ಹಿಂದೂ ಸಂಘಟನೆಗಳ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 
ಉಡುಪಿ

ಸಮಾಧಾನ ಮಹೋತ್ಸವಕ್ಕೆ ಹಿಂದೂ ಜಾಗರಣ ವೇದಿಕೆ ವಿರೋಧ

ಉಡುಪಿ: ನಗರದ ಮಿಷನ್ ಕಾಂಪೌಂಡ್ ಪರಿಸರದಲ್ಲಿ ಮಾರ್ಚ್ 20ರಿಂದ 22ರಂದು ಆಯೋಜಿಸಲಾಗಿರುವ ತಮಿಳುನಾಡಿನ ಮಿಷನರಿ ಮೋಹನ್ ಸಿ. ಲಾಜರಸ್ ನೇತೃತ್ವದ 'ಸಮಾಧಾನ ಮಹೋತ್ಸವ' ಕಾರ್ಯಕ್ರಮಕ್ಕೆ ಹಿಂದೂ ಜಾಗರಣ ವೇದಿಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ , ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋಹನ್ ಸಿ. ಲಾಜರಸ್ ವಿರುದ್ಧ ಹಿಂದೂ ದೇವಸ್ಥಾನಗಳನ್ನು ಅವಹೇಳನಕಾರಿಯಾಗಿ ಟೀಕಿಸಿದ ಆರೋಪವಿದ್ದು , ತಮಿಳುನಾಡಿನ ಕೊಯಮತ್ತೂರು, ನಾಗರಕೋವಿಲ್ ಸೇರಿದಂತೆ ವಿವಿಧೆಡೆ ಎಫ್‌ಐಆರ್ ದಾಖಲಾಗಿವೆ. ಇವರ ಜೀಸಸ್ ರಿಡೀಮ್ಸ್' ಸಂಸ್ಥೆಯು ವಿದೇಶಿ ಹಣವನ್ನು ದುರ್ಬಳಕೆ ಮಾಡಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತಿದೆ ಎಂಬ ಕಾರಣಕ್ಕೆ ಕೇಂದ್ರ ಗೃಹ ಸಚಿವಾಲಯವು ಇತ್ತೀಚೆಗೆ ಸಂಸ್ಥೆಯ ವಿದೇಶಿ ದೇಣಿಗೆ ಪರವಾನಗಿಯನ್ನು ಅಮಾನತುಗೊಳಿಸಿದೆ ಎಂದು ಹೇಳಿದರು.
ಉಡುಪಿಯಂತಹ ಪವಿತ್ರ ಭೂಮಿಯಲ್ಲಿ ಧಾರ್ಮಿಕ ಅಶಾಂತಿ ಮೂಡಿಸುವ ಇಂತಹ ವಿವಾದಾತ್ಮಕ ವ್ಯಕ್ತಿಗಳ ಪ್ರವೇಶಕ್ಕೆ ಅವಕಾಶ ನೀಡಬಾರದು. ಒಂದು ವೇಳೆ ಜಿಲ್ಲಾಡಳಿತ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿದರೆ ಅಥವಾ ಮೋಹನ್ ಸಿ. ಲಾಜರಸ್ ಜಿಲ್ಲೆಯೊಳಗೆ ಪ್ರವೇಶಿಸಿದರೆ ಜಿಲ್ಲಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮೋಹನ್ ಲಾಜರಸ್ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸುವಂತೆ ಲಿಖಿತ ಮನವಿ ಸಲ್ಲಿಸಲಾಗಿದ್ದು, ಕಾರ್ಯಕ್ರಮವನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಮಾಜಿನಗರ ಸಭಾ ಸದಸ್ಯ ವಿಜಯ ಕೊಡವರು, ಮುಖಂಡರಾದ ರತ್ನಾಕರ ಅಮೀನ್ , ಗುರುಪ್ರಸಾದ್ ನಾರಾವಿ, ರಾಜೇಶ್ ಉಚ್ಚಿಲ ಉಪಸ್ಥಿತರಿದ್ದರು.