ಕುಂದಾಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ನಡೆಯಿತು. ಪ್ರಮುಖರಾದ ಎಚ್.ಹರಿಪ್ರಸಾದ್ ಶೆಟ್ಟಿ, ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ಸುದಿಜಾಲ ಕುಂದಾಪುರ
ಗೃಹಜ್ಯೋತಿ ಯೋಜನೆ ಪರಿಷ್ಕರಣೆ ನಡೆಯುತ್ತಿದ್ದು, ಸಂಬಂಧಪಟ್ಟ ಇಲಾಖೆಯವರು ಯಶಸ್ವಿಯಾಗಿ ಪರಿಷ್ಕರಣೆ ಕಾರ್ಯ ನಡೆಸಿದ್ದಾರೆ. ಪರಿಷ್ಕರಣೆಗೆ ಬಾಕಿ ಉಳಿದವುಗಳನ್ನು ಇಲಾಖೆಯವರು ಸ್ಥಳೀಯ ಮುಖಂಡರ ಜತೆ ಸೇರಿ ಮಾಡಲಿದ್ದಾರೆ ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಹರಿಪ್ರಸಾದ್ ಶೆಟ್ಟಿ ಹೇಳಿದರು.
ಕುಂದಾಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೇರಿಕುದ್ರು ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆ ಹಾಗೂ ಅಮಾಸೆಬೈಲ್‌ನ ಬಸ್ಸನ್ನು ನಿಗದಿತ ಸಮಯಕ್ಕೆ ಓಡಿಸುವ ಕುರಿತು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸೂಕ್ತ ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಮುಂದಿನ ಅಕ್ಟೋಬರ್‌ನಿಂದ ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ ನಡೆಯಲಿದೆ. ಆಧಾರ ಕಾರ್ಡ್ ಅಪ್‌ಡೇಟ್ ಮಾಡಿ ಇಟ್ಟುಕೊಂಡರೆ ಪರಿಷ್ಕರಣೆಗೆ ಅನುಕೂಲವಾಗಲಿದೆ. ಸದಸ್ಯರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆಧಾರ್‌ಕಾರ್ಡ್ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂದರು.
ಕೆವೈಸಿ ಅಪ್‌ಡೇಟ್ ಸಮಸ್ಯೆ
ಗೃಹಜ್ಯೋತಿ ಯೋಜನೆಯಡಿ ಪರಿಷ್ಕರಣೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಬಾಕಿ ಉಳಿದ ಮರು ನೋಂದಣಿ ಕಾರ್ಯವನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು. ಕೆವೈಸಿ ಅಪ್‌ಡೇಟ್ ಆಗದಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.
ಗೃಹಲಕ್ಷ್ಮೀ ಯೋಜನೆಯಡಿ ಸದ್ಯ ಯಾವುದೇ ಹೊಸ ಅರ್ಜಿ ಸ್ವೀಕರಿಸಲಾಗುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರೇಖಾ ತಿಳಿಸಿದರು.
ಅರ್ಹರಿಗಿಲ್ಲ ಜಾತಿ ಪ್ರಮಾಣಪತ್ರ
ಅನ್ನಭಾಗ್ಯ ಯೋಜನೆಯಡಿ ಪ.ಜಾತಿ/ಪ.ಕುಟುಂಬದವರಿಗೆ ಜಾತಿ ಪ್ರಮಾಣ ಪತ್ರ ಇಲ್ಲದೆ ಪಡಿತರ ನೀಡುತ್ತಿಲ್ಲ. ಅರ್ಹರಿಗೆ ಜಾತಿ ಪ್ರಮಾಣ ಪತ್ರ ನೀಡಲು ಇಲಾಖೆ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಮೊದಲು ಅರ್ಜಿ ಹಾಕಿದವರಿಗೆ ಮಾತ್ರ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂತು. ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿ ಸುರೇಶ ಮಾಹಿತಿ ನೀಡಿದರು.
ಪ್ರಯಾಣಿಕರಿಲ್ಲದೆ ಸಂಚಾರ ಸ್ಥಗಿತ
ಕೊಲ್ಲೂರಿಗೆ ಬೇರೆ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳು ಬರುತ್ತಿದ್ದು, ನಮ್ಮ ರಾಜ್ಯದ ಬಸ್‌ಗಳ ಸಂಚಾರ ವಿರಳವಾಗಿದೆ. ಕೊಲ್ಲೂರಿಗೆ ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಆರಂಭಿಸಬೇಕು ಎಂದು ಸದಸ್ಯರು ಆಗ್ರಹಿಸಿದರು. ಪ್ರಸ್ತುತ ಸ್ಥಿತಿಯಲ್ಲಿ ಕುಂದಾಪುರ ಡಿಪೋದಿಂದ ಯಾವುದೇ ಹೊಸ ಬಸ್ ಓಡಿಸುವ ಸ್ಥಿತಿ ಇಲ್ಲ. ಶಕ್ತಿ ಯೋಜನೆ ಬಂದ ಬಳಿಕ ಸರ್ಕಾರಿ ಬಸ್‌ಗಳಲ್ಲಿ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಇದಕ್ಕೂ ಮೊದಲು ಪ್ರಯಾಣಿಕರಿಲ್ಲ ಎಂಬ ಕಾರಣಕ್ಕೆ ಹಲವು ಮಾರ್ಗಗಳಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು ಎಂದು ಡಿಪೋ ಮ್ಯಾನೇಜರ್ ಉದಯ ಶೆಟ್ಟಿ ತಿಳಿಸಿದರು.