಕಿದಿಯೂರು ಹೋಟೆಲ್ನಲ್ಲಿ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವ ಮೂಲಕ ಗ್ರಾಹಕರ ಹೊಟ್ಟೆ ತುಂಬಿಸಲಾಗುತ್ತಿದೆ. ಬೆಳಗ್ಗಿನ ತಿಂಡಿಗೆ ಒಮ್ಮೆ ಸಿದ್ಧಪಡಿಸಿ ಇಡಬಹುದಾದ ಇಡ್ಲಿ, ಉಪ್ಪಿಟ್ಟು, ಬನ್ಸ್ ಹಾಗೂ ಮಧ್ಯಾಹ್ನದ ಊಟಕ್ಕೆ ಅನ್ನ-ಸಾಂಬಾರ್, ಕರ್ಡ್ ರೈಸ್ ವ್ಯವಸ್ಥೆ ಮಾಡುತ್ತಿದೆ. ಬೆಂಕಿ ಬಳಸಿ ಪದೇಪದೇ ಸಿದ್ಧಪಡಿಸಿಕೊಡುವ ಆಹಾರ, ವಿವಿಧ ದೋಸೆ ವೆರೈಟಿ ಹಾಗೂ ನಾರ್ತ್ಸೌತ್ನ ಮೆನುಗಳಿಗೆ ಕೊಕ್ ಹಾಕಲಾಗಿದೆ.
ಸಣ್ಣ ಹೋಟೆಲ್ನವರು ಕಂಗಾಲು
ನಗರದಲ್ಲಿ ಲಭ್ಯವಿರುವ ಸಣ್ಣ ಮಳಿಗೆಗಳಲ್ಲಿ ಬಾಡಿಗೆ ಪಡೆದು ಹೋಟೆಲ್ ನಡೆಸುತ್ತಿರುವವರು ಗ್ಯಾಸ್ ಅಲಭ್ಯತೆಯಿಂದ ಕಂಗಾಲಾಗಿದ್ದಾರೆ. ಅವರ ಹೋಟೆಲ್ಗಳಲ್ಲಿ ಸ್ಥಳದ ಅಭಾವವಿದ್ದು ಕಟ್ಟಿಗೆ ಒಲೆ ಉರಿಸಲು ಸಾಧ್ಯವಿಲ್ಲ. ಕರೆಂಟ್ ಒಲೆ ಮೂಲಕ ಟೀ ಮಾಡಿಕೊಂಡಿದ್ದು, ಸಣ್ಣ-ಪುಟ್ಟ ಸ್ನ್ಯಾಕ್ಸ್ ಸಿದ್ಧಮಾಡಿಕೊಂಡಿದ್ದಾರೆ. ಆದರೆ, ನಿತ್ಯದಂತೆ ಬೆಳಗ್ಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆ ಮಾಡಲು ಸಾಧ್ಯವಾಗದೆ ಕೈಹಿಸುಕಿಕೊಳ್ಳುತ್ತಿದ್ದಾರೆ.
ಉಡುಪಿಯ ಲಾಡ್ಜ್ಗೆ ಬರುವ ಯಾತ್ರಿಕರು, ಪ್ರವಾಸಿಗರು 'ತಮ್ಮಲ್ಲಿ ಊಟ-ತಿಂಡಿಯ ವ್ಯವಸ್ಥೆ ಇದೆಯೇ' ಎಂದು ವಿಚಾರಿಸಿ ಬುಕ್ ಮಾಡುತ್ತಿದ್ದಾರೆ. ತಕ್ಕಮಟ್ಟಿಗೆ ಮಾಂಸಾಹಾರವೂ ಲಭಿಸುತ್ತಿದ್ದು 'ಮೆನು'ನಲ್ಲಿರುವ ಆಹಾರ ಸದ್ಯಕ್ಕೆ ಸಿಗದಾಗಿದೆ.
ಕಮರ್ಷಿಯಲ್ ಗ್ಯಾಸ್ ಶೇ.10 ಪೂರೈಕೆ
ಉಡುಪಿ ಹಾಗೂ ಮಂಗಳೂರು ಜಿಲ್ಲೆಯಲ್ಲಿ ಗ್ಯಾಸ್ ಏಜೆನ್ಸಿ ಹೊಂದಿರುವವರಿಗೆ ಮಂಗಳೂರಿನ ಎಚ್ಪಿಸಿಎಲ್ ಸಂಸ್ಥೆಯವರು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ನ ಬಿಲ್ಲಿಂಗ್ ಸ್ಥಗಿತಗೊಳಿಸದೆ. ಆದರೂ, ಈಗಾಗಲೇ ಸಂಬಂಧಿತ ಏಜೆಂಟರಿಂದ ತರಿಸಿಕೊಂಡ ವರದಿ ಆಧಾರದ ಹಿನ್ನೆಲೆಯಲ್ಲಿ ಶೇ.5-10ರಷ್ಟು ಕಮರ್ಷಿಯಲ್ ಗ್ಯಾಸ್ ಪೂರೈಕೆ ಮಾಡುತ್ತಿದೆ. ಅವುಗಳನ್ನು ಆಸ್ಪತ್ರೆ, ಹಾಸ್ಟೆಲ್ ಹಾಗೂ ಶಾಲೆಗಳಿಗೆ ರೇಶನಿಂಗ್ ಪದ್ಧತಿಯಲ್ಲಿ ನೀಡಲಾಗುತ್ತಿದೆ. ಸಿಲಿಂಡರ್ ಕೊರತೆ ವದಂತಿ ಹಿನ್ನೆಲೆಯಲ್ಲಿ ಗ್ರಹ ಬಳಕೆಯ ಗ್ಯಾಸ್ ಬುಕ್ಕಿಂಗ್ ಹೆಚ್ಚು ಪ್ರಮಾಣದಲ್ಲಿ ಆಗುತ್ತಿದೆ. ಹೀಗಾಗಿ ಡೊಮೆಸ್ಟಿಕ್ ಗ್ರಾಹಕರಿಗೆ ಬುಕ್ಕಿಂಗ್ ಆಗಿರುವ ಒಟಿಪಿ ಬಂದಿದ್ದರೂ ಸಹ ಕನಿಷ್ಠ 3 ದಿನದಿಂದ ವಾರದೊಳಗೆ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ ಎನ್ನುತ್ತಾರೆ. ಉಡುಪಿಯ ಎಚ್ಪಿ ಗ್ಯಾಸ್ನ ಪಾಲುದಾರರಾದ ರಾಘವೇಂದ್ರ ಆಚಾರ್ಯ ಗ್ಯಾಸ್ನ ಬಾಲಾಜಿ ವಿಷ್ಣು ಆಚಾರ್ಯ.
"
ವಾಣಿಜ್ಯ ಸಿಲಿಂಡರ್ ಅಲಭ್ಯತೆಯಿಂದ ನಮ್ಮ ಹೋಟೆಲ್ನಲ್ಲಿ ಕಟ್ಟಿಗೆ ಒಲೆ ಮೂಲಕ ಸೀಮಿತ ಅಡುಗೆ ಮಾಡಲಾಗುತ್ತಿದೆ. ಕಟ್ಟಿಗೆಯೂ ಸರಿಯಾಗಿ ಸಿಗುತ್ತಿಲ್ಲ, ದರವೂ ದುಪ್ಪಟ್ಟಾಗಿದೆ. ನಷ್ಟದ ನಡುವೆಯೂ ಗ್ರಾಹಕರಿಗೆ ಆಹಾರದ ಕೊರತೆ ಆಗದಿರಲೆಂದು ಊಟ&ತಿಂಡಿ ವ್ಯವಸ್ಥೆ ಮಾಡುತ್ತಿದ್ದೇವೆ. ಎಲ್ಪಿಜಿ ಸಮಸ್ಯೆಯನ್ನು ಕೇಂದ್ರ-ರಾಜ್ಯ ಸರ್ಕಾರ ಶೀಘ್ರ ಶಮನ ಮಾಡಿ ಹೋಟೆಲ್ ಉದ್ಯಮಕ್ಕೆ ಸಹಕರಿಸಬೇಕು.
"
ಅರಬ್ ರಾಷ್ಟ್ರಗಳಲ್ಲಿ ಯುದ್ಧದ ಪರಿಣಾಮದಿಂದಾಗಿ ಭಾರತವು ಇಂಧನ ಮತ್ತು ತೈಲ ಸಮಸ್ಯೆ ಎದುರಿಸುವಂತಾಗಿದೆ. ನಮ್ಮ ಹೋಟೆಲ್ನಲ್ಲಿ ಅಸ್ತ್ರ ಒಲೆಯ ಮೂಲಕ ಸೀಮಿತ ಪ್ರಮಾಣದಲ್ಲಿ ಊಟ-ತಿಂಡಿ ಸಿದ್ಧಪಡಿಸುತ್ತಿದ್ದೇವೆ. ಹಾರ್ಮುಜ್ ಜಲಸಂಧಿ ಮಾರ್ಗದಲ್ಲಿ ತೈಲ ಟ್ಯಾಂಕರ್ಗಳ ಸಾಗಾಟಕ್ಕೆ ತಡೆ ಹೇರಿದ್ದ ಇರಾನ್, ಇದೀಗ ಭಾರತದ ಹಡಗುಗಳಿಗೆ ಅನುಮತಿ ನೀಡಿದೆ. ಹೀಗಾಗಿ ಕೆಲ ದಿನಗಳಲ್ಲಿ ಕಮರ್ಷಿಯಲ್ ಸಿಲಿಂಡರ್ನ ಸಮಸ್ಯೆ ನಿವಾರಣೆ ಆಗಲಿದೆ ಎಂದು ಭಾವಿಸಿದ್ದೇವೆ.