ಉಡುಪಿ ಹಿರಿಯಡ್ಕದ ಕರ್ನಾಟಕ ಪಬ್ಲಿಕ್​ ಸ್ಕೂಲ್​ನಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಡಾ. ಅಶೋಕ್​ ಕಾಮತ್​ ಮಾತನಾಡಿದರು. ಕುಯಿಲಾಡಿ ಸುರೇಶ್​ ನಾಯಕ್​, ಬಿ.ಎಲ್​. ವಿಶ್ವಾಸ್​, ಮಂಜುನಾಥ್​ ಭಟ್​, ಪ್ರಕಾಶ್​ ಪ್ರಭು ಇದ್ದರು. 
ಉಡುಪಿ

ಕಷ್ಟಪಡದೆ ಇಷ್ಟಪಟ್ಟು ಖುಷಿಯಿಂದ ಓದಿ

* ಡಯಟ್​ ಪ್ರಾಂಶುಪಾಲ ಡಾ.ಅಶೋಕ್​ ಕಾಮತ್​ ಸಲಹೆ

* ಎಸ್​ಎಸ್​ಎಲ್​ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಉಡುಪಿ: ವಿದ್ಯಾರ್ಥಿಗಳು ಜೀವನದಲ್ಲಿ ಒಂದು ಗುರಿ ಅಥವಾ ಸಂಕಲ್ಪ ಮಾಡುವುದು ಎಷ್ಟು ಮುಖ್ಯವೋ ಅದನ್ನು ಸಾಧಿಸಲು ಅಷ್ಟೇ ಬದ್ಧತೆಯಿಂದ ಶ್ರಮಿಸುವುದೂ ಸಹ ಅತಿಮುಖ್ಯ. ಕೇವಲ ಪರೀಕ್ಷೆಗಾಗಿ ಅಥವಾ ಪಾಲಕರು, ಶಿಕ್ಷಕರ ಒತ್ತಾಯಕ್ಕಾಗಿ ಕಷ್ಟಪಟ್ಟು ಬಾಯಿಪಾಠ ಮಾಡುವ ಬದಲು ಪ್ರತಿ ವಿಷಯವನ್ನೂ ಅರ್ಥಮಾಡಿಕೊಂಡು ಇಷ್ಟಪಟ್ಟು ಖುಷಿಯಿಂದ ಓದಬೇಕು. ಕಲಿಯುವ ಪ್ರಕ್ರಿಯೆಯನ್ನೂ ಸಂಭ್ರಮಿಸಬೇಕು ಎಂದು ಡಯಟ್​ ಪ್ರಾಂಶುಪಾಲ ಡಾ.ಅಶೋಕ್​ ಕಾಮತ್​ ಸಲಹೆ ನೀಡಿದರು.
ಉಡುಪಿ ಹಿರಿಯಡ್ಕದ ಕರ್ನಾಟಕ ಪಬ್ಲಿಕ್​ ಸ್ಕೂಲ್​ನಲ್ಲಿ ಆಯೋಜಿಸಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಸನ್ಮಾನ ಹಾಗೂ ವಿದ್ಯಾರ್ಥಿಗಳ ಸಂಸತ್​ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅವಕಾಶ ಸೃಷ್ಟಿಸಿಕೊಳ್ಳಿ
ಶಾಲೆಯ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಕುಯಿಲಾಡಿ ಸುರೇಶ್​ ನಾಯಕ್​ ಮಾತನಾಡಿ, ವಿದ್ಯಾರ್ಥಿಗಳು ಅವಕಾಶಗಳಿಗಾಗಿ ಕಾಯದೆ ತಾವೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ಶಾಲೆ, ಹೆತ್ತ ತಂದೆ&ತಾಯಿ, ಹುಟ್ಟಿದ ಊರು ಮತ್ತು ಊರಿನ ದೇವಸ್ಥಾನಗಳನ್ನು ಮರೆಯಬಾರದು. ನಮ್ಮಿಂದಾದ ಸಣ್ಣ ಕೊಡುಗೆ ನೀಡಿದಾಗ ಮಾತ್ರ ನಾವೆಲ್ಲರೂ ಉತ್ತಮ ಸಮಾಜದ ಜವಾಬ್ದಾರಿಯುತ ಪ್ರಜೆಗಳಾಗಲು ಸಾಧ್ಯ ಎಂದರು.
ಸಂಸ್ಥೆಯ ಪ್ರಾಂಶುಪಾಲ ಮಂಜುನಾಥ್​ ಭಟ್​ ಅಧ್ಯಕ್ಷತೆ ವಹಿಸಿದ್ದರು. ಎಸ್​ಡಿಎಂಸಿ ಉಪಾಧ್ಯಕ್ಷ ಬಿ.ಎಲ್​. ವಿಶ್ವಾಸ್​, ಸದಸ್ಯರಾದ ಅಶೋಕ್​ಜೋಗಿ, ವಿಜೇತ್​ ಕುಮಾರ್​ ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲ ಪ್ರಕಾಶ್​ ಪ್ರಭು ಸ್ವಾಗತಿಸಿದರು. ಹಿಂದಿ ಅಧ್ಯಾಪಕ ರವೀಂದ್ರ ಪ್ರಭು ವಂದಿಸಿದರು. ಕನ್ನಡ ಅಧ್ಯಾಪಕರಾದ ವಿಜಯ್​ ಕುಮಾರ್​ ಇವರು ವಿಶಿಷ್ಟ ಶ್ರೇಣಿಯ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ವಿಜ್ಞಾನ ಅಧ್ಯಾಪಕ ರಾಘವ್​ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
"

ಹದಿಹರೆಯದ ಪ್ರಾಯದಲ್ಲಿ ಸಾಕಷ್ಟು ಗೊಂದಲ, ತೊಂದರೆ ಮತ್ತು ಆಕರ್ಷಣೆ ಇರುತ್ತವೆ. ಆದರೆ ಇವೆಲ್ಲದರ ನಡುವೆ ವಿದ್ಯಾರ್ಥಿಗಳು ಓದಿನತ್ತ ಹೆಚ್ಚು ಗಮನ ಹರಿಸುವುದು ಮುಖ್ಯ. ವಿದ್ಯಾರ್ಥಿ ಜೀವನದಲ್ಲಿಯೇ ಪ್ರಜಾಪ್ರಭುತ್ವದ ಮೌಲ್ಯ ಅಳವಡಿಸಿಕೊಳ್ಳಬೇಕು. ಪ್ರತಿ ವಿದ್ಯಾರ್ಥಿಯೂ ಇತರರಿಗೆ ತೊಂದರೆಯಾಗದಂತೆ ನಡೆದುಕೊಳ್ಳುವ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು.

— ಡಾ. ಅಶೋಕ್​ ಕಾಮತ್​. ಡಯಟ್​ ಪ್ರಾಂಶುಪಾಲ.