ಪುತ್ತಿಗೆ ಗ್ರಾಪಂ ವ್ಯಾಪ್ತಿಯ ಕಾಯರ್‌ಪುಂಡು ಬಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ತಡೆಗೋಡೆ ಅಪಾಯದ ಸ್ಥಿತಿಗೆ ತಲುಪಿರುವುದು.
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಪುತ್ತಿಗೆ ಗ್ರಾಪಂ ವ್ಯಾಪ್ತಿಯ ಕಾಯರ್‌ಪುಂಡು ಬಳಿ ನಿರ್ಮಾಣ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿರುವ ಪರಿಣಾಮ ರಸ್ತೆಯ ತಡೆಗೋಡೆ ಕುಸಿಯುವ ಹಂತಕ್ಕೆ ತಲುಪಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನಿರಂತರ ಸುರಿಯುತ್ತಿರುವ ಮಳೆಯಿಂದ ಗುಡ್ಡದ ಮಣ್ಣು ಜರಿದು ತಡೆಗೋಡೆ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದ್ದು, ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಗ್ರಾಮಸ್ಥರ ಮಾಹಿತಿ ಪ್ರಕಾರ, ಇದೇ ಕಾಮಗಾರಿಯ ಪರಿಣಾಮವಾಗಿ 20 ದಿನಗಳ ಹಿಂದೆ ನೆಲ್ಲಿಗುಡ್ಡೆ ಪ್ರದೇಶದಲ್ಲಿ ರಸ್ತೆಯ ತಡೆಗೋಡೆ ಕುಸಿದಿತ್ತು. ಆದರೂ ಅಗತ್ಯ ಮುನ್ನೆಚ್ಚರಿಕೆ, ಶಾಶ್ವತ ಪರಿಹಾರ ಕ್ರಮ ಕೈಗೊಳ್ಳದಿರುವುದರಿಂದ ಇದೀಗ ಮತ್ತೊಂದು ಸ್ಥಳದಲ್ಲಿಯೂ ತಡೆಗೋಡೆ ಅಪಾಯದ ಸ್ಥಿತಿಗೆ ತಲುಪಿದೆ ಎಂದು ಆರೋಪಿಸಲಾಗಿದೆ.
ಬೆಳ್ಮಣ್‌ಗೆ ಸಂಪರ್ಕಿಸುವ ರಸ್ತೆ ಬದಿಯನ್ನು ಕಾಮಗಾರಿ ವೇಳೆ ಎತ್ತರಗೊಳಿಸಿರುವುದರಿಂದ 40 ಮನೆಗಳಿಗೆ ತೆರಳುವ ಸಂಪರ್ಕ ದಾರಿ ತೊಂದರೆಗೆ ಒಳಗಾಗಿದೆ ಎಂದು ಗ್ರಾಮಸ್ಥ ವಾಸುದೇವ ನಾಯಕ್ ತಿಳಿಸಿದ್ದಾರೆ. ಕಾಮಗಾರಿಯನ್ನು ವೈಜ್ಞಾನಿಕ, ಸುರಕ್ಷಿತ ರೀತಿಯಲ್ಲಿ ಪೂರ್ಣಗೊಳಿಸದಿದ್ದರೆ ಗ್ರಾಮಸ್ಥರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.