ಹೆಬ್ರಿಯಲ್ಲಿ ಸಂಪೂರ್ಣವಾಗಿ ಹದಗೆಟ್ಟ ರಸ್ತೆ 
ಉಡುಪಿ

ಹೆಬ್ರಿ ಹೆದ್ದಾರಿಗೆ ಹೊಂಡಗಳ ಸಿಂಗಾರ!

ನರೇಂದ್ರ ಎಸ್.ಮರಸಣಿಗೆ ಹೆಬ್ರಿ
ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಹೆಬ್ರಿ ಕೆಳಪೇಟೆ ಮತ್ತು ಅನಂತ ಪದ್ಮನಾಭ ದೇವಸ್ಥಾನ ಬಳಿ ಮತ್ತು ಹಳೇ ಪೊಲೀಸ್ ಠಾಣೆ ಎದುರು ಹಾಗೂ ಹೆಬ್ರಿಯ ಸೊಸೈಟಿ ಎದುರು ಹೆದ್ದಾರಿಯಲ್ಲಿನ ಬೃಹತ್ ಹೊಂಡಗಳಿಂದ ವಾಹನ ಸವಾರರು ಪರದಾಡುವಂತಾಗಿದೆ.
ಮಳೆ ನೀರು ನಿಂತು ಹೊಂಡಗಳಿರುವುದು ಗೊತ್ತಾಗದೆ ದ್ವಿಚಕ್ರ ವಾಹನ ಸವಾರರು ಬೀಳುವ ಅಪಾಯವಿದೆ. ಹೆಬ್ರಿ ಮುಖ್ಯರಸ್ತೆ ರಾಷ್ಟ್ರೀಯ ಹೆದ್ದಾರಿಯಾದ ಬಳಿಕ ಹೊಂಡ ಮುಚ್ಚುವ ಕಾರ್ಯಗಳು ವಿಳಂಬವಾಗುತ್ತಿವೆ. ನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಓಡಾಟ ನಡೆಸುತ್ತವೆ.
ಪ್ರತಿ ವರ್ಷ ಕೆಳಪೇಟೆಯಲ್ಲಿ ಚರಂಡಿ ನೀರು ಹರಿದು ರಸ್ತೆ ಗುಂಡಿಗಳಿಗೆ ಕಾರಣವಾಗಿದೆ. ಜನರು ಪ್ರತಿಭಟನೆ ನಡೆಸಿದ ನಂತರ ತೇಪೆ ಹಾಕುವ ಕಾರ್ಯವಾಗುತ್ತದೆ. ಇದರಿಂದ ಸ್ವಲ್ಪ ದಿನಗಳ ಬಳಿಕ ಮತ್ತೆ ಗುಂಡಿಗಳು ಸೃಷ್ಟಿಯಾಗಿ ವಾಹನ ಸವಾರರಿಗೆ ಕಂಟಕವಾಗುತ್ತಿದೆ. ಈ ರಸ್ತೆಯಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು ಓಡಾಟ ನಡೆಸುವ ವೇಳೆ ವಾಹನಗಳು ವೇಗವಾಗಿ ಚಲಿಸುವಾಗ ಕೆಸರಿನ ಸಿಂಚನವಾಗುತ್ತಿದೆ. ಆದ್ದರಿಂದ ಈ ರಸ್ತೆಗೆ ಶಾಶ್ವತ ಯೋಜನೆ ರೂಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹೆಬ್ರಿಯ ವಿವಿಧೆಡೆ ಹೆದ್ದಾರಿಯಲ್ಲಿ ಬಿದ್ದಿರುವ ಬೃಹತ್ ಹೊಂಡಗಳನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನಿಸಿ ಶೀಘ್ರವಾಗಿ ಹೊಂಡ ಮುಚ್ಚುವ ಕಾರ್ಯವನ್ನು ನಡೆಸಿ, ಅಪಾಯವನ್ನು ತಪ್ಪಿಸಬೇಕು. ಶಾಲಾ ಮಕ್ಕಳು ಈ ರಸ್ತೆಯನ್ನು ಅವಲಂಬಿಸಿರುವುದರಿಂದ ಶೀಘ್ರದಲ್ಲಿ ರಸ್ತೆ ದುರಸ್ತಿ ನಡೆಸಬೇಕು.

— ಕುಚ್ಚೂರು ಶ್ರೀಕಾಂತ್ ಪೂಜಾರಿ ಸಾಮಾಜಿಕ ಹೋರಾಟಗಾರ

ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಸ್ತಾವನೆಯನ್ನು ದೆಹಲಿಗೆ ಕಳುಹಿಸಲಾಗಿದೆ. ಒಪ್ಪಿಗೆ ಬಂದ ನಂತರ ಘ್ರದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ. ಸದ್ಯಕ್ಕೆ ತಾತ್ಕಾಲಿಕವಾಗಿ ದುರಸ್ತಿ ಮಾಡಿಸುತ್ತೇವೆ.

— ಶಶಿಧರ್, ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಇಲಾಖೆ