ಉಡುಪಿ ನಗರದಲ್ಲಿ ಅಮ್ಮುಂಜೆ ಪೆಟ್ರೋಲ್ ಪಂಪ್ನ ಎದುರಿನ ಚರಂಡಿಯಲ್ಲಿ ಡ್ರೈನೇಜ್ ನೀರು ಬಿಟ್ಟಿರುವುದು.
* ಮಳೆನೀರು ಕಾಲುವೆಯಲ್ಲಿ ರೆಸ್ಟೋರೆಂಟ್ಗಳ ತ್ಯಾಜ್ಯ
* ಪರಿಸರದಲ್ಲಿ ಗಬ್ಬು ವಾಸನೆ, ಸ್ಥಳೀಯರ ಅಸಮಾಧಾನ
ಉಡುಪಿ: ನಗರದಲ್ಲಿ ಇನ್ನೂ ಸಹ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ್ದರಿಂದ ಮನೆ, ಅಪಾರ್ಟ್ಮೆಂಟ್ ಹಾಗೂ ವಿವಿಧ ಹೋಟೆಲ್-ರೆಸ್ಟೋರೆಂಟ್ಗಳ ತ್ಯಾಜ್ಯವನ್ನು ಚರಂಡಿಗೆ ಬಿಡುವ ಪರಿಪಾಠ ಮುಂದುವರಿದಿದೆ.
ಉಡುಪಿ ನಗರದ ಹೃದಯ ಭಾಗದಲ್ಲಿರುವ ಅಮ್ಮುಂಜೆ ಪೆಟ್ರೋಲ್ ಪಂಪ್ನ ಎದುರು, ಸಮ್ಮರ್ ಪಾರ್ಕ್ ಹೋಟೆಲ್ ಸಮೀಪದಲ್ಲಿ ಮಳೆ ನೀರು ಹರಿಯುವ ಕಾಲುವೆ ಇದ್ದು, ಕೆಲವು ದಿನಗಳಿಂದ ಇಲ್ಲಿ ಡ್ರೈನೇಜ್ ನೀರು ಬಿಡಲಾಗುತ್ತಿದೆ.
ಹೋಟೆಲ್, ಲಾಡ್ಜ್ಗಳ ಶೌಚಾಲಯಗಳ ಕೊಳಕು ನೀರನ್ನು ಚರಂಡಿಗೆ ಬಿಡುತ್ತಿರುವುದರಿಂದ ಈ ಪರಿಸರದಲ್ಲಿ ಗಬ್ಬುವಾಸನೆ ಹಬ್ಬಿದೆ. ದುರ್ನಾತ ತಡೆಯಲಾಗದೆ ಈ ಭಾಗದಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಸಾಗುವಂತಾಗಿದೆ. ನಗರಸಭೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಚರಂಡಿ ಸಮೀಪದಲ್ಲಿರುವ ಅಂಗಡಿಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಳೆಗಾಲ ಸಮೀಪಿಸುತ್ತಿದ್ದಂತೆ ನಗರಸಭಾ ಅಧಿಕಾರಿಗಳು ಮಳೆ ನೀರು ಹರಿಯುವ ಚರಂಡಿಗೆ ಶೌಚಾಲಯಗಳ ಮಲೀನ ನೀರು ಬಿಡದಂತೆ ಪತ್ರಿಕಾ ಪ್ರಕಟಣೆ ನೀಡುತ್ತಾರೆ. ಅಥವಾ ಒಂದಿಷ್ಟು ಮಂದಿಗೆ ನೋಟಿಸ್ ನೀಡಿ ಕೈತೊಳೆದುಕೊಳ್ಳುತ್ತಾರೆ. ಆದರೆ, ಮಣಿಪಾಲ ಸೇರಿದಂತೆ ಉಡುಪಿಯ ಪ್ರಮುಖ ಪ್ರದೇಶಗಳಲ್ಲಿ ಚರಂಡಿಗೆ ಡ್ರೈನೇಜ್ ನೀರು ಬಿಡುತ್ತಾರೆ. ನಗರಸಭೆ ಅಧಿಕಾರಿಗಳು ಈ ಸಮಸ್ಯೆ ಪರಿಶೀಲಿಸಿ ತಕ್ಷಣ ಸೂಕ್ತ ಕ್ರಮ ಜರುಗಿಸಬೇಕು.
— ನಿತ್ಯಾನಂದ ಒಳಕಾಡು. ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ.