ಹೊಸಂಗಡಿಯಲ್ಲಿರುವ ರೈಲ್ವೆ ಕ್ರಾಸಿಂಗ್. 
ಉಡುಪಿ

ಹೊಸಂಗಡಿ ರೈಲ್ವೆ ಮೇಲ್ಸೇತುವೆ ಮರೀಚಿಕೆ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಮಂಜೇಶ್ವರ
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪ್ರಮುಖ ಪಟ್ಟಣವಾದ ಹೊಸಂಗಡಿಯ ಲೆವೆಲ್ ಕ್ರಾಸಿಂಗ್‌ನಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಕೇಂದ್ರದಲ್ಲಿ ಯುಪಿಎ ಆಡಳಿತದ ಅವಧಿಯಲ್ಲಿ ಇ.ಅಹ್ಮದ್ ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿದ್ದಾಗ ಹೊಸಂಗಡಿಯಲ್ಲಿ ರೈಲ್ವೆ ಮೇಲ್ಸೇತುವೆ ಮಂಜೂರು ಮಾಡಲಾಗಿತ್ತು. ಆದರೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ಹಂಚಿಕೆಯಾಗಿ ಎರಡು ದಶಕಗಳೇ ಕಳೆದರೂ ಮುಂದಿನ ಕ್ರಮಗಳನ್ನು ಇನ್ನೂ ತೆಗೆದುಕೊಂಡಿಲ್ಲ. ಮಂಜೇಶ್ವರ ತಾಲೂಕಿನಲ್ಲಿಯೇ ನಾಲ್ಕು ರೈಲ್ವೆ ಕ್ರಾಸಿಂಗ್ ಇವೆ. ಹೊಸಂಗಡಿ, ಮಂಜೇಶ್ವರ, ಮುಟ್ಟಂ ಮತ್ತು ಉಪ್ಪಳದಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ ಇದ್ದು ಈ ಪೈಕಿ ಹೊಸಂಗಡಿಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಇಲಾಖೆ ಮುಂದಾಗಿತ್ತು.
ಜೋಡಣೆ ಬದಲಾವಣೆ: ಹೊಸಂಗಡಿಯಲ್ಲಿ ಮೇಲ್ಸೇತುವೆ ನಿರ್ಮಿಸಲು ಈ ಹಿಂದೆ ಯೋಜನೆಗಾಗಿ 40.4 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು. ಇದಕ್ಕೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಅಧಿಸೂಚನೆಯನ್ನು ಸಹ ಹೊರಡಿಸಿತ್ತು. ನಿರ್ಮಾಣ ಕಾರ್ಯವನ್ನು ಕೇರಳ ರಸ್ತೆಗಳು ಮತ್ತು ಸೇತುವೆಗಳ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿತ್ತು. ಆದರೆ ಈವರೆಗೂ ಯಾವ ಪ್ರಕ್ರಿಯೆಯೂ ಆರಂಭವಾಗಿಲ್ಲ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೊಸ ಆರು ಪಥದ ಹೆದ್ದಾರಿಯೊಂದಿಗೆ, ಪ್ರಸ್ತಾವಿತ ರೈಲ್ವೆ ಮೇಲ್ಸೇತುವೆಗೆ ಜೋಡಣೆಯಲ್ಲಿ ಕೆಲವು ಅಗತ್ಯ ಬದಲಾವಣೆ ಮಾಡಲು ಸರ್ವೇ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚುತ್ತಿರುವ ಅಪಘಾತಗಳು: ರಾಜ್ಯದಲ್ಲಿ ರೈಲ್ವೆ ಗೇಟ್‌ಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು ಅನುಮೋದಿತ ಫ್ಲೈಓವರ್‌ಗಳ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ 24 ರೈಲ್ವೆ ಗೇಟ್‌ಗಳಲ್ಲಿ ವಾಹನಗಳು ಅಪಘಾತಕ್ಕೀಡಾಗಿವೆ. 129 ಗೇಟ್‌ಗಳನ್ನು ಹೊಂದಿರುವ ಪಾಲಕ್ಕಾಡ್ ವಿಭಾಗವೊಂದರಲ್ಲೇ ಕಳೆದ ವರ್ಷ 55 ಅಪಘಾತಗಳು ದಾಖಲಾಗಿವೆ. ಅಜಾಗರೂಕತೆಯಿಂದ ವಾಹನ ಚಲಾಯಿಸುವ ಚಾಲಕರ ಪರವಾನಗಿ ರದ್ದುಗೊಳಿಸಿ, ಅವರಿಂದ 17.28 ಲಕ್ಷ ರೂ. ಪರಿಹಾರವನ್ನು ಇಲಾಖೆ ಸಂಗ್ರಹಿಸಿದೆ. ಆದರೆ ಮೇಲ್ಸೇತುವೆ ನಿರ್ಮಾಣಕ್ಕೆ ಮಾತ್ರ ಮೀನಮೇಷ ಎಣಿಸುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೇಕು ಪಾದಚಾರಿ ಸೇತುವೆಗಳು

ವೃದ್ಧರು ಮತ್ತು ವಿದ್ಯಾರ್ಥಿಗಳು ರೈಲ್ವೆ ಡಬಲ್ ಟ್ರಾೃಕ್ ದಾಟಲು ಕಷ್ಟಪಡುವುದರಿಂದ ಪಾದಚಾರಿ ಸೇತುವೆ ನಿರ್ಮಾಣಕ್ಕೆ ಬೇಡಿಕೆ ಹೆಚ್ಚಿದೆ. ಮೊಗ್ರಾಲ್ ಕೊಪ್ಪಳದಲ್ಲಿ ಪಾದಚಾರಿ ಸೇತುವೆಯನ್ನು ರೈಲ್ವೆ ಪರಿಗಣಿಸುತ್ತಿದೆ. ಅಧಿಕಾರಿಗಳು ಪರಿಶೀಲಿಸಿದ್ದರೂ ಮುಂದಿನ ಕ್ರಮ ಕೈಗೊಳ್ಳಲಾಗಿಲ್ಲ. ಮೆಟ್ರೋಮ್ಯಾನ್ ಇ.ಶ್ರೀಧರನ್ ಪ್ರಸ್ತಾಪಿಸಿದ ಹೈಸ್ಪೀಡ್ ರೈಲು ಮತ್ತು ಕೇಂದ್ರ ರೈಲ್ವೆ ಸಚಿವಾಲಯದ ಪರಿಗಣನೆಯಲ್ಲಿರುವ ಚತುಷ್ಪಥ ರಸ್ತೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು ಮೇಲ್ಸೇತುವೆ ಮತ್ತು ಪಾದಚಾರಿ ಸೇತುವೆಗಳಿಗೆ ಬೇಡಿಕೆ ಕೇಳಿಬರುತ್ತಿದೆ.

ಕಳೆದ ಎರಡೂವರೆ ದಶಕಗಳಿಂದಲೂ ಹೊಸಂಗಡಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಬೇಡಿಕೆ ಇದೆ. ರೈಲುಗಳ ಸಂಚಾರ ವೇಳೆ ಆಗಾಗ ಮುಚ್ಚಲ್ಪಡುವ ಹೊಸಂಗಡಿ ಗೇಟ್‌ನ ಎರಡೂ ಕಡೆಗಳಲ್ಲೂ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದೆ. ತುರ್ತು ಸಂದರ್ಭದಲ್ಲಿ ಪ್ರಯಾಣಕ್ಕೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಶೀಘ್ರ ಮೇಲ್ಸೇತುವೆ ನಿರ್ಮಾಣವಾಗಬೇಕಿದ್ದು ಈ ನಿಟ್ಟಿನಲ್ಲಿ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಲಾಗುವುದು.

— ಎ.ಕೆ.ಎಂ.ಅಶ್ರಫ್ ಮಂಜೇಶ್ವರ ಶಾಸಕ