ಮುಡಿಪು ಜಂಕ್ಷನ್ ಬಳಿಯಿರುವ ತ್ಯಾಜ್ಯ ನೀರಿನ ಕೃತಕ ಕೊಳ. 
ಉಡುಪಿ

ಮುಡಿಪು ಜಂಕ್ಷನ್‌ನಲ್ಲಿ ನರಕ ದರ್ಶನ

ಇಂದಿರಾ ಎನ್ ಕೆ
ಅನ್ಸಾರ್ ಇನೋಳಿ ಉಳ್ಳಾಲ
ಅಭಿವೃದ್ಧಿಯ ನಾಗಾಲೋಟದಲ್ಲಿರುವ ಮುಡಿಪು ಜಂಕ್ಷನ್ ಇದೀಗ ಕಲುಷಿತ ನೀರಿನ ಸಮಸ್ಯೆಯಿಂದಾಗಿ ನಲುಗಿಹೋಗಿದೆ. ಹೋಟೆಲ್ ಮತ್ತು ವಾಣಿಜ್ಯ ಸಂಕೀರ್ಣಗಳ ಕೊಳಚೆ ನೀರು ಹರಿಯಲು ಸೂಕ್ತ ವ್ಯವಸ್ಥೆಯಿಲ್ಲದೆ ರಸ್ತೆ ಬದಿಯೇ ನಿಂತು ಕೃತಕ ಕೊಳ ನಿರ್ಮಾಣವಾಗಿದ್ದು, ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಮೂಡಿಸಿದೆ.
ಈ ಹಿಂದೆ ಹೋಟೆಲ್‌ಗಳ ಕಲುಷಿತ ನೀರು ಚರಂಡಿ ಮೂಲಕ ಖಾಸಗಿ ಜಾಗಕ್ಕೆ ನುಗ್ಗುತ್ತಿತ್ತು. ಇದರಿಂದ ಬೇಸತ್ತ ಜಮೀನು ಮಾಲೀಕರು ಚರಂಡಿಗೆ ಮಣ್ಣು ಹಾಕಿ ಮುಚ್ಚಿದ್ದರಿಂದ, ನೀರು ಹರಿಯಲು ದಾರಿಯಿಲ್ಲದೆ ರಸ್ತೆ ಬದಿಯಲ್ಲೇ ಸಂಗ್ರಹವಾಗುತ್ತಿದೆ. ಹಲವು ದಿನಗಳಿಂದ ನಿಂತಿರುವ ಈ ನೀರು ಬಣ್ಣ ಬದಲಿಸಿ ದುರ್ನಾತ ಬೀರುತ್ತಿದ್ದು, ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಅಷ್ಟೇ ಅಲ್ಲದೆ, ಈ ಕಲುಷಿತ ನೀರು ಹತ್ತಿರದ ಬಾವಿಗಳಿಗೂ ನುಗ್ಗುತ್ತಿರುವುದು ಜನರನ್ನು ಕಂಗೆಡಿಸಿದೆ.

ಅಧಿಕಾರಿಗಳ ಬೆವರಿಳಿಸಿದ್ದ ಸ್ಪೀಕರ್

ಇತ್ತೀಚೆಗೆ ನಡೆದ ಸಭೆಯೊಂದರಲ್ಲಿ ಸ್ಥಳೀಯ ನಿವಾಸಿ ಡಾ.ಸುರೇಖಾ ಅವರು ಈ ಗಂಭೀರ ಸಮಸ್ಯೆಯನ್ನು ಪ್ರಸ್ತಾಪಿಸಿದಾಗ, ಸ್ಪೀಕರ್ ಯು.ಟಿ.ಖಾದರ್ ಅವರು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ಉದ್ಯಮ ಅಥವಾ ಕಟ್ಟಡಕ್ಕೆ ಪರವಾನಗಿ ನೀಡುವ ಹಾಗೂ ಅದನ್ನು ರದ್ದುಪಡಿಸುವ ಪೂರ್ಣ ಅಧಿಕಾರ ಗ್ರಾಮ ಪಂಚಾಯಿತಿಗೆ ಇದೆ ಎಂಬುದನ್ನು ನೆನಪಿಸಿದ ಅವರು, ನೀವು ಕೇವಲ ಪರವಾನಗಿ ನೀಡಲು ಮಾತ್ರ ಇರುವುದಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ನಗರ ಪ್ರದೇಶಗಳಾದ ಉಳ್ಳಾಲ, ಕೋಟೆಕಾರ್‌ಗಳಲ್ಲೇ ಒಳಚರಂಡಿ ವ್ಯವಸ್ಥೆ ಇನ್ನು ಪೂರ್ಣಗೊಂಡಿಲ್ಲ. ಹೀಗಿರುವಾಗ ಮುಡಿಪುವಿನಂತಹ ಗ್ರಾಮೀಣ ಭಾಗಕ್ಕೆ ಮುಂದಿನ 15 ವರ್ಷಗಳ ಕಾಲ ಈ ವ್ಯವಸ್ಥೆಯನ್ನು ನಿರೀಕ್ಷಿಸಬೇಡಿ. ಈಗಲೇ ದ್ರವತ್ಯಾಜ್ಯ ನಿರ್ವಹಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಮುಡಿಪು ಮುಂದಿನ ದಿನಗಳಲ್ಲಿ ಸ್ಲಂ ಆಗಿ ಮಾರ್ಪಡಲಿದೆ ಎಂದು ಎಚ್ಚರಿಸಿದರು. ಯಾವುದೇ ಒತ್ತಡಕ್ಕೆ ಮಣಿಯದೆ, ದ್ರವತ್ಯಾಜ್ಯ ನಿರ್ವಹಣೆ ಸಾಧ್ಯವಿಲ್ಲದಿದ್ದರೆ ಅಂತಹ ಕಟ್ಟಡಗಳಿಗೆ ಅನುಮತಿ ನೀಡಬೇಡಿ ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಕೈಬಿಟ್ಟ ಯೋಜನೆ

ಹಿಂದೆ ದೇವದಾಸ್ ಭಂಡಾರಿ ಅವರು ಅಧ್ಯಕ್ಷರಾಗಿದ್ದ ಕಾಲದಲ್ಲಿ ದ್ರವತ್ಯಾಜ್ಯ ಘಟಕಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಸ್ಥಳೀಯರ ವಿರೋಧದಿಂದಾಗಿ ಆ ಯೋಜನೆ ಅರ್ಧಕ್ಕೆ ನಿಂತು, ಜಿಲ್ಲಾ ಪಂಚಾಯಿತಿ ಪರಿಕರಗಳನ್ನು ವಾಪಸ್ ಪಡೆದಿತ್ತು. ಅಂದಿನಿಂದ ಈ ಯೋಜನೆಯ ಬಗ್ಗೆ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ತಲೆಕೆಡಿಸಿಕೊಳ್ಳದಿರುವುದು ಇಂದಿನ ದುಸ್ಥಿತಿಗೆ ಕಾರಣವಾಗಿದೆ.

ಮುಡಿಪು ಜಂಕ್ಷನ್‌ನಲ್ಲಿ ಜಮೀನಿಗೆ ದುಬಾರಿ ದರವಿದೆ, ಹೋಟೆಲ್ ಬಾಡಿಗೆ ಅತ್ಯಂತ ದುಬಾರಿಯಾಗಿದೆ. ಆದರೆ ಮೂಲಸೌಕರ್ಯ ಕಲ್ಪಿಸದ ಕಾರಣ ಸ್ಥಳೀಯರು ಬೆಲೆ ತೆರಬೇಕಾಗಿದೆ. ಸ್ಥಳೀಯ ಬಾವಿಗಳ ನೀರು ಕಲುಷಿತಗೊಂಡು ಬಳಕೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಪಂ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

ಹೋಟೆಲ್ ಕಲುಷಿತ ನೀರು ರಸ್ತೆ ಬದಿ ನಿಂತು ಸ್ಥಳೀಯರಿಗೆ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಹಿಂದಿನ ಪಿಡಿಒ ಅಶೋಕ್ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲು ಗಡುವು ನೀಡಿದ್ದರು. ಪ್ರಸ್ತುತ ಅಲ್ಲಿನ ಪರಿಸ್ಥಿತಿ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.