ಮಣಿಪಾಲದಲ್ಲಿ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮವನ್ನು ಪಿ.ಜಿ. ಪಂಡಿತ್ ಉದ್ಘಾಟಿಸಿದರು. ಪ್ರಕಾಶ್ ಮಲ್ಪೆ, ಸುಮತಾ ನಾಯಕ್, ಉಮೇಶ್ ಸಾಲಿಯಾನ್, ಸುರೇಶ್ ಆಚಾರ್ಯ, ಅಮ್ಮುಂಜೆ ನಾಯಕ್ ಇದ್ದರು.
* ಚಿಂತಕ ಪ್ರಕಾಶ್ ಮಲ್ಪೆ ಅಭಿಮತ
* 'ಹಿಂದೂ ಸಂಗಮ'ದಲ್ಲಿ ಉಪನ್ಯಾಸ
ಉಡುಪಿ: ಕೇವಲ ಪ್ರಕೃತಿಯಂದಷ್ಟೇ ಭಾರತವು ದೊಡ್ಡ ದೇಶವಲ್ಲ. ಬೇರಾವುದೇ ದೇಶಗಳಲ್ಲಿ ಇಲ್ಲದಷ್ಟು ಅನೇಕ ಮೌಲ್ಯಗಳನ್ನು ಜಗತ್ತಿಗೆ ನಮ್ಮ ದೇಶ ನೀಡಿದೆ. ಕುಡಿಯಲು ನೀರು ಕೇಳಿದರೆ ಹಾಲು ನೀಡುವ ಸಂಸ್ಕೃತಿ ಭಾರತದ್ದು ಎಂದು ಅಮೆರಿಕದ ಪ್ರವಾಸಿಗನೋರ್ವ ತನ್ನ ಪುಸ್ತಕದಲ್ಲಿ ಬರೆದಿದ್ದಾನೆ. ಅಂತಹ ಮೌಲ್ಯವೇ ಹಿಂದು ಧರ್ಮ. ಅದೊಂದು ಜೀವನದ ಪದ್ಧತಿಯೇ ಹೊರತು ಪೂಜಾ ಪದ್ಧತಿಯಲ್ಲ. ಪಡೆದಿದ್ದೆಲ್ಲವನ್ನೂ ಜಗತ್ತಿಗೆ ನೀಡಬೇಕು ಎನ್ನುವುದೇ ಭಾರತದ ಹಿಂದೂ ಧರ್ಮದ ಮೌಲ್ಯವಾಗಿದೆ ಎಂದು ಚಿಂತಕ ಪ್ರಕಾಶ್ ಮಲ್ಪೆ ತಿಳಿಸಿದರು.
ಮಣಿಪಾಲದ ಹುಡ್ಕೋ ಗಾರ್ಡನ್ನಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಈಶ್ವರ ನಗರ ವಸತಿ ಮಣಿಪಾಲ ವತಿಯಿಂದ ಆಯೋಜಿಸಿದ್ದ 'ಹಿಂದೂ ಸಂಗಮ' ಕಾರ್ಯಕ್ರಮದಲ್ಲಿ ಮಾತನಾಡಿ, ವಿಶ್ವಕ್ಕೆ ಹಿರಿಯಣ್ಣ ಎಂಬ ಖ್ಯಾತಿ ಗಳಿಸಿರುವ ಅಮೆರಿಕಕ್ಕಿಂತ ಭಾರತ ಹೇಗೆ ಶ್ರೇಷ್ಠ ಎನ್ನುವುದನ್ನು ಮನೋಜ್ಞವಾಗಿ ವಿವರಿಸಿದರು.
ಹಿಂದುಗಳೆಲ್ಲ ಒಗ್ಗಟ್ಟಾಗೋಣ
ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಪ್ರಾಂಶುಪಾಲ ಪಿ.ಜಿ. ಪಂಡಿತ್ ಮಾತನಾಡಿ, ನಾವೆಲ್ಲ ಹಿಂದೂಗಳು ರಾಷ್ಟ್ರಹಿತಕ್ಕಾಗಿ ಒಗ್ಗಟ್ಟಾಗಿ ಮುಂದೆ ಸಾಗೋಣ ಎಂದರು. ಸುಮತಾ ನಾಯಕ್ ಮಾತನಾಡಿ, ಭಾರತದ ಪುರಾತನ ಧರ್ಮ, ಯೋಗ ಹಾಗೂ ಧ್ಯಾನದ ಬಗ್ಗೆ ಮಾಹಿತಿ ನೀಡಿದರು. ಸಮಿತಿಯ ಸಂಚಾಲಕ ಉಮೇಶ್ ಸಾಲಿಯಾನ್, ಸಹ ಸಂಚಾಲಕ ಸುರೇಶ್ ಆಚಾರ್ಯ, ಅಮ್ಮುಂಜೆ ನಾಯಕ್ ಉಪಸ್ಥಿತರಿದ್ದರು.
ಶೋಭಾಯಾತ್ರೆಗೆ ಚಾಲನೆ
ಮಣಿಪಾಲದ ಬಬ್ಬು ಸ್ವಾಮಿ ದೈವಸ್ಥಾನದ ಬಳಿ ಬೃಹತ್ ಶೋಭಾಯಾತ್ರೆಗೆ ಶಾಸಕ ಯಶ್ಪಾಲ್ ಸುವರ್ಣ ಚಾಲನೆ ನೀಡಿದರು. ಸಂಚಾಲಕ ಉಮೇಶ್ ಸಾಲಿಯಾನ್, ಸಹಸಚಾಲಕರಾದ ಉಮೇಶ್ ಆಚಾರ್ಯ, ಕಿರಣ್ ಶೆಟ್ಟಿ, ದಿನೇಶ್ ಶೆಟ್ಟಿ, ಅಜಯ್ ಶೆಟ್ಟಿ, ಶ್ಯಾಮಲಾ ಭಂಡಾರಿ, ಕಲ್ಪನಾ ಸುಧಾಮ, ನರಸಿಂಹ ನಾಯಕ್, ನಿತಿನ್ ಪೈ, ಹರೀಶ್ ಹೆಗ್ಡೆ, ಆನಂದ್ ಭಟ್, ವಿನಯ ಕಾಮತ್, ಸಂತೋಷ್ ಪೈ, ಶೈಲೇಂದ್ರ ಶೆಟ್ಟಿ, ಶ್ರೀನಾಥ್, ದಿವಾಕರ ಕಿಣಿ, ದೀಪಕ್ ಕಿಣಿ ಇತರರು ಇದ್ದರು.
ಶೋಭಾಯಾತ್ರೆಯು ಮಣಿಪಾಲ ಮುಖ್ಯ ರಸ್ತೆಯ ಟೈಗರ್ ಸರ್ಕಲ್, ಸಿಂಡ್ ಸರ್ಕಲ್, ಅನಂತನಗರ ಮುಂದೆ ಸಾಗಿ ಹುಡ್ಕೋ ಕಾಲನಿಯ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ಉದ್ಯಾನವನದಲ್ಲಿ ಸಂಪನ್ನಗೊಂಡಿತು. 10 ಭಜನಾ ತಂಡ, ಡೊಳ್ಳು ಕುಣಿತ, 12 ಟ್ಯಾಬ್ಲೋ, ನಾಸಿಕ್ ಬ್ಯಾಂಡ್, ಕುಣಿತ ಭಜನಾ ತಂಡ, ತಾಲೀಮು, ಪೌರಾಣಿಕ ವೇಷಗಳು ಶೋಭಾಯಾತ್ರೆಯ ಮೆರುಗು ಹೆಚ್ಚಿಸಿದವು. 2 ಸಾವಿರಕ್ಕೂ ಅಧಿಕ ಹಿಂದೂ ಬಾಂಧವರು ಪಾಲ್ಗೊಂಡಿದ್ದರು.
ಶ್ಯಾಮಲಾ ಕುಂದರ್ ಪ್ರಾರ್ಥಿಸಿದರು. ನರಸಿಂಹ ನಾಯಕ್ ಸ್ವಾಗತಿಸಿದರು. ಡಾ.ವಿನಾಯಕ ಶೆಣೈ ವಂದಿಸಿದರು, ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಾಯಾ ಕಾಮತ್ ಬಳಗದವರಿಂದ ದೇಶಭಕ್ತಿ ಗೀತೆ, ಪರಿಸರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿದುಷಿ ಉಷಾ ಹೆಬ್ಬಾರ್ ತಂಡದಿಂದ ನಡೆದ ದೇಶಭಕ್ತಿ ಗೀತೆಗಳ ಗಾಯನ ಗಮನ ಸೆಳೆಯಿತು.