ಉಡುಪಿಯ ಅಂಬಲಪಾಡಿಯಲ್ಲಿ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದ ಶೋಭಾಯಾತ್ರೆಗೆ ಡಾ. ನಿ.ಬೀ. ವಿಜಯ ಬಲ್ಲಾಳ್ ಚಾಲನೆ ನೀಡಿದರು. ವಿಶು ಶೆಟ್ಟಿ, ಪ್ರಶಾಂತ್ ಅರೆಶೀರೂರು, ಶೇಖರ್ ಶೆಟ್ಟಿಗಾರ್, ಶಿವಕುಮಾರ್ ಅಂಬಲಪಾಡಿ, ಜಯ ಭಂಡಾರಿ, ರಮೇಶ್ ಸಾಲ್ಯಾನ್ ಇತರರಿದ್ದರು.
* ವಿಶು ಶೆಟ್ಟಿ ಅಂಬಲಪಾಡಿ ಆಗ್ರಹ
* ಹಿಂದೂ ಸಂಗಮ ಕಾರ್ಯಕ್ರಮ
ಉಡುಪಿ: ಇಂದಿನ ಹೆಚ್ಚಿನ ಮಕ್ಕಳಿಗೆ ಆಧ್ಯಾತ್ಮಿಕ ವಿಚಾರಗಳ ಲವಲೇಷವೂ ತಿಳಿದಿಲ್ಲ. ಯಾಂತ್ರೀಕೃತ ಬದುಕಿನಲ್ಲಿ ಸಿಲುಕಿರುವ ಪಾಲಕರಿಗೂ ಮಾಯಣ, ಮಹಾಭಾರತದಂತಹ ಆಧ್ಯಾತ್ಮಿಕ ವಿಚಾರ ತಿಳಿಸಲೂ ಸಮಯವಿಲ್ಲ. ಬಹುತೇಕ ವಿದ್ಯಾಸಂಸ್ಥೆಗಳೆಲ್ಲ ವ್ಯಾಪಾರೀಕರಣಗೊಳ್ಳುತ್ತಿದೆ. ಹೀಗಾಗಿ ಯುವಜನರ ಭವಿಷ್ಯಕ್ಕಾಗಿ, ಎಲ್ಲ ಧರ್ಮವನ್ನೂ ಗೌರವಿಸುವ ಹಿಂದೂ ಸಮಾಜದ ಅಭಿವೃದ್ಧಿಗಾಗಿ ಮಕ್ಕಳಿಗೆ ಶಾಲೆ ಹಾಗೂ ಎಲ್ಲ ದೇವ-ದೈವಸ್ಥಾನಗಳಲ್ಲಿ ಆಧ್ಯಾತ್ಮಿಕ ಶಿಕ್ಷಣ ಬೋಧಿಸುವಂತಾಗಬೇಕು ಎಂದು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಆಗ್ರಹಿಸಿದರು.
ಉಡುಪಿಯ ಅಂಬಲಪಾಡಿಯ ಲಾಲ್ ಬಹಾದೂರ್ ಶಾಸ್ತ್ರಿ ಮೈದಾನದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಅಂಬಲಪಾಡಿ ವಸತಿ ವತಿಯಿಂದ ಭಾನುವಾರ (ಫೆ.15) ಸಂಜೆ ಆಯೋಜಿಸಿದ್ದ 'ಹಿಂದೂ ಸಂಗಮ' ಸಾರ್ವಜನಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಿಂಚಿತ್ ತ್ಯಾಗ ಮಾಡೋಣ
ಬೌದ್ಧಿಕ್ ನಡೆಸಿಕೊಟ್ಟ ರಾಷ್ಟೀಯ ಸ್ವಯಂ ಸೇವಕ ಸಂಘದ ಉಡುಪಿ ಜಿಲ್ಲಾ ಸಹ ಕಾರ್ಯವಾಹ ಪ್ರಶಾಂತ್ ಅರೆಶೀರೂರು ಮಾತನಾಡಿ, 'ಸರ್ವೇ ಭವಂತು ಸುಖಿನ;' ಎನ್ನುವುದು ಸನಾತನ ಹಿಂದೂ ಧರ್ಮದ ಧ್ಯೇಯವಾಗಿದೆ. ಅರ್ಚಕರು ಪೂಜೆ ಮಾಡುವಾಗಲೂ ಸಹ ದೇವರಲ್ಲಿ ಪ್ರಾರ್ಥನೆ ಮಾಡುವಾಗ ಯಜಮಾನನ ಕುಟುಂಬಕ್ಕೆ ಒಳಿತಾಗಲಿ ಎಂದು ಕೇಳಿಕೊಳ್ಳುವುದರ ಜತೆಗೆ ಎಲ್ಲ ಜೀವ ಜಂತುಗಳಿಗೂ ಒಳಿತು ಮಾಡು ಎಂದು ಕೇಳಿಕೊಳ್ಳುವ ಸಂಸ್ಕೃತಿ ನಮ್ಮದು. ದೇಶದಲ್ಲಿ ಜಾತಿ, ಮತ, ಪಂಥ ಇದ್ದರೂ ಸಹ ಸಮಸ್ತ ರಾಷ್ಟ್ರ ಒಂದು ಎಂಬ ಮೌಲ್ಯ ನೀಡಿದ್ದು ಹಿಂದೂ ಧರ್ಮ. ಇಂತಹ ಪವಿತ್ರ ಧರ್ಮದ ರಕ್ಷಣೆಗೆ ನಾವೆಲ್ಲ ಹಿಂದೂಗಳು ಒಗ್ಗಟ್ಟಾಗಬೇಕು. ಕಿಂಚಿತ್ತಾದರೂ ತ್ಯಾಗ ಮಾಡಬೇಕು ಎಂದರು.
ಶೋಭಾಯಾತ್ರೆಗೆ ಚಾಲನೆ
ಅಂಬಲಪಾಡಿಯ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಬಳಿ ನೂರಾರು ಹಿಂದೂ ಬಾಂಧವರ ಸಮಾಗಮದಲ್ಲಿ ಬೃಹತ್ ಶೋಭಾಯಾತ್ರೆಗೆ ದೇಗುಲದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಚಾಲನೆ ನೀಡಿ ಶುಭ ಹಾರೈಸಿದರು. ಮೆರವಣಿಗೆಯು ಅಂಬಲಪಾಡಿ ಮಹಾಕಾಳಿ ಮಾರ್ಗ, ಬೀಡು ಮಾರ್ಗ, ಆನಂದ ರಾವ್ ಮಾರ್ಗವಾಗಿ ಮುಖ್ಯ ರಸ್ತೆ ಮೂಲಕ ಅಂಬಲಪಾಡಿ ಬಸ್ ನಿಲ್ದಾಣದ ಬಳಿ ಸಂಪನ್ನಗೊಂಡಿತು.
ರಾಷ್ಟೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ ಶೇಖರ್ ಶೆಟ್ಟಿಗಾರ್ ಅಂಬಲಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಜಯ ಭಟ್ ಕಡೆಕಾರು ವಂದೇ ಮಾತರಂ ಗೀತೆ ಹಾಡಿದರು. ಶಂಕರ ಅಂಬಲಪಾಡಿ ಮತ್ತು ಪದ್ಮನಾಭ ಅಂಬಲಪಾಡಿ ವಯಕ್ತಿಕ ಗೀತೆ ಹಾಡಿದರು. ಸ್ವಯಂ ಸೇವಕ ಜಯ ಭಂಡಾರಿ ಸ್ವಾಗತಿಸಿದರು. ರಮೇಶ್ ಸಾಲ್ಯಾನ್ ಅಂಬಲಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಕಾರ ಭಾರತಿ ಉಡುಪಿಯ ಜಿಲ್ಲಾ ಮುಖ್ಯ ಕಾರ್ಯದರ್ಶಿ ಗಣೇಶ್ ಶೆಣೈ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿದರು. ಚೇತನ್ ಆಚಾರ್ಯ ಅಂಬಲಪಾಡಿ ವಂದಿಸಿದರು. ಹಿರಿಯ ಸ್ವಯಂ ಸೇವಕ ಉಮೇಶ್ ಶೆಟ್ಟಿಗಾರ್ ಮತ್ತು ಸುಧಾಕರ್ ಶೆಟ್ಟಿ ಸಹಕರಿಸಿದರು.