* ವಾಣಿಜ್ಯ ಸಿಲಿಂಡರ್ ಬೆಲೆ ಮತ್ತೆ ಏರಿಕೆ
* ಹೋಟೆಲ್ ಉದ್ಯಮ, ಗ್ರಾಹಕರಿಕೆ ಬಿಕ್ಕಳಿಕೆ
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬ ನಾಣ್ಣುಡಿಯಂತೆ ಇರಾನ್ ವಿರುದ್ಧ ಇಸ್ರೇಲ್ ಹಾಗೂ ಅಮೆರಿಕ ನಡೆಸುತ್ತಿರುವ ಜಂಟಿ ಸಮರದ ಬಿಸಿ ಭಾರತಕ್ಕೆ ಮುಂದುವರಿದಿದೆ. ಮೂರು ತಿಂಗಳಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿದ್ದು, ದೇಶದಲ್ಲಿ ಅಡುಗೆ ಅನಿಲ, ಇಂಧನ ದರ ಏರಿಕೆಯ ಬರೆ ಬೀಳತೊಡಗಿದೆ.
ಮೂರು ತಿಂಗಳಿಂದ ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ಅಸ್ತವ್ಯಸ್ತವಾಗಿತ್ತು. ಇದೀಗ ಹೋಟೆಲ್ಗಳಿಗೆ ಅಗತ್ಯತೆಗೆ ತಕ್ಕಷ್ಟು ವಾಣಿಜ್ಯ ಸಿಲಿಂಡರ್ ಪೂರೈಸಲಾಗುತ್ತಿದೆ. ಪ್ರಸ್ತುತ 3,114 ರೂ. ಆಗಿದ್ದು, ದರ ಏರಿಕೆಯ ಬಿಸಿ ಮಾಲೀಕರ ಕೈ ಸುಡುತ್ತಿದೆ.
ಗ್ಯಾಸ್ ಬೆಲೆ ಏರಿಕೆಯ ಬಿಸಿ ಹೋಟೆಲ್ ಉದ್ಯಮಿಗಳಲ್ಲಿ ಚಿಂತೆ ಹೆಚ್ಚಿಸಿದೆ. ಸಣ್ಣ ಕ್ಯಾಂಟೀನ್ ಹಾಗೂ ಚಿಕ್ಕ ಮಳಿಗೆಗಳಲ್ಲಿ ಹೋಟೆಲ್ ನಡೆಸಿ ಜೀವನ ಸಾಗಿಸುತ್ತಿರುವವರಿಗೆ ಆಘಾತವಾಗಿದೆ. ಇಂತಹ ಬಗೆಯ ಹೋಟೆಲ್ಗಳು ಶೇ.60ರಷ್ಟು ಬಂದ್ ಆಗಿವೆ. ದೊಡ್ಡ ಪ್ರಮಾಣದ ಹೋಟೆಲ್ಗಳಲ್ಲಿ ತಿಂಡಿ&ತಿನಿಸುಗಳ ದರವನ್ನೂ ಸಹ ಕನಿಷ್ಠ 20ರಿಂದ 50 ರೂ. ವರೆಗೆ ಏರಿಸಿದ್ದಾರೆ. ಇದು, ನಿತ್ಯವೂ ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಹೋಟೆಲ್ಗಳನ್ನೇ ನಂಬಿರುವ ಮಧ್ಯಮ ವರ್ಗದ ಜನರಿಗೆ ಹಾಗೂ ಕಾರ್ಮಿಕರ ವರ್ಗಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ರಾಜ್ಯಗಳಲ್ಲಿ ವಿವಿಧ ದರ
ಕಮರ್ಷಿಯಲ್ ಸಿಲಿಂಡರ್ ದರ ಅನ್ಯ ರಾಜ್ಯಗಳಲ್ಲಿ ವ್ಯತ್ಯಾಸವಿದೆ. ದೆಹಲಿಯಲ್ಲಿ 3,113.50 ರೂ., ಕೋಲ್ಕತ್ತಾದಲ್ಲಿ 3,255.50 ರೂ. ಇದೆ. ಬೆಂಗಳೂರಿನಲ್ಲಿ 3,198 ರೂ.ಗೆ ತಲುಪಿದೆ. 5 ಕೆಜಿ ತೂಕದ ಫ್ರೀ ಟ್ರೇಡ್ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲೂ ಸಹ 11 ರೂ. ಹೆಚ್ಚಳವಾಗಿದ್ದು, ದೆಹಲಿಯಲ್ಲಿ ಇದರ ನೂತನ ದರ 821.50 ರೂ. ಆಗಿದೆ. ಕರ್ನಾಟಕದಲ್ಲಿ 860 ರೂ.ಗೆ ಏರಿದೆ.
3 ತಿಂಗಳಲ್ಲಿ 1,240ರೂ. ಹೆಚ್ಚಳ!
ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದ ಬಳಿಕ ಕರ್ನಾಟಕದಲ್ಲಿ ಕಮರ್ಷಿಯಲ್ ಗ್ಯಾಸ್ ದರದಲ್ಲಿ 3 ಬಾರಿ ಏರಿಕೆ ಕಂಡಿದೆ. ಮಾರ್ಚ್ 1ರಂದು 19 ಕೆಜಿ ಸಿಲಿಂಡರ್ನ ದರ 1,874 ರೂ. ಇತ್ತು. ಮಾ.7ರಂದು ದಿಢೀರನೆ 203 ರೂ. ಏರಿಕೆಯೊಂದಿಗೆ 2,077 ರೂ.ಗೆ ಏರಿಕೆಯಾಯಿತು. ಮೇ 1ರಂದು ಮತ್ತೆ 991 ರೂ. ಏರಿಕೆಯಾಗಿ 3,068ರೂ. ಆಗಿತ್ತು. ಇದೀಗ ಜೂ.1ರಂದು ಮತ್ತೆ 46 ರೂ. ಏರಿಕೆಯಾಗಿದ್ದು ಪ್ರಸ್ತುತ ಸಿಲಿಂಡರ್ ದರ 3,114 ರೂ.ಗೆ ನಿಂತಿದೆ. ಕಳೆದ 3 ತಿಂಗಳಲ್ಲಿ ಕಮರ್ಷಿಯಲ್ ಸಿಲಿಂಡರ್ನ ದರ ಬರೋಬ್ಬರಿ 1,240ರೂ. ಏರಿಕೆ ಕಂಡಿದೆ.
ಮನೆಗಳಿಗೆ ಶೇ.80 ಪೂರೈಕೆ
ಗ್ರಹಬಳಕೆಯ ಸಿಲಿಂಡರ್ (14 ಕೆಜಿ) ಪೂರೈಕೆಯಲ್ಲಿ ಸಮಸ್ಯೆ ಇಲ್ಲ. ದರವೂ ಏರಿಕೆ ಆಗಿಲ್ಲ. ಪ್ರಸ್ತುತ ದರ 915.50 ರೂ. ಇದೆ. ಆದರೆ, ಶೇ.80ರಷ್ಟು ಮಾತ್ರ ಪೂರೈಕೆ ಮಾಡಲಾಗುತ್ತಿದೆ. ಒಂದೇ ಸಿಲಿಂಡರ್ (ಸಿಂಗಲ್) ಇರುವವರು 25 ದಿನದ ಬಳಿಕ ಹಾಗೂ ಎರಡು ಸಿಲಿಂಡರ್ (ಡಬಲ್) ಇರುವವರು 30 ದಿನದ ಬಳಿಕವೇ ಬುಕ್ಕಿಂಗ್ ಮಾಡಬೇಕಿದೆ. ಬೇಡಿಕೆಯ ನೋಂದಣಿಯಾಗಿ ಒಟಿಪಿ ಬಂದಿದ್ದರೂ ಸಹ 10&12 ದಿನದ ಬಳಿಕವೇ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ.
ಕಮರ್ಷಿಯಲ್ ಗ್ಯಾಸ್ ದರ ಏರಿಕೆಯಿಂದ ಹೋಟೆಲ್ಗಳಲ್ಲಿ ತಿಂಡಿ-ತಿನಿಸು, ಊಟಗಳ ಬೆಲೆ ಏರಿಕೆ ಅನಿವಾರ್ಯವಾಗಿದೆ. ಇತ್ತೀಚೆಗೆ ಪೆಟ್ರೋಲ್, ಡೀಸೆಲ್ ಬೆಲೆಯೂ ಏರಿದೆ. ಬೇಳೆ&ಕಾಳು, ತರಕಾರಿ ದರವೂ ಏರುತ್ತಲೇ ಇದೆ. ಹೀಗಾಗಿ ಗ್ರಾಹಕರಿಗೆ ಈ ಹಿಂದಿನ ದರದಲ್ಲಿ ಆಹಾರ ನೀಡಲು ಸಾಧ್ಯವೇ ಇಲ್ಲ. ಕಮರ್ಷಿಯಲ್ ಗ್ಯಾಸ್ ದರ ಇಳಿಕೆ ಆದಲ್ಲಿ ಮಾತ್ರ ಹೋಟೆಲ್ ಉದ್ಯಮಕ್ಕೆ ಭವಿಷ್ಯವಿದೆ.
— ಡಾ. ತಲ್ಲೂರು ಶಿವರಾಂ ಶೆಟ್ಟಿ. ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ.
ಮೂರು ತಿಂಗಳಿಂದ ರೇಶನಿಂಗ್ ವ್ಯವಸ್ಥೆಯಲ್ಲಿ ಹೋಟೆಲ್ಗೆ ಕಮರ್ಷಿಯಲ್ ಗ್ಯಾಸ್ ಪೂರೈಕೆ ಮಾಡಲಾಗುತ್ತಿತ್ತು. ಇದೀಗ ಮಂಗಳೂರಿನ ಎಚ್ಪಿಸಿಎಲ್ ಪ್ಲಾಂಟ್ನಿಂದ ಗ್ಯಾಸ್ ವಿತರಕರಿಗೆ ಅಗತ್ಯತೆಯಷ್ಟು ಕಮರ್ಷಿಯಲ್ ಗ್ಯಾಸ್ ಪೂರೈಸಲಾಗುತ್ತಿದೆ. ಆದರೆ, ಯಾವುದೇ ಹೊಸ ಗ್ರಾಹಕರಿಗೆ ದೇಶಾದ್ಯಂತ ಕಳೆದ 3 ತಿಂಗಳಿಂದ ಅನಿಲ ಸಂಪರ್ಕ ಸೌಲಭ್ಯ ಲಭ್ಯವಿಲ್ಲ. ಒಂದು ಸಿಲಿಂಡರ್ ಇರುವವರಿಗೆ 2 ಸಿಲಿಂಡರ್ ಹೊಂದಲೂ ಸದ್ಯದ ಸ್ಥಿತಿಯಲ್ಲಿ ಅವಕಾಶವಿಲ್ಲ. ತುರ್ತು ಸಂದರ್ಭಕ್ಕೆ 5 ಕೆಜಿ ಸಿಲಿಂಡರ್ ಪಡೆಯಬಹುದು.
— ವಿಷ್ಣು ಆಚಾರ್ಯ. ರಾಘವೇಂದ್ರ ಗ್ಯಾಸ್ ಏಜೆನ್ಸಿ ಮಾಲೀಕ. (ಎಚ್ಪಿ ಗ್ಯಾಸ್ ಪಾಲುದಾರರು)