ಚೆರ್ಕಳ ಪ್ರೌಢಶಾಲೆಯ ಆವರಣಕ್ಕೆ ಹೆದ್ದಾರಿಯಿಂದ ಮಳೆ ನೀರು ನುಗ್ಗಿರುವುದು.
ವಿಜಯವಾಣಿ ಸುದ್ದಿಜಾಲ ಬದಿಯಡ್ಕ
ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಶಾಲಾ ಕಾಂಪೌಂಡ್ ಗೋಡೆ ಕೆಡವಿ ವರ್ಷಗಳೇ ಕಳೆದರೂ ಮರುನಿರ್ಮಿಸದ ಕಾರಣ ಚೆರ್ಕಳ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮಳೆಗಾಲದಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ.
ಹೆದ್ದಾರಿ ಕಾಮಗಾರಿ ಗುತ್ತಿಗೆ ಕಂಪನಿಯ ನಿರ್ಲಕ್ಷೃದಿಂದಾಗಿ ಮಳೆಗಾಲದಲ್ಲಿ ಶಾಲಾ ಅಂಗಳಕ್ಕೆ ಹೆದ್ದಾರಿಯ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗುತ್ತಿದೆ. ಸಮಸ್ಯೆ ಬಗೆಹರಿಸಲು ಹಲವು ಬಾರಿ ಮನವಿ ಮಾಡಿದ್ದರೂ ಸ್ಪಂದನೆ ಸಿಗದ ಕಾರಣ ವಿದ್ಯಾರ್ಥಿಗಳ ಮೂಲಕ ರಾಷ್ಟ್ರೀಯ ಹೆದ್ದಾರಿ ತಡೆ ಸೇರಿದಂತೆ ಪ್ರತಿಭಟನೆ ನಡೆಸಲಾಗುವುದು ಎಂದು ಪಿಟಿಎ ಎಚ್ಚರಿಸಿದೆ.
ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದ ಕೆಸರು ನೀರು ರಟ್ಟುತ್ತಿದ್ದು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ದೊಡ್ಡ ಸಮಸ್ಯೆ ಸೃಷ್ಟಿಸಿದೆ. ಹೆದ್ದಾರಿ ಕಾಮಗಾರಿ ವೇಳೆ ಕೆಡವಿದ ಆವರಣ ಗೋಡೆಯನ್ನು ಮರು ನಿರ್ಮಸಿ ಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಈಗ ಈ ಬಗ್ಗೆ ಕೇಳಿದರೆ ಸಬೂಬುಗಳನ್ನು ಹೇಳುತ್ತ ನುಣುಚಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿರುವ ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳು ಸೇರಿದಂತೆ ಚಿಕ್ಕಮಕ್ಕಳು ತಮ್ಮ ತರಗತಿ ಕೊಠಡಿಗಳನ್ನು ತಲುಪಲು ನೀರು ತುಂಬಿದ ಜಾಗದಲ್ಲೇ ಸಾಗಬೇಕಿದೆ.
ಪುಂಡಪೋಕರಿಗಳ ತಾಣ
ಆವರಣಗೋಡೆ ಇಲ್ಲದ ಕಾರಣ ಶಾಲೆಗೆ ಭದ್ರತೆಯೂ ಇಲ್ಲವಾಗಿದ್ದು ರಾತ್ರಿ ವೇಳೆ ಪುಂಡ ಪೋಕರಿಗಳ ತಾಣವಾಗುತ್ತಿದೆ. ಶಾಲಾ ಶೌಚಗೃಹಗಳನ್ನು ಸಾರ್ವಜನಿಕರು ಮಲವಿಸರ್ಜನೆಗೆ ಬಳಸುತ್ತಿದ್ದಾರೆ ಎಂಬ ದೂರುಗಳೂ ಇವೆ. ಶಾಲೆಯ ಸಮೀಪದಲ್ಲಿರುವ ಪಾದಚಾರಿ ಮಾರ್ಗ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮುನೀರ್ ಪಿ.ಚೆರ್ಕಳ, ಸಮಿತಿ ಸದಸ್ಯರಾದ ಕಬೀರ್ ಚೆರ್ಕಳಂ, ಅಬ್ಬಾಸ್ ಬಂಬ್ರಾನಿ, ಎಂ.ಪಿ.ಸಿದ್ದೀಕ್, ಇಬ್ರಾಹಿಂ ಬೇರ್ಕಾ, ಜುಬೈರ್ ಸಿಲೋನ್, ಮದರ್ ಪಿಟಿಎ ಅಧ್ಯಕ್ಷೆ ಸಮೀರಾ ಅಬ್ಬಾಸ್, ಉಮ್ಮಲಿ ಶಾಫಿ, ಶಕೀರಾ ಅಶ್ರಫ್, ಹಸೀನಾ ರಶೀದ್ ಮತ್ತು ಇತರರು ಕೂಡಲೇ ಸಮಸ್ಯೆ ಪರಿಹರಿಸದಿದ್ದರೆ ಪ್ರತಿಭಟನೆ ದಾರಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಮಳೆ ಮುಗಿದ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಹೆದ್ದಾರಿ ಕಾಮಗಾರಿ ಗುತ್ತಿಗೆ ಕಂಪನಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
3,600ರಷ್ಟು ಮಕ್ಕಳಿಗೆ ಅಭದ್ರತೆ
ಜಿಲ್ಲೆಯ ಅತಿದೊಡ್ಡ ಸರ್ಕಾರಿ ಶಾಲೆಗಳಲ್ಲಿ ಒಂದಾಗಿರುವ ಇಲ್ಲಿ ಸುಮಾರು 3,600 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಾಲೆಯ ಜತೆಗೆ, ಮಾರ್ಥೋಮ ಕಿವುಡರ ಶಾಲೆ, ಚೆಂಗಳ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿ ಕಚೇರಿ, ಗ್ರಾಮ ಕಚೇರಿ ಇತ್ಯಾದಿಗಳಿವೆ. ಚೆರ್ಕಳ ಪೇಟೆಯ ಹೃದಯಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ನಿಧಾನವಾಗಿ ಸಾಗುತ್ತಿದೆ. ಸ್ಥಳೀಯರು ಇದರ ವಿರುದ್ಧ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ, ಗುತ್ತಿಗೆ ಕಂಪನಿ ಯಾವುದೇ ಕ್ರಮ ಕೈಗೊಂಡಿಲ್ಲ.
ಹೆದ್ದಾರಿ ಪುನರ್ನಿರ್ಮಾಣದ ಫಲವಾಗಿ ಶಾಲಾ ತರಗತಿ ಕೊಠಡಿಯವರೆಗೂ ಮಳೆ ನೀರು ನುಗ್ಗುತ್ತಿದೆ. ಮಕ್ಕಳ ಪಾಠಕ್ಕೆ ಸಮಸ್ಯೆಯಾಗುತ್ತಿದ್ದು ಈ ಬಗ್ಗೆ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಈವರೆಗೆ ಸ್ಪಂದಿಸಿಲ್ಲ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು.
— ಮುನೀರ್ ಪಿ.ಚೆರ್ಕಳ, ಪಿಟಿಎ ಅಧ್ಯಕ್ಷ