ಹೇಮಾವತಿ ವೀ.ಹೆಗ್ಗಡೆ ಅವರಿಗೆ ಡನ್‌ಸ್ಟರ್ ಬಿಜಿನೆಸ್ ಸ್ಕೂಲ್‌ನ ಪರವಾಗಿ ಅವಿನಾಶ್ ಗುಪ್ತಾ ಗೌರವ ಡಾಕ್ಟರೇಟ್ ಪದವಿ ಪ್ರದಾನಿಸಿದರು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಡಾ.ಹರೀಶ್ ಕೃಷ್ಣಸ್ವಾಮಿ ಮೊದಲಾದವರಿದ್ದರು.
ಬೆಳ್ತಂಗಡಿ: ನಾಲ್ಕು ದಶಕಗಳಿಂದ ಗ್ರಾಮೀಣ ಮಟ್ಟದಲ್ಲಿ ಸುಸ್ಥಿರವಾದ ಸಾಮಾಜಿಕ ಪರಿವರ್ತನೆ ನಿರಂತರವಾಗಿ ಹೇಗೆ ತರಬಹುದು ಎಂಬುವುದನ್ನು ಹೇಮಾವತಿ ವೀ.ಹೆಗ್ಗಡೆ ಅತ್ಯಂತ ಯಶಸ್ವಿಯಾಗಿ ತೋರಿಸಿಕೊಟ್ಟಿದ್ದಾರೆ.
ಜಗತ್ತು ಮಹಿಳಾ ಸಬಲೀಕರಣ, ಆರ್ಥಿಕತೆ, ಸಾಮಾಜಿಕ ಉದ್ಯಮಶೀಲತೆ ಮತ್ತು ಸಮಗ್ರ ಅಭಿವೃದ್ಧಿಯಂತಹ ಪರಿಕಲ್ಪನೆಗಳನ್ನು ದಶಕಗಳ ಹಿಂದೆಯೇ ರಾಜ್ಯಾದ್ಯಂತ ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಹೇಮಾವತಿ ಹೆಗ್ಗಡೆ ಕೆಲಸ ಮಾಡಿದ್ದಾರೆ ಎಂದು ಸ್ವಿಟ್ಜರ್ಲೆಂಡ್‌ನ ಪ್ರತಿಷ್ಠಿತ ಡನ್‌ಸ್ಟರ್ ಬಿಜಿನೆಸ್ ಸ್ಕೂಲ್‌ನ ಅವಿನಾಶ್ ಗುಪ್ತಾ ಹೇಳಿದರು.
ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ರಾಜ್ಯಮಟ್ಟದ ಪುನಃಶ್ಚೇತನಾ ಕಾರ್ಯಾಗಾರದಲ್ಲಿ ಡನ್‌ಸ್ಟರ್ ಬಿಜಿನೆಸ್ ಸ್ಕೂಲ್‌ನ ಪರವಾಗಿ ಗೌರವ ಡಾಕ್ಟರೇಟ್ ಪದವಿಯನ್ನು ಹೇಮಾವತಿ ಹಗ್ಗಡೆ ಅವರಿಗೆ ಧರ್ಮಸ್ಥಳದಲ್ಲಿ ಪ್ರದಾನಿಸಿ ಮಾತನಾಡಿದರು.
ಡನ್‌ಸ್ಟರ್ ಬಿಜಿನೆಸ್ ಸ್ಕೂಲ್‌ನ ಅಧ್ಯಕ್ಷ ಫಿಲಿಪ್ ಥೆವೆನೋಟ್ ಆನ್‌ಲೈನ್ ಮೂಲಕ ಪದವಿ ಪ್ರಕಟಿಸಿದರು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿ ಡಾ.ಹರೀಶ್ ಕೃಷ್ಣಸ್ವಾಮಿ, ಉದಯ ಕುಮಾರ್ ಶೆಟ್ಟಿ, ಸಂಪತ್ ಸಾಮ್ರಾಜ್ಯ, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್., ಯೋಜನೆಯ ಹಣಕಾಸು ಅಧಿಕಾರಿಗಳಾದ ಶಾಂತಾರಾಮ್ ಆರ್.ಪೈ, ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲ ಪ್ರಾದೇಶಿಕ ನಿರ್ದೇಶಕರು ಉಪಸ್ಥಿತರಿದ್ದರು.