ಭಾರಿ ವಾಹನಗಳ ಸಂಚಾರ ಮತ್ತಷ್ಟು ಕಟ್ಟುನಿಟ್ಟು
ಪುರುಷೋತ್ತಮ ಪೆರ್ಲ ಕಾಸರಗೋಡು
ಕಾಸರಗೋಡಿನಲ್ಲಿ ಬೆಳಗ್ಗೆ ಹಾಗೂ ಸಂಜೆ ಶಾಲಾ ಅವಧಿಯಲ್ಲಿ ಟಿಪ್ಪರ್ ಸಹಿತ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಜಾರಿಗೊಳಿಸಿದ್ದ ಆದೇಶವನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮತ್ತಷ್ಟು ಬಿಗಿಗೊಳಿಸುವುದರ ಜತೆಗೆ ಶಾಲಾ ವಾಹನಗಳ ಸುಗಮ ಸಂಚಾರಕ್ಕೂ ಅನುಕೂಲವಾಗಲಿದೆ.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ರಸ್ತೆ ಸುರಕ್ಷತೆ ಪ್ರಾಧಿಕಾರದ ಸಭೆಯಲ್ಲಿ ಈ ಕುರಿತು ಚರ್ಚಿಸಿದ್ದು, ಟಿಪ್ಪರ್ ಸಹಿತ ಹಲವು ಭಾರಿ ವಾಹನಗಳ ಅಜಾಗರೂಕತೆ, ಅತಿವೇಗದ ಸಂಚಾರದಿಂದ ವಿದ್ಯಾರ್ಥಿಗಳಿಗೆ ಅಪಾಯ ಸಂಭವಿಸುವ ಸಾಧ್ಯತೆ ಕುರಿತು ಚರ್ಚಿಸಲಾಗಿತ್ತು. ಶಾಲ ವಾಹನ ಚಾಲಕರೂ ದನಿಗೂಡಿಸಿದ್ದರು.
ಜಿಲ್ಲೆಯಲ್ಲಿರುವ ಶಾಲಾ ವಲಯಗಳಲ್ಲಿ ಬಹಳಷ್ಟು ಟಿಪ್ಪರ್‌ಗಳು ಕರ್ಕಶ ಹಾರ್ನ್ ಸದ್ದಿನ ಜತೆಗೆ ಅತಿ ವೇಗವಾಗಿ ಸಂಚರಿಸಿ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದವು. ಆಕ್ರೋಶಗೊಂಡ ಸಾರ್ವಜನಿಕರು ಹೋರಾಟ ಆರಂಭಿಸಿದ್ದರು. ಟಿಪ್ಪರ್‌ಗಳ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆ ಕುರಿತು ಶಾಲೆ ವಾಹನಗಳ ಚಾಲಕರೂ ದೂರಿದ್ದರು. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಬೆಳಗ್ಗೆ 9ರಿಂದ 10, ಸಂಜೆ 3.30ರಿಂದ 5 ಗಂಟೆ ತನಕ ಟಿಪ್ಪರ್ ಸಹಿತ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದರೂ ಕಟ್ಟುನಿಟ್ಟಾಗಿ ಜಾರಿಗೊಂಡಿರಲಿಲ್ಲ. ಇದೀಗ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಇಲಾಖೆ ಮುಂದಾಗಿದೆ.
ರಸ್ತೆಗೂ ಹಾನಿ
ಇನ್ನೊಂದೆಡೆ ಟೋರಸ್ ಲಾರಿ ಸಂಚಾರವೂ ಭೀತಿ ಹುಟ್ಟಿಸಿದ್ದು, ಅತೀ ಭಾರ ಹೊತ್ತುಕೊಂಡು ಚೆರ್ಕಳದಿಂದ ಉಕ್ಕಿನಡ್ಕ ತನಕ ನಿತ್ಯವೂ ಸಂಚರಿಸುವುದರಿಂದ ಆ ಭಾಗದ ರಸ್ತೆ ಹಾನಿಯಾಗಿದೆ. ತಪಾಸಣೆ ನಡೆಸಬೇಕಾದ ಅಧಿಕಾರಿಗಳು ಈ ಕುರಿತು ಮೌನವಹಿಸಿದ್ದಾರೆ.
ರಾತ್ರಿ ಕಾರ್ಯನಿರ್ವಹಿಸದ ಚೆಕ್‌ಪೋಸ್ಟ್
ಪೆರ್ಲ ಆರ್‌ಟಿಓ ಚೆಕ್‌ಪೋಸ್ಟ್ ಸಂಜೆ 5ರ ಬಳಿಕ ಕಾರ್ಯನಿರ್ವಹಿಸದ ಕಾರಣ ಅಲ್ಲಿನ ಸಿಬ್ಬಂದಿಯನ್ನು ಸಂಚಾರ ದಳಕ್ಕೆ ನಿಯೋಜಿಸಲಾಗುತ್ತಿದೆ. ಚೆಕ್‌ಪೋಸ್ಟ್ ಕಚೇರಿಯನ್ನು ಬೆಳಗ್ಗೆ 9ರ ಬಳಿಕವಷ್ಟೇ ತೆರೆಯಲಾಗುತ್ತದೆ. ಈ ಅವಧಿಯಲ್ಲಿ ಅತಿಭಾರ ಹೊತ್ತ ಟೋರಸ್ ಲಾರಿಗಳು ಸರಾಗವಾಗಿ ಸಂಚರಿಸುತ್ತಿವೆ. ಸಂಚಾರಿ ದಳದ ವಿಶೇಷ ಪಡೆ ಚೆಕ್‌ಪೋಸ್ಟ್‌ನಲ್ಲಿದ್ದು ರಸ್ತೆ ನಿಯಮ ಉಲ್ಲಂಸುವ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಆದರೆ ಇಂಥ ಯಾವುದೇ ನಿದರ್ಶನಗಳಿಲ್ಲ ಎಂದು ಸ್ಥಳೀಯರು ದೂರುತ್ತಾರೆ.
ವಿದ್ಯಾರ್ಥಿಗಳು ಸಂಚರಿಸುವ ಸಮಯದಲ್ಲಿ ಟಿಪ್ಪರ್ ಲಾರಿಗಳ ಅಜಾಗರೂಕತೆ ಚಾಲನೆಗೆ ಬ್ರೇಕ್ ಹಾಕಲು ಶಿಕ್ಷಣ ಇಲಾಖೆ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿದೆ. ಟಿಪ್ಪರ್ ಲಾರಿಗಳ ನಿಯಂತ್ರಣದ ಜತೆಗೆ ಶಾಲೆ, ಕಾಲೇಜು ಪರಿಸರಗಳಲ್ಲಿ ರಸ್ತೆ ಸುರಕ್ಷತೆ ಕಾನೂನು ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
— ಅರ್ಜುನ್ ಪಾಂಡಿಯನ್, ಕಾಸರಗೋಡು ಜಿಲ್ಲಾಧಿಕಾರಿ