Arrest 
ಉಡುಪಿ

ಹೊಸಂಗಡಿ ಕೊಲೆ ಪ್ರಕರಣ ಆರೋಪಿ ಸೆರೆ

ಇಂದಿರಾ ಎನ್ ಕೆ
ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಂಗಡಿ ಅಂಗಡಿಪದವಿನಲ್ಲಿ ಕರ್ನಾಟಕ ಹೊಸಪೇಟೆಯ ಚಿಕ್ಕನಾಯಕನ ಹಳ್ಳಿಯ ರಮೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದಾವಣಗೆರೆ ಪರಪ್ಪನಹಳ್ಳಿ ಮೂಲದ ರಮೇಶ್ ಯಾನೆ ರಾಮ್ ನಾಯ್ಕ(31) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಮಂಜೇಶ್ವರ ಠಾಣೆ ಎಸ್.ಐ.ವಿಷ್ಣುಪ್ರಸಾದ್ ನೇತೃತ್ವದ ತಂಡ ಆರೋಪಿಯನ್ನು ಮಂಗಳೂರು ಪಡೀಲ್‌ನ ಇತರ ರಾಜ್ಯ ಕಾರ್ಮಿಕರ ಮನೆಯೊಂದರಿಂದ ಶನಿವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದೆ.

ಪ್ರಕರಣದ ವಿವರ

ರಮೇಶ್ ಹೊಸಂಗಡಿಯಲ್ಲಿ ಕೂಲಿಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಆರೋಪಿ ರಾಮ್‌ನಾಯ್ಕ ಯಾನೆ ರಮೇಶ್ ವಾಸಿಸುತ್ತಿದ್ದ ಅಂಗಡಿಪದವಿನ ಬಾಡಿಗೆ ಮನೆಯೊಂದರ ಅಡುಗೆ ಕೊಠಡಿಯಲ್ಲಿ ಶುಕ್ರವಾರ ರಾತ್ರಿ ತಲೆ ಛಿದ್ರಗೊಂಡ ಸ್ಥಿತಿಯಲ್ಲಿ ರಮೇಶ ಮೃತದೇಹ ಪತ್ತೆಯಾಗಿತ್ತು. ಕೊಲೆಯಾದ ರಮೇಶ್ ಮತ್ತು ಆರೋಪಿ ರಾಮ್ ನಾಯ್ಕ ಸ್ನೇಹಿತರಾಗಿದ್ದು, ಘಟನೆ ನಡೆದ ದಿನ ಸಂಜೆ ಇಬ್ಬರೂ ಮನೆಯಲ್ಲಿ ಮದ್ಯಪಾನ ಮಾಡುತ್ತಿದ್ದ ವೇಳೆ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತಿನ ತಕರಾರು ಉಂಟಾಗಿತ್ತು. ಈ ವೇಳೆ ರಮೇಶ್ ಅವರನ್ನು ಇರಿದು ಕೊಲೆ ಮಾಡಿರುವುದಾಗಿ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.