ಹೆಜಮಾಡಿ ಮೀನುಗಾರಿಕಾ ಬಂದರು ಕಾಮಗಾರಿಯನ್ನು ಬಂದರು ಮತ್ತು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ವೀಕ್ಷಿಸಿದರು. 
ಉಡುಪಿ

ಹೆಜಮಾಡಿ ಮೀನುಗಾರಿಕಾ ಬಂದರು ಯೋಜನೆ ಬಾಕಿ ಮೊತ್ತ ಶೀಘ್ರ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಬಹುನಿರೀಕ್ಷಿತ ಹೆಜಮಾಡಿ ಮೀನುಗಾರಿಕಾ ಬಂದರು ಯೋಜನೆಯ ಬಾಕಿ ಮೊತ್ತ 30 ಕೋಟಿ ರೂಪಾಯಿಯನ್ನು ಶೀಘ್ರ ಬಿಡುಗಡೆಗೊಳಿಸಲಾಗುವುದು. ಹೆಚ್ಚುವರಿಯಾಗಿ ಕೇಳಿದ ಅನುದಾನ ಬಿಡುಗಡೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಭರವಸೆ ನೀಡಿದರು.
ಶನಿವಾರ ಹೆಜಮಾಡಿ ಬಂದರು ಪ್ರದೇಶಕ್ಕೆ ಇಲಾಖಾಧಿಕಾರಿಗಳ ಜತೆ ಭೇಟಿ ನೀಡಿ ಬಂದರು ಕಾಮಗಾರಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಾರ್ಚ್‌ನೊಳಗೆ ಉದ್ಘಾಟನೆ

ನಿಗದಿತ ಯೋಜನೆಯಂತೆ ನಿರ್ಮಿಸಿದ ಬ್ರೇಕ್‌ವಾಟರ್ ಉದ್ದ ಕಡಿಮೆಯಾಗಿರುವುದಾಗಿ ಮೀನುಗಾರರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಲಾಗುವುದು. ಬ್ರೇಕ್‌ವಾಟರ್ ಸಮುದ್ರದಲ್ಲಿ ನೇರ ಮುಂದಕ್ಕೆ ನಿರ್ಮಿಸುವ ಬದಲು ಎರಡೂ ಬದಿಯ ಎದುರು ಭಾಗದಲ್ಲಿ ಅಗಲ ಕಿರಿದುಗೊಳಿಸುವಂತೆ ಬಾಗಿ(ಬೆಂಡ್) ನಿರ್ಮಿಸಿದರೆ ಹೂಳೆತ್ತುವ ಸಮಸ್ಯೆ ಬಗೆಹರಿಯಬಹುದು. ಅದಕ್ಕೆ ಮುನ್ನ ಬ್ರೇಕ್‌ವಾಟರ್ ಮತ್ತು ಬಂದರಿನ ಒಳಭಾಗದಲ್ಲಿ ಹೂಳೆತ್ತುವುದು ಅನಿವಾರ್ಯ. ಅದಕ್ಕೆ ಪ್ರತ್ಯೇಕ ಅನುದಾನದ ಅವಶ್ಯಕತೆ ಇದೆ. ಈ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು. ಮುಖ್ಯವಾಗಿ ಮೀನುಗಾರರ ಬಹುಕಾಲದ ಬೇಡಿಕೆಯಾದ ಹೆಜಮಾಡಿ ಬಂದರು ಯೋಜನೆ ಪೂರ್ಣಗೊಳ್ಳಲು ಕಟಿಬದ್ಧನಾಗಿದ್ದೇನೆ. ಕಾಮಗಾರಿ ಪೂರ್ಣಗೊಳಿಸಿ ಮಾರ್ಚ್ ಒಳಗೆ ಉದ್ಘಾಟಿಸಲಾಗುವುದು ಎಂದರು.
ಬಂದರು ಯೋಜನೆಗೆ ಅಡ್ಡಿಯಾಗಿರುವ ಹೂಳೆತ್ತುವಿಕೆ ಮತ್ತು ಬ್ರೇಕ್ ವಾಟರ್ ಕನಿಷ್ಠ 300 ಮೀಟರ್ ವಿಸ್ತರಿಸುವಂತೆ ಹಾಗೂ ಆದಷ್ಟು ಶೀಘ್ರ ಬಂದರು ಕಾಮಗಾರಿ ಪೂರ್ಣಗೊಳಿಸಿ ಮೀನುಗಾರಿಕೆಗೆ ಅನುವು ಮಾಡಿಕೊಡುವಂತೆ ಮೀನುಗಾರರು ಸಚವರಿಗೆ ಮನವಿ ಮಾಡಿದರು.
ಇಲಾಖಾಧಿಕಾರಿಗಳು ಬಂದರು ಯೋಜನಾ ಕಾಮಗಾರಿಗಳ ಸಮಗ್ರ ಮಾಹಿತಿ ನೀಡಿದರು. ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಕುಮಾರಸ್ವಾಮಿ, ಸಹಾಯಕ ನಿರ್ದೇಶಕ ರವಿ, ಬಂದರು ಇಲಾಖೆಯ ಎಇಇ ಶೋಭಾ, ಸಹಾಯಕ ಎಂಜಿನಿಯರ್ ಪ್ರಶಾಂತ್, ಹೆಜಮಾಡಿಯ ಮೂಲ್ಕಿ ಪರ್ಸಿನ್ ಮತ್ತು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಸದಾಶಿವ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ವಿಜಯ ಎಸ್.ಬಂಗೇರ, ಕೋಶಾಧಿಕಾರಿ ಹರಿಶ್ಚಂದ್ರ ಮೆಂಡನ್, ಗ್ರಾಪಂ ಸದಸ್ಯ ರೋಶನ್ ಮಾನಂಪಾಡಿ, ಮೀನುಗಾರ ಮುಖಂಡರಾದ ವಿನೋದ್ ಕೋಟ್ಯಾನ್, ಸುಧಾಕರ ಕರ್ಕೇರ, ಏಕನಾಥ ಕರ್ಕೇರ, ಗುತ್ತಿಗೆದಾರ ಕಂಪನಿ ಶ್ರೀಪತಿ ಅಸೋಸಿಯೇಟ್ಸ್ ಮ್ಯಾನೇಜರ್ ಬಾಲಸುಬ್ರಹ್ಮಣ್ಯ ಉಪಸ್ಥಿತರಿದ್ದರು.

160 ಕೋಟಿ ವೆಚ್ಚದ ಯೋಜನೆಗೆ 130 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ. ಉಳಿದ 30 ಕೋಟಿ ರೂ.ಬಿಡುಗಡೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಯೋಜನಾ ವೆಚ್ಚ ಮತ್ತೆ 203 ಕೋಟಿ ರೂ.ಏರಿಕೆಯಾಗಿದ್ದು, ಈ ಪೈಕಿ ಇಲಾಖೆಯು 30 ಕೋಟಿ ರೂ. ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಾರ್ಚ್ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ.