ಮೆಸ್ಕಾಂ ವತಿಯಿಂದ ನಿವೃತ್ತರಾದ ಲೈನ್ ಮೆಕಾನಿಕ್ ಪಾಲಾಕ್ಷಯ್ಯ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಸತೀಶ್ ಸಪಲ್ಯ, ಹರೀಶ್ ಎಸ್.ಇಂಜಾಡಿ, ನಾರಾಯಣ ಶೆಣೈ, ಚಿದಾನಂದ ಕೆ., ಹರಿಕೃಷ್ಣ ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ: ಜನರ ಹಿತಕ್ಕಾಗಿ ಕಾರ್ಯತತ್ಪರವಾದ ಸೇವೆ ನೆರವೇರಿಸಿದರೆ ಜನ ಹೆಚ್ಚಿನ ಗೌರವ ನೀಡುತ್ತಾರೆ. ಮೆಸ್ಕಾಂನಲ್ಲಿ 27 ವರ್ಷ ಸಾರ್ವಜನಿಕರಿಗೆ ಉಪಯುಕ್ತವಾಗುವ ರೀತಿಯಲ್ಲಿ ಸೇವೆ ಸಲ್ಲಿಸಿದ ಕಾರಣ ಪಾಲಾಕ್ಷ ಅವರು ಸದಾ ಮಾದರಿಯಾಗಿದ್ದಾರೆ. ಅವರ ಸೇವೆ ಗುರುತಿಸಿ ಸಂಘ ಸಂಸ್ಥೆಗಳು, ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ ರೀತಿ ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ಹೇಳಿದರು.
ಮಂಗಳೂರು ವಿದ್ಯುತ್ ಸರಬರಾಜು ಕಂಪನಿ, ಮೆಸ್ಕಾಂ ಸುಬ್ರಹ್ಮಣ್ಯ ಉಪ ವಿಭಾಗ ವತಿಯಿಂದ ಲೈನ್ ಮೆಕಾನಿಕ್ ಆಗಿ 27 ವರ್ಷ ಸೇವೆ ಸಲ್ಲಿಸಿ ಶುಕ್ರವಾರ ನಿವೃತ್ತರಾದ ಪಾಲಾಕ್ಷಯ್ಯ ಅವರಿಗೆ ವಲ್ಲೀಶ ಸಭಾಭವನದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಸುಬ್ರಹ್ಮಣ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ ಸಪಲ್ಯ ಅಧ್ಯಕ್ಷತೆ ವಹಿಸಿದ್ದರು. ಪಾಲಾಕ್ಷಯ್ಯ ದಂಪತಿಗಳನ್ನು ಸುಬ್ರಹ್ಮಣ್ಯ ಮೆಸ್ಕಾಂ ಉಪ ವಿಭಾಗದಿಂದ ಗೌರವಿಸಲಾಯಿತು. ಬಳಿಕ ವಿವಿಧ ಸಂಘ ಸಂಸ್ಥೆಗಳು, ಅಭಿಮಾನಿಗಳು ಸನ್ಮಾನಿಸಿದರು.
ಪುತ್ತೂರು ವಿಭಾಗದ ಹಿರಿಯ ಲೆಕ್ಕಾಧಿಕಾರಿ ನಾರಾಯಣ ಶೆಣೈ, ಸುಬ್ರಹ್ಮಣ್ಯ ಶಾಖಾ ಸಹಾಯಕ ಇಂಜಿನಿಯರ್ ಚಿದಾನಂದ ಕೆ., ನೌಕರರ ಸಂಘದ ಜಯರಾಜ್ ಪುತ್ತೂರು, ನಿವೃತ್ತ ಶಾಖಾಧಿಕಾರಿ ಬೋರಯ್ಯ, ಗುತ್ತಿಗಾರು ಶಾಖಾಧಿಕಾರಿ ಲೊಕೇಶ್ ಎಣ್ಣೆಮಜಲ್, ದ.ಕ. ಜಿಲ್ಲಾ ಗುತ್ತಿಗೆದಾರರ ಸಂಘ ಸದಸ್ಯ ಮಾಯಿಲಪ್ಪ ಸಂಕೇಸ, ಹರಿಕೃಷ್ಣ, ಸುಬ್ರಹ್ಮಣ್ಯ ಉಪ ವಿಭಾಗದ ಹಿರಿಯ ಸಹಾಯಕ ಪ್ರಭಾಕರ್ ಕಳಿಗೆ, ಪ್ರಮುಖರಾದ ವೆಂಕಟ್ ವಳಲಂಬೆ, ರಾಜೇಶ್ ಎನ್.ಎಸ್., ವಿಶ್ವನಾಥ ನಡುತೋಟ, ಮಾಧವ ಗೌಡ, ಭವಾನಿಶಂಕರ ಪುಂಬಾಡಿ, ಅಚ್ಯುತ ಗೌಡ ಇದ್ದರು.