* ಕರಾವಳಿಯಲ್ಲಿ ಮಧ್ಯಾಹ್ನ ಹೊರ ಬರಲಾರದ ಸ್ಥಿತಿ
* ವೃದ್ಧರು, ಚಿಕ್ಕ ಮಕ್ಕಳ ಆರೋಗ್ಯಕ್ಕೆ ಕುತ್ತು
ಕಳೆದ ಒಂದು ವಾರದಿಂದ ಉಡುಪಿ ಜಿಲ್ಲೆಯಲ್ಲಿ ಬಿಸಿಲು ಝಳ ದಿನೇದಿನೆ ಹೆಚ್ಚುತ್ತಲಿದ್ದು, ಜನರು ಹೈರಾಣಾಗುವಂತಾಗಿದೆ. ಸೂರ್ಯಾಸ್ತದ ನಂತರವೂ ಸಹ ವಿಪರೀತ ಸೆಕೆ ಕಂಡುಬರುತ್ತಿದ್ದು, ವೃದ್ಧರು, ಚಿಕ್ಕ ಮಕ್ಕಳು ನಿತ್ರಾಣಗೊಳ್ಳುವಂತಾಗಿದೆ.
ಸೆಕೆಯ ತೀವ್ರತೆಯಿಂದ ರಾತ್ರಿ ವೇಳೆ ಸರಿಯಾಗಿ ನಿದ್ದೆಯೂ ಬಾರದೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಅತಿಯಾದ ಸೆಕೆಯಿಂದ ಬಳಲಿಕೆ, ನಿರ್ಜಲೀಕರಣದಿಂದ ವಾಂತಿ, ಜ್ವರ ಬಾಧೆ, ಕಣ್ಣಿನಲ್ಲಿ ಉರಿ, ತಲೆನೋವಿನ ವ್ಯಾಧಿಗೆ ಒಳಗಾಗುತ್ತಿದ್ದಾರೆ.
ಶಾಖದ ತೀವ್ರ ಹೊಡೆತ
ಪ್ರಸ್ತುತ ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಶಾಖದ ತೀವ್ರ ಹೊಡೆತ (ಹೀಟ್ ವೇವ್ ಸ್ಟ್ರೊಕ್)ವೂ ಕಾಡುತ್ತಿದೆ. ಉಡುಪಿ ಜಿಲ್ಲೆಯ ವಾರದಿಂದ ಗರಿಷ್ಠ 33 ಡಿ.ಸೆ. ಹಾಗೂ ಕನಿಷ್ಠ 27 ಡಿ.ಸೆ. ತಾಪಮಾನ ದಾಖಲಾಗುತ್ತಿದೆ. 33 ಡಿ.ಸೆ. ಇದ್ದರೂ ಅದರ ಪ್ರಭಾವ 35 ಡಿ.ಸೆ.ಯಷ್ಟು ಇದ್ದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ತಾಪಮಾನದ ಹೆಚ್ಚಿನ ಅವಧಿಯಾದ ಮಧ್ಯಾಹ್ನ 12ರಿಂದ 3ರ ವರೆಗೆ ಬಿಸಿಲ ಝಳ ತಡೆಯಲಾಗದ ಸ್ಥಿತಿ ಇದೆ.
ನಾಲ್ಕು ದಿನ ಮಳೆ ಸಾಧ್ಯತೆ
ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚುತ್ತಲಿದ್ದು, ರಾಜ್ಯ ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಏ.17ರಿಂದ ಏ.20ರ ವರೆಗೆ ಒಂದೆರಡು ಸ್ಥಳಗಳಲ್ಲಿ ಹಗುರ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೆ, ಈ ಜಿಲ್ಲೆಗಳಲ್ಲಿ ಚದುರಿದ ಪ್ರದೇಶಗಳಲ್ಲಿ ಬಿಸಿ ಮತ್ತು ತೇವಾಂಶದ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ರಕ್ಷಣೆಗೆ ಮುಂಜಾಗ್ರತಾ ಕ್ರಮ ವಹಿಸಿ
ಪ್ರತಿದಿನವೂ ಬಿಸಿಲಿನ ತಾಪ ಹೆಚ್ಚುತ್ತಲೇ ಇರುವುದರಿಂದ ಉಡುಪಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಾರ್ವಜನಿಕರಿಗೆ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ನೀಡಿದೆ. ಕೆಲವೊಂದು ಮುಂಜಾಗ್ರತಾ ಕ್ರಮ ಅನುಸರಿಸುವಂತೆ ಸಲಹೆ ನೀಡಿದೆ. ಬಿಸಿಲಿನ ಅವಧಿಯಲ್ಲಿ ಅನಗತ್ಯವಾಗಿ ಮನೆಯಿಂದ ಹೊರ ಹೋಗಬೇಡಿ. ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರು ಕುಡಿಯಿರಿ. ಹಗುರವಾದ, ತಿಳಿ ಬಣ್ಣದ, ಸಡಿಲವಾದ ಮತ್ತು ಹತ್ತಿ ಬಟ್ಟೆಗಳನ್ನೇ ಧರಿಸಿ. ಬಿಸಿಲಿನಲ್ಲಿ ಹೋಗುವಾಗ ರಕ್ಷಣೆಗಾಗಿ ಕನ್ನಡಕ, ಟೋಪಿ ಧರಿಸಿ, ಬರಿಗಾಲಿನಲ್ಲಿ ಹೋಗಬೇಡಿ. ಬೆಳಗ್ಗೆ 11ರಿಂದ ಸಂಜೆ 4ರ ವರೆಗೆ ಹೊರಾಂಗಣಗಳಲ್ಲಿ ಸಭೆ ಇನ್ನಿತರ ಕಾರ್ಯಕ್ರಮ ನಡೆಸಿದರೆ ಬಿಸಿಲಿನ ಝಳ ತಪ್ಪಿಸಿಕೊಳ್ಳಲು ಶಾಮಿಯಾನ ಅಥವಾ ಪೆಂಡಾಲ್ ವ್ಯವಸ್ಥೆ ಹಾಗೂ ಸಭಿಕರಿಗೆ ಕಡ್ಡಾಯವಾಗಿ ಕುಡಿಯುವ ನೀರು ಇಡಬೇಕು. ಸಾಕು ಪ್ರಾಣಿಗಳನ್ನೂ ನೆರಳಿನಲ್ಲಿ ಇಟ್ಟು, ಅವುಗಳಿಗೂ ಕುಡಿಯಲು ಸಾಕಷ್ಟು ನೀರು ಒದಗಿಸಬೇಕು. ಮನೆಯೊಳಗೆ ತಂಪಾಗಿರಿಸಲು ಪರದೆ, ಶಟರ್ ಅಥವಾ ಸನ್ಶೇಡ್ ಬಳಸಬೇಕು.
ಮನೆಯಲ್ಲೇ ತಯಾರಿಸಿ ಪಾನೀಯ
ದೇಹ ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೋನೇಟೆಡ್ ಅಂಶ ಹೊಂದಿರುವ ತಂಪು ಪಾನೀಯ ಸೇವಿಸಬಾರದು. ಸೆಕೆ ಇದೆಯೆಂದು ತಂಪು ಆಹಾರ ಸೇವಿಸದೆ ಸಾಧ್ಯವಾದಷ್ಟು ಬಿಸಿ ಆಹಾರವನ್ನೇ ಸೇವಿಸಬೇಕು. ಬಿಸಿಲಿನಲ್ಲಿ ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳು ಅಥವಾ ಸಾಕುಪ್ರಾಣಿಗಳನ್ನು ಬಿಡಬಾರದು. ಮೂರ್ಛೆ ಅಥವಾ ಅನಾರೋಗ್ಯ ಉಂಟಾದಲ್ಲಿ ಕೂಡಲೇ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು.