ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಧರ್ಮಯಾನ ಶೋಭಾಯಾತ್ರೆಯ ಪ್ರಚಾರ ವಾಹನಕ್ಕೆ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ಚಾಲನೆ ನೀಡಿದರು. ಪ್ರತಾಪಸಿಂಹ ನಾಯಕ್, ಶಶಿಧರ ಶೆಟ್ಟಿ ನವಶಕ್ತಿ, ಕೆ.ಮೋಹನ ಕುಮಾರ್ ಮೊದಲಾದವರು ಇದ್ದರು.  
ಉಡುಪಿ

ಉಜಿರೆಯಲ್ಲಿ ಐತಿಹಾಸಿಕ ಧರ್ಮಯಾನ

ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಾ.11ರಂದು ನಡೆಯಲಿರುವ ಉಜಿರೆಯ ಐತಿಹಾಸಿಕ ಶೋಭಾಯಾತ್ರೆ ‘ಧರ್ಮಯಾನ’ದ ಪ್ರಚಾರವಾಹನ ಅಭಿಯಾನಕ್ಕೆ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ಶನಿವಾರ ಚಾಲನೆ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್, ವಿಜಯಗೋಪುರ ನಿರ್ಮಾಣ ಸಮಿತಿ ಅಧ್ಯಕ್ಷ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ, ಧರ್ಮಯಾನ ಶೋಭಾಯಾತ್ರೆ ಸಂಯೋಜಕ ಹಾಗೂ ಪ್ರಧಾನ ಸಂಚಾಲಕ ಕೆ.ಮೋಹನ ಕುಮಾರ್, ಕೆ.ಮೋಹನ ಶೆಟ್ಟಿಗಾರ್, ರವೀಂದ್ರ ಶೆಟ್ಟಿ ಸುರಭಿ, ಚಿತ್ರೇಶ್ ಶೆಟ್ಟಿ, ರವಿಕುಮಾರ್ ಬರಮೇಲು, ಡಾ.ಶ್ರೀಧರ ಭಟ್, ಮಂಜುನಾಥ ಕಾಮತ್, ಪ್ರಸಾದ್ ಬಿ.ಎಸ್., ದಿನೇಶ್ ಕೋಟ್ಯಾನ್, ವಿಶ್ವನಾಥ್ ಶೆಟ್ಟಿ, ದೇವಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಧರ್ಮಯಾನ ಶೋಭಾಯಾತ್ರೆಯಲ್ಲಿ ಸಾವಿರಕ್ಕೂ ಅಧಿಕ ಕಲಾವಿದರನ್ನೊಳಗೊಂಡ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಣಾಧಿಕಾರಿ ಅನಿಲ್‌ಕುಮಾರ್ ಎಸ್.ಎಸ್., ಶಶಿಧರ್ ಶೆಟ್ಟಿ ನವಶಕ್ತಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಸಹಕರಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಮೆರವಣಿಗೆಯಲ್ಲಿ ಗಣ್ಯರ ಆಗಮನ

ಸಂಜೆ 4ರಿಂದ ಉಜಿರೆ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಿಂದ ಶ್ರೀ ಜನಾರ್ದನ ದೇವಸ್ಥಾನದ ತನಕ ಧರ್ಮಯಾನ ಶೋಭಾಯಾತ್ರೆ ನಡೆಯಲಿದ್ದು, ಸರ್ವಾಲಂಕೃತ ಮೂರು ರಥಗಳಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಉಡುಪಿ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಗಳು , ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ಹಾಗು ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ಅವರನ್ನು ಮೆರವಣಿಗೆಯಲ್ಲಿ ಸ್ವಾಗತಿಸಲಾಗುತ್ತದೆ.