ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.  
ಉಡುಪಿ

30 ಮಂದಿ ಗೃಹರಕ್ಷಕರು ಪೊಲೀಸ್​ ಇಲಾಖೆಗೆ ಭಡ್ತಿ: ಎಸ್ಪಿ ಹರಿರಾಮ್​ ಶಂಕರ್

ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಗೃಹರಕ್ಷಕದಳದ ವತಿಯಿಂದ ನಡೆದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭ

ಉಡುಪಿ: ಕಾನೂನು ಸುವ್ಯವಸ್ಥೆ, ಬಂದೋಬಸ್ತ್​ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸ್​ ಇಲಾಖೆ ಜೊತೆ ಗೃಹರಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ದಕ್ಷತೆಯಿಂದ ಕಾರ್ಯನಿರ್ವಹಿಸಿದ 30 ಮಂದಿ ಗೃಹರಕ್ಷಕರನ್ನು ಪೊಲೀಸ್​ ಇಲಾಖೆಗೆ ನಿಯೋಜಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ವರಿಷ್ಠಾಧಿಕಾರಿ ಹರಿರಾಮ್​ ಶಂಕರ್​ ಹೇಳಿದರು.

ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಗೃಹರಕ್ಷಕದಳದ ವತಿಯಿಂದ ನಡೆದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು.

ಪೊಲೀಸ್​ ಇಲಾಖೆಯಲ್ಲಿ 30 ಹುದ್ದೆಗಳು ಶ್ರೀಘ್ರ ತೆರವಾಗಲಿದ್ದು, ಈ ಹಿನ್ನೆಲೆಯಲ್ಲಿ 30 ಮಂದಿಗೆ ಅವಕಾಶ ನೀಡಲಾಗುವುದು. ಜಿಲ್ಲೆಯಲ್ಲಿ ಅಕ್ಕ ಪಡೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಜನರಿಂದ ಮೆಚ್ಚುಗೆ ಪಡೆದಿದೆ. ಗೃಹರಕಕ್ಷಕರು ತಮ್ಮ ಮಾನಸಿಕ ಆರೋಗ್ಯ ಹಾಗೂ ದೈಹಿಕ ಸಾಮರ್ಥ್ಯ ವೃದ್ದಿಸಿಕೊಳ್ಳಲು ಕ್ರೀಡೆ ಸಹಾಯ ಮಾಡುತ್ತದೆ ಎಂದರು.

ಉದ್ಯಮಿ ಅಜಯ್​ ಪುರುಷೋತ್ತಮ ಶೆಟ್ಟಿ ಮಾತನಾಡಿ, 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕಾನೂನು ಸುವ್ಯವಸ್ಥೆ ಸವಾಲಿನ ಸಂಗತಿ. ಈ ನಿಟ್ಟಿನಲ್ಲಿ ಪೊಲೀಸರಿಗೆ ಗೃಹರಕ್ಷಕ ದಳದ ಬೆಂಬಲ ಅತೀ ಅಗತ್ಯವಾಗಿದೆ. ರಾಷ್ಟ್ರ ಮೊದಲು ಎಂಬ ಭಾವನೆಯಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದರು.

ಗೃಹರಕ್ಷಕದಳದ ಸಮಾದೇಷ್ಟ ಡಾ. ರೋಶನ್​ ಕುಮಾರ್​ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಉದ್ಯಮಿ ಸಂಪತ್​ ಶೆಟ್ಟಿ, ಚಿಕ್ಕಮಗಳೂರು ಜಿಲ್ಲೆಯ ಗೃಹರಕ್ಷಕ ದಳದ ಸಮಾದೇಷ್ಟ ನಸೀಮ್​ ತಾಜ್​ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಡುಪಿ ಜಿಲ್ಲೆ ಗೃಹರಕ್ಷಕ ದಳದ ಸೆಕೆಂಡ್​ ಇನ್​ ಕಮಾಂಡ್​ ರಾಜೇಶ್​ ಕೆ.ಸಿ. ಸ್ವಾಗತಿಸಿದರು. ಬ್ರಹ್ಮಾವರ ಪಿಎಲ್​ ಸಿ ಘಟಕ್​ ಸ್ಟೀವನ್​ ಪ್ರಕಾಸ್​ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.