ಉಡುಪಿಯಲ್ಲಿ ಹೆಗ್ಗುಂಜೆ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎನ್. ನರೇಂದ್ರ ರೈ ದೆರ್ಲ ಅವರಿಗೆ 'ರಾಜೀವ ಶೆಟ್ಟಿ ವಿದ್ಯಾ ಪೋಷಕ' ಪ್ರಶಸ್ತಿ ನೀಡಲಾಯಿತು. ಡಾ. ರವೀಂದ್ರನಾಥ್ ಶಾನುಭಾಗ್, ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಡಾ. ಎಚ್.ಎಸ್. ಶೆಟ್ಟಿ, ಮುರಳಿ ಕಡೆಕಾರ್, ಡಾ. ಜಯಶೀಲ ಶೆಟ್ಟಿ, ಕೆ. ಅರುಣಕುಮಾರ್ ಶೆಟ್ಟಿ, ಹಾಲಾಡಿ ನಾಗರಾಜ್ ಶೆಟ್ಟಿ ಇದ್ದರು.
* ಡಾ. ರವೀಂದ್ರನಾಥ್ ಶಾನುಭಾಗ್ ಅಭಿಪ್ರಾಯ
* ಹೆಗ್ಗುಂಜೆ ಟ್ರಸ್ಟ್ನಿಂದ 200 ಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ
ಉಡುಪಿ: ಎಲ್ಲೆಲ್ಲೂ ಭ್ರಷ್ಟಾಚಾರ, ಅಸಮಾನತೆ, ದ್ವೇಷ ಹೆಚ್ಚುತ್ತಲೇ ಇದೆ. ಉಳ್ಳವರ ದಬ್ಬಾಳಿಕೆ, ಬಡವರಿಗಿರುವ ಕಷ್ಟ ಕುಗ್ಗಿಲ್ಲ. ಜನರಿಗಿರುವ ಸಮಸ್ಯೆ ನಿವಾರಿಸಲೆಂದೇ ಸರ್ಕಾರಿ ಸೇವಕರಿದ್ದಾರೆ. ಅವರಿಂದ ಸೂಕ್ತ ಸೇವಾ ಕಾರ್ಯ ಆಗುತ್ತಿಲ್ಲ. ಎಷ್ಟೋ ಪ್ರಕರಣಗಳಲ್ಲಿ ನ್ಯಾಯಾಲಯವೇ ಆದೇಶಿಸಿದ್ದರೂ ಸರ್ಕಾರದಿಂದ ಪರಿಹಾರ ಮರೀಚಿಕೆಯಾಗುತ್ತಿದೆ. ಹೀಗಾದರೆ ನೊಂದವರು ಏನು ಮಾಡಬೇಕು? ಎಲ್ಲಿಗೆ ಹೋಗಬೇಕು? ಅನ್ಯಾಯಗಳ ವಿರುದ್ಧ ಜನಜಾಗೃತಿ, ಹೋರಾಟ ನಡೆದಾಗ ಮಾತ್ರ ನಿಜವಾದ ಪ್ರಜಾಪ್ರಭುತ್ವ ಗೋಚರಿಸಲು ಸಾಧ್ಯ ಎಂದು ಜಿಲ್ಲಾ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ್ ಶಾನುಭಾಗ್ ಅಭಿಪ್ರಾಯಪಟ್ಟರು.
ಉಡುಪಿಯ ಯಕ್ಷಗಾನ ಕಲರಂಗದ ಐವೈಸಿ ಸಭಾಂಗಣದಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ಬೆಂಗಳೂರು ವತಿಯಿಂದ ಹಾಗೂ ಉಡುಪಿ ಜಿಲ್ಲಾ ಅನುದಾನಿತ ಶಾಲಾ ಸಂಘಗಳ ಸಹಕಾರದಲ್ಲಿ ಶನಿವಾರ (ಜೂ.20) ಆಯೋಜಿಸಿದ್ದ ಉಡುಪಿ ಜಿಲ್ಲೆಯ 200 ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ 20 ಸಾವಿರ ಜೊತೆ ಶಾಲಾ ಸಮವಸ್ತ್ರ ಉಚಿತ ವಿತರಣೆ ಮತ್ತು ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾ ಪೋಷಕ ಪ್ರಶಸ್ತಿ ಪ್ರದಾನ ಮತ್ತು ವೆಬ್ಸೈಟ್ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಡಾ. ರವೀಂದ್ರನಾಥ್ ಶಾನುಭಾಗ್ ಉದ್ಘಾಟಿಸಿದರು. ಪ್ರಶಸ್ತಿ ಪ್ರದಾನ
ನಿವ್ರತ್ತ ಪ್ರಾಧ್ಯಾಪಕ, ಕೃಷಿ ಮತ್ತು ಪರಿಸರ ಲೇಖಕ ಎನ್. ನರೇಂದ್ರ ರೈ ದೆರ್ಲ ಅವರಿಗೆ 'ರಾಜೀವ ಶೆಟ್ಟಿ ವಿದ್ಯಾ ಪೋಷಕ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು.
ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಜಿಲ್ಲಾ ಅನುದಾನಿತ ಪ್ರೌಢಶಾಲೆಗಳ ನೌಕರರ ಸಂಘದ ಅಧ್ಯಕ್ಷ ಡಾ. ಜಯಶೀಲ ಶೆಟ್ಟಿ ಕಂದಾವರ, ಜಿಲ್ಲಾ ಪ್ರಾಥಮಿಕ ಅನುದಾನಿತ ಶಾಲಾ ಸಂಘದ ಅಧ್ಯಕ್ಷ ಕೆ. ಅರುಣಕುಮಾರ್ ಶೆಟ್ಟಿ, ಟ್ರಸ್ಟ್ನ ಉಪಾಧ್ಯಕ್ಷ ಹಾಲಾಡಿ ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಟ್ರಸ್ಟ್ನ ಅಧ್ಯಕ್ಷ ಡಾ. ಎಚ್.ಎಸ್. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾನ್ ದಾಮೋದರ್ ಶರ್ಮ ಬಾರ್ಕೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಸರ್ಕಾರ, ಮಠಾಧಿಪತಿಗಳ ನಿರ್ಲಕ್ಷ್ಯ
ಟ್ರಸ್ಟ್ನ ಅಧ್ಯಕ್ಷ ಡಾ. ಎಚ್.ಎಸ್. ಶೆಟ್ಟಿ ಮಾತನಾಡಿ, ನಾನು ಮರೈನ್ ಮರ್ಕಂಟೈನ್ ವ್ಯವಹಾರ ನಡೆಸುವ ಉದ್ಯಮಿಯಾಗಿದ್ದೇನೆ. ಆದರೆ, ಕಳೆದ 10 ವರ್ಷದಿಂದ ಅಲ್ಲಲ್ಲಿ ನಡೆಯುತ್ತಿರುವ ಯುದ್ಧ ಸಂದಿಗ್ಧತೆ, ಕರೊನಾದಂತಹ ಸಂದರ್ಭದಲ್ಲಿ ಉದ್ಯಮಕ್ಕೆ ಹಿನ್ನಡೆ ಆಗಿದ್ದೂ ಇದೆ. ಆದರೆ, ಎಂದಿಗೂ ನಾನು ಮಾಡುತ್ತಿರುವ ಸಮಾಜಸೇವೆಗೆ ಆರ್ಥಿಕ ತೊಂದರೆ ಆಗದಂತೆ ದೇವರು ಶಕ್ತಿ ಕೊಟ್ಟಿದ್ದಾನೆ. ಶಿಕ್ಷಣ ಕ್ಷೇತ್ರದಲ್ಲಿ ಅನುದಾನಿತ ಶಾಲೆಗಳ ಕೊಡುಗೆ ಮಹತ್ವದ್ದಾಗಿದೆ. ಆದರೆ, ಆಳುವ ಸರ್ಕಾರ ಇಂತಹ ಶಾಲೆಗಳನ್ನು ನಿರ್ಲಕ್ಷಿಸುತ್ತಿದೆ. ಶಿಕ್ಷಕರನ್ನೂ ನೇಮಿಸುತ್ತಿಲ್ಲ. ಮಠಾಧಿಪತಿಗಳೂ ಸಹ ಧರ್ಮ ಹಾಗೂ ಶಾಲೆಗಳ ರಕ್ಷಣೆಯಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ. ಇದು ತುಂಬ ನೋವಿನ ಸಂಗತಿಯಾಗಿದೆ. ಪಠ್ಯಕ್ರಮದಲ್ಲಿ ಇಲ್ಲದಿದ್ದರೂ ಸಹ ಶಿಕ್ಷಕರು ಮಕ್ಕಳಿಗೆ ನಾಡಿನ ವೀರವನಿತೆಯರು, ದೊರೆಗಳ ಇತಿಹಾಸ ತಿಳಿಸಬೇಕು. ಮೌಲ್ಯ ಶಿಕ್ಷಣ ನೀಡಬೇಕು ಎಂದರು.
ನಾಡಿನಲ್ಲಿ ಉಳ್ಳವರು ಬಹಳ ಮಂದಿ ಇದ್ದಾರೆ. ಆದರೆ, ಅವರಲ್ಲಿ ಸಮಾಜಸೇವೆಗೆ ತೊಡಗಿಕೊಂಡವರು ಬೆರಳೆಣಿಕೆಯಷ್ಟು ಮಾತ್ರ. ಉದ್ಯಮಿ ಡಾ. ಎಚ್.ಎಸ್. ಶೆಟ್ಟಿ ಅವರು ತಮ್ಮ ದುಡಿಮೆಯ ಒಂದಿಷ್ಟು ಪಾಲು ಸಮಾಜಸೇವೆಗೆ ಮೀಸಲಿಟ್ಟು ಸಣ್ಣ ಸರ್ಕಾರದಂತೆ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರು 2040ರಲ್ಲಿ ಭಾರತ ವಿಶ್ವಗುರು ಆಗಬೇಕೆಂಬ ಸಂಕಲ್ಪ ತೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ಡಾ. ಎಚ್.ಎಸ್. ಶೆಟ್ಟಿ ಅವರು ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಿರುವುದು ಅತ್ಯಂತ ಪೂರಕವಾಗಿದೆ.
— ಯಶ್ಪಾಲ್ ಸುವರ್ಣ. ಉಡುಪಿ ಶಾಸಕ.