ಹೋಟೆಲ್‌ವೊಂದರಲ್ಲಿ ದಾಸ್ತಾನು ಇರಿಸಿರುವ ಸಿಲಿಂಡರ್‌ಗಳು (ಸಾಂದರ್ಭಿಕ ಚಿತ್ರ)
ವಿಜಯವಾಣಿ ಸುದ್ದಿಜಾಲ ಮಂಜೇಶ್ವರ
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯ ಲಾಭ ಪಡೆದುಕೊಳ್ಳುತ್ತಿರುವ ಜಿಲ್ಲೆಯ ಹೋಟೆಲ್‌ಗಳು ಆಹಾರಗಳಿಗೆ ದುಬಾರಿ ದರ ವಿಧಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿವೆ. ಇನ್ನೊಂದೆಡೆ ಗೃಹಬಳಕೆ ಗ್ಯಾಸ್ ಸಮಸ್ಯೆಯಿಂದ ಜನರು ಕಂಗಾಲಾಗಿದ್ದಾರೆ.
ವಾಣಿಜ್ಯ ಸಿಲಿಂಡರ್‌ಗಳ ಕೊರತೆಯಿಂದಾಗಿ ಅನೇಕ ಹೋಟೆಲ್ ಉದ್ಯಮಿಗಳು ಕಾಳಸಂತೆಯಲ್ಲಿ ಸಿಗುವ ಸಿಲಿಂಡರ್‌ಗಳಿಗೆ ಮೊರೆಹೋಗಿದ್ದಾರೆ. ಕಾಳಸಂತೆಯಲ್ಲಿ ಒಂದು ಸಿಲಿಂಡರ್‌ಗೆ 4 ಸಾವಿರ ರೂ.ವರೆಗೆ ನೀಡಬೇಕಿದ್ದು ಇದರ ನೇರಪರಿಣಾಮ ಗ್ರಾಹಕರ ಮೇಲಾಗುತ್ತಿದೆ. ಸಿಲಿಂಡರ್‌ಗೆ ಹೆಚ್ಚು ಹಣ ವ್ಯಯಿಸುತ್ತಿರುವುದರಿಂದ ಆಹಾರಗಳಿಗೆ ಶೇ.10ರಿಂದ ಶೇ.25 ಮೊತ್ತವನ್ನು ಅನಿವಾರ್ಯವಾಗಿ ಹೆಚ್ಚಿಸಲಾಗಿದೆ ಎನ್ನುತ್ತಾರೆ ಕೆಲವು ಹೋಟೆಲ್ ಉದ್ಯಮಿಗಳು.
ಕಾಳಸಂತೆಯಲ್ಲಿ ಬಿಕರಿ
ವಾಣಿಜ್ಯ ಸಿಲಿಂಡರ್‌ಗಳ ಅಭಾವದಿಂದಾಗಿ ದುಬಾರಿ ಹಣ ಕೊಟ್ಟಾದರೂ ಕಾಳಸಂತೆಯಲ್ಲಿ ಖರೀದಿಸಲು ಹೋಟೆಲ್ ಉದ್ಯಮಿಗಳು ಮುಗಿಬಿದ್ದಿದ್ದಾರೆ. ಸಿಲಿಂಡರ್ ಸಮಸ್ಯೆ ನಿವಾರಿಸಬೇಕು ಎಂದು ಆಗ್ರಹಿಸಿ ಈಗಾಗಲೇ ಉದ್ಯಮಿಗಳು ಹೋರಾಟ ಆರಂಭಿಸಿದ್ದು, ಗ್ಯಾಸ್ ಏಜೆನ್ಸಿಗಳ ಮುಂದೆಯೂ ಪ್ರತಿಭಟಿಸುತ್ತಿದ್ದಾರೆ.
ದರಪಟ್ಟಿ ಅಳವಡಿಕೆಗೆ ಪಟ್ಟು
ಹೋಟೆಲ್‌ಗಳಲ್ಲಿ ನಿಗದಿಪಡಿಸಿರುವ ಅನಿಯಂತ್ರಿತ ದರ ನಿಯಂತ್ರಣಕ್ಕೆ ಎಲ್ಲ ಉದ್ಯಮಿಗಳು ಆಹಾರಗಳ ದರಪಟ್ಟಿ ಪ್ರದರ್ಶಿಸಬೇಕು ಎಂದು ಗ್ರಾಹಕರು ಒತ್ತಾಯಿಸಿದರೂ ಪ್ರಮುಖ ಹೋಟೆಲ್‌ಗಳು ಗ್ರಾಹಕರ ಬೇಡಿಕೆಗೆ ಸಮ್ಮತಿಸಿಲ್ಲ. ಎಲ್‌ಪಿಜಿ ಕೊರತೆ ಕಾರಣ ಮುಂದಿಟ್ಟು ಆಹಾರಗಳಿಗೆ ಹೆಚ್ಚು ದರ ವಿಧಿಸದಂತೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಎಲ್ಲ ಹೋಟೆಲ್‌ಗಳಿಗೆ ಸೂಚನೆ ನೀಡಿದ್ದರೂ ಪಾಲನೆಯಾಗುತ್ತಿಲ್ಲ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಮುಚ್ಚುತ್ತಿರುವ ಹೋಟೆಲ್‌ಗಳು: ಸಿಲಿಂಡರ್‌ಗಳು ಸಿಗದ ಕಾರಣ ಕೆಲವು ಹೋಟೆಲ್‌ಗಳು ಮುಚ್ಚುವ ಸ್ಥಿತಿಗೆ ತಲುಪಿದ್ದು, ಬಹುತೇಕ ಹೋಟೆಲ್‌ಗಳು ಮಧ್ಯಾಹ್ನ ಬಳಿಕ ಬಾಗಿಲು ಮುಚ್ಚುತ್ತಿವೆ. ಲಭ್ಯವಿರುವ ಸಿಲಿಂಡರ್ ಬಳಸಿಕೊಂಡು ಸೀಮಿತ ಆಹಾರಗಳನ್ನು ತಯಾರಿಸಿ ವ್ಯಾಪಾರ ನಡೆಸುತ್ತಿದ್ದಾರೆ. ಕಾಳಸಂತೆಯ ಸಿಲಿಂಡರ್ ದಂಧೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶೀಘ್ರವೇ ಲಗಾಮು ಹಾಕಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಆಹಾರಗಳ ದರ ಹಠಾತ್ ಏರಿಕೆ
ಹದಿನೈದು ದಿನಗಳಿಂದ ಜಿಲ್ಲಾದ್ಯಂತ ಇರುವ ಹೋಟೆಲ್‌ಗಳಲ್ಲಿ ಆಹಾರದ ಬೆಲೆ ಏರಿಕೆಯಾಗಿದೆ. 15 ರೂ. ಗೆ ಸಿಗುತ್ತಿದ್ದ ಚಹಾ ದರವನ್ನು 20 ರೂ.ಗೆ ಹೆಚ್ಚಿಸಲಾಗಿದ್ದು, 15 ರೂ.ಗೆ ದೊರೆಯುತ್ತಿದ್ದ ಒಂದು ಪ್ಲೇಟ್ ಪೋಡಿ, ಬಜ್ಜಿ ದರ 25 ರೂ.ಗೆ ಏರಿಸಲಾಗಿದೆ. ಚಪಾತಿ, ಅನ್ನದಿಂದ ಮಾಡಿದ ಆಹಾರದ ಬೆಲೆಗಳಲ್ಲೂ ಏರಿಕೆಯಾಗಿದೆ.