ಕಾಸರಗೋಡು ನಗರದಲ್ಲಿ ಚರಂಡಿಯ ಸ್ಲಾೃಬ್ ಕುಸಿದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. 
ಉಡುಪಿ

ಹೆದ್ದಾರಿ ಕಾಮಗಾರಿ ಸಮಸ್ಯೆಗೆ ರಹದಾರಿ

ಇಂದಿರಾ ಎನ್ ಕೆ
ಪುರುಷೋತ್ತಮ ಪೆರ್ಲ ಕಾಸರಗೋಡು
ರಾಷ್ಟ್ರೀಯ ಹೆದ್ದಾರಿ 66ರ ಚೆರ್ಕಳದಿಂದ ನೀಲೇಶ್ವರ ತನಕ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಪೂರ್ವ ಸಿದ್ಧತೆ ಕೈಗೊಳ್ಳದಿದ್ದಲ್ಲಿ ಮಳೆಗಾಲದಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸಲಿದೆ. ಜಿಲ್ಲೆಯ ಬಹುತೇಕ ಕಡೆ ಮಳೆಗಾಲ ಪೂರ್ವ ಸ್ವಚ್ಛತಾ ಕಾರ್ಯ ನಡೆದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಲಿದ್ದು, ಇದಕ್ಕೂ ಮೊದಲೇ ಪ್ರಮುಖ ಲೋಪಗಳನ್ನು ಸರಿಪಡಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಚರಂಡಿಯಲ್ಲಿ ಹೂಳು ತುಂಬಿ ನೀರು ಹರಿವಿಗೆ ಅಡ್ಡಿಯಾಗಿದ್ದರೂ ತೆರವಿಗೆ ಇಲಾಖೆ ಮುಂದಾಗಿಲ್ಲ. ಜಿಲ್ಲೆಯ ಬಹುತೇಕ ರಸ್ತೆಗಳ ಬದಿಯಲ್ಲಿ ಮಳೆನೀರು ಹರಿಯಲು ಚರಂಡಿ ವ್ಯವಸ್ಥೆಯಿಲ್ಲ. ಕಾಮಗಾರಿ ಹೆಸರಿನಲ್ಲಿ ಕೆಎಸ್‌ಇಬಿ, ಜಲಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳು ಸುಸ್ಥಿತಿಯಲ್ಲಿದ್ದ ರಸ್ತೆಗಳನ್ನು ಅಗೆಯುತ್ತಿದ್ದು ಅರೆಬರೆ ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ಸಮಸ್ಯೆ ತಂದೊಡ್ಡಲಿದೆ. ಹಲವೆಡೆ ರಸ್ತೆಗೆ ಬಾಗಿಕೊಂಡಿರುವ ಮರದ ರೆಂಬೆಗಳನ್ನು ಕಡಿಯದೆ ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಕಳೆದ ವರ್ಷವೂ ಸರ್ವೀಸ್ ರಸ್ತೆಗಳನ್ನು ಸೂಕ್ತ ರೀತಿಯಲ್ಲಿ ನಿರ್ಮಿಸದೆ ಇದ್ದುದ್ದರಿಂದ ಮಳೆಗಾಲ ಪ್ರಾರಂಭದಲ್ಲೇ ಚೆರ್ಕಳ ಆಸುಪಾಸು ಭಾರಿ ಸಮಸ್ಯೆಗಳು ತಲೆದೋರಿದ್ದವು. ಈ ವರ್ಷವೂ ಪರಿಸ್ಥಿತಿ ಬದಲಾಗಿಲ್ಲ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಚೆರ್ಕಳ ಸಮೀಪದ ತೆಕ್ಕಿಲ್ ಪ್ರದೇಶ, ನೀಲೇಶ್ವರದಲ್ಲಿ ಸರ್ವೀಸ್ ರಸ್ತೆಗಳ ಕಾಮಗಾರಿ ಅರ್ಧದಲ್ಲಿರುವುದರಿಂದ ತೊಂದರೆ ಎದುರಾಗಲಿದೆ. ಮುಂಗಾರು ಪ್ರವೇಶಕ್ಕೂ ಮೊದಲೇ ಸರ್ವೀಸ್ ರಸ್ತೆಗಳ ಕಾಮಗಾರಿ ಮುಗಿಸಿ, ರಸ್ತೆ ಬದಿಯ ಚರಂಡಿಗಳ ಹೂಳೆ ತೆರವು ಮಾಡಿ ಮಳೆ ನೀರು ಹರಿಯಲು ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಇಲಾಖೆಗಳ ತಿಕ್ಕಾಟದಿಂದ ನಡೆಯದ ಕೆಲಸ

ಸುಸ್ಥಿತಿಯಲ್ಲಿರುವ ರಸ್ತೆಯನ್ನು ಅಗೆದು ಕುಡಿಯುವ ನೀರು, ವಿದ್ಯುತ್ ಕೇಬಲ್, ದೂರವಾಣಿ ಕೇಬಲ್ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿ ನಡೆಸಲಾಗುತ್ತಿದೆ. ಬಳಿಕ ಇಲಾಖೆಗಳ ನಡುವಿನ ಹೊಂದಾಣಿಕೆ ಕೊರತೆಯಿಂದ ಹೊಂಡ ಮುಚ್ಚದೆ ಹಾಗೇ ಬಿಡಲಾಗುತ್ತಿದೆ. ಲೋಕೋಪಯೋಗಿ ಇಲಾಖೆ ಕೂಡ ಇದನ್ನು ಪ್ರಶ್ನಿಸುವತ್ತ ಆಸಕ್ತಿ ವಹಿಸುತ್ತಿಲ್ಲ. ಹೊಂಡಗಳು ದೊಡ್ಡದಾಗಿ ವಾಹನಗಳು ಸೈಡ್ ನೀಡುವ ಸಂದರ್ಭ ಕೆಸರಿನಲ್ಲಿ ಹೂತು ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗುವ ಅಪಾಯವಿದೆ.

ಹೆದ್ದಾರಿ ಕಾಮಗಾರಿ ನಡೆಯುವ ಪ್ರದೇಶದಲ್ಲಿನ ಲೋಪ ಸರಿಪಡಿಸಲು ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ವಿವರವಾದ ಶಿಫಾರಸುಗಳನ್ನು ಹೊಂದಿದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜತೆಗೆ ಇತರ ರಸ್ತೆಗಳ ಚರಂಡಿ ದುರಸ್ತಿಯೊಂದಿಗೆ ಮಳೆಗಾಲಪೂರ್ವ ಕಾಮಗಾರಿ ಪೂರ್ತಿಗೊಳಿಸಲು ನಿರ್ದೇಶನ ನೀಡಲಾಗಿದೆ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

— ಅರ್ಜುನ್ ಪಾಂಡಿಯನ್, ಕಾಸರಗೋಡು ಜಿಲ್ಲಾಧಿಕಾರಿ