ದೈತೋಟದಲ್ಲಿ ಗುಡ್ಡ ಕುಸಿದಿರುವುದು.
ಉಪ್ಪಳ: ಇತ್ತೀಚೆಗೆ ಸುರಿದ ಮಳೆಗೆ ಸಜಂಕಿಲ-ಆವಳ-ಚೇವಾರು ಸಂಪರ್ಕ ರಸ್ತೆಯ ದೈತೋಟ ಎಂಬಲ್ಲಿ ಗುಡ್ಡ ಕುಸಿದು ವಾಹನ ಸಂಚಾರ ಅಪಾಯಕಾರಿಯಾಗಿದೆ. ಇದೇ ಸ್ಥಳದಲ್ಲಿ ಕಳೆದ ವರ್ಷ ಮಳೆಗಾಲದಲ್ಲೂ ಗುಡ್ಡ ಕುಸಿದಿತ್ತು.
ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಈ ವರ್ಷವೂ ಮಳೆಗೆ ಗುಡ್ಡ ಕುಸಿಯಲಾರಂಭಿಸಿದ್ದು, ಇದೇ ರೀತಿ ಮುಂದುವರಿದರೆ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಾರ್ಡ್ ಸದಸ್ಯ ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ ಸ್ಥಳಕ್ಕೆ ಭೇಟಿ ನೀಡಿ ಗುಡ್ಡ ಕುಸಿತ ತಡೆಗೆ ಶಾಶ್ವತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.