ಉಡುಪಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಶ್ವ ಹೃದಯ ದಿನದ ನಿಮಿತ್ತ ಆರೋಗ್ಯ ಜಾಗೃತಿಯ 3D ಕಲಾಕೃತಿಯನ್ನು ಡಾ. ಅವಿನಾಶ್​ ಶೆಟ್ಟಿ ಬಿಡುಗಡೆ ಮಾಡಿದರು. ಡಾ. ಗಣೇಶ್​ ಪಿ., ಡಾ. ಗಣೇಶ್​ ಕಾಮತ್​ ಎಸ್​., ಡಾ. ಟಾಮ್​ ದೇವಾಸಿಯಾ, ಡಾ. ಅಶ್ವಿನಿ ಕುಮಾರ್​ ಇದ್ದರು. 
ಉಡುಪಿ

ಎಚ್ಚರಿಕೆ ವಹಿಸಿದರೆ ತಡೆಯಬಹುದು ಹೃದಯಾಘಾತ

* ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್​ ಶೆಟ್ಟಿ ಅಭಿಪ್ರಾಯ

* ಮಣಿಪಾಲದಲ್ಲಿ ವಿಶ್ವ ಹೃದಯ ದಿನ ಆಚರಣೆ

* ಆರೋಗ್ಯ ಜಾಗೃತಿಯ 3D ಕಲಾಕೃತಿ ಬಿಡುಗಡೆ

ಉಡುಪಿ: ಭಾರತದಲ್ಲಿ ಸಂಭವಿಸುವ ಸಾವುಗಳಿಗೆ ಹೃದ್ರೋಗ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಆದರೆ, ಎದೆಯಲ್ಲಿ ಅಸ್ವಸ್ಥತೆ, ಉಸಿರಾಟದ ತೊಂದರೆ ಅಥವಾ ಅಸಹಜ ಆಯಾಸದಂತಹ ಆರಂಭಿಕ ಎಚ್ಚರಿಕೆಯ ಲಕ್ಷಣಗಳನ್ನು ಅನೇಕರು ನಿರ್ಲಕ್ಷಿಸುತ್ತಾರೆ. ಮೊದಲೇ ಎಚ್ಚರಿಕೆ ವಹಿಸಿದರೆ ಬಹುಜನರ ಜೀವ ಉಳಿಸಬಹುದಾಗಿದೆ ಎಂದು ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್​ ಶೆಟ್ಟಿ ತಿಳಿಸಿದರು.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ (ಕೆಎಂಸಿ)ಯ ನೆಲಮಹಡಿಯ ಒಪಿಡಿ ಲಾಂಜ್​ನಲ್ಲಿ ಕಸ್ತೂರ್ಬಾ ವೈದ್ಯಕೀಯ ಕಾಲೇಜ್​ ಮತ್ತು ಆಸ್ಪತ್ರೆಯ ಹೃದ್ರೋಗ ವಿಭಾಗ ಹಾಗೂ ಕಾರ್ಡಿಯೋ ವ್ಯಾಸ್ಕುಲರ್​ ಮತ್ತು ಥೊರಾಸಿಕ್​ ಸರ್ಜರಿ ವಿಭಾಗದ ವತಿಯಿಂದ ವಿಶ್ವ ಹೃದಯ ದಿನದ ನಿಮಿತ್ತ ಮಂಗಳವಾರ (ಸೆ.29) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೃದಯ ಆರೋಗ್ಯ ಜಾಗೃತಿಯ 3D ಕಲಾಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಗಣೇಶ್​ ಪಿ., ಕಾರ್ಡಿಯೋ ವ್ಯಾಸ್ಕುಲರ್​ ಮತ್ತು ಥೊರಾಸಿಕ್​ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಗಣೇಶ್​ ಕಾಮತ್​ ಎಸ್​., ಪ್ರಾಧ್ಯಾಪಕ ಡಾ. ಟಾಮ್​ ದೇವಾಸಿಯಾ ಉಪಸ್ಥಿತರಿದ್ದರು. ಬೋಧಕ ಸಿಬ್ಬಂದಿ, ವೈದ್ಯರು, ಶುಶ್ರೂಷಾ ಸಿಬ್ಬಂದಿ ಹಾಗೂ ಆಸ್ಪತ್ರೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

ಮಣಿಪಾಲದ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಅಶ್ವಿನಿ ಕುಮಾರ್​ ಮಾರ್ಗದರ್ಶನದಲ್ಲಿ ವಿಭಾಗದ ಶ್ರೀನಾಥ್​ ಮಣಿಪಾಲ ಅವರು ರಚಿಸಿದ್ದ 3D ಕಲಾಕೃತಿಯನ್ನು ಆಸ್ಪತ್ರೆಯ ಅತ್ಯಂತ ಜನನಿಬಿಡ ಸ್ಥಳಗಳಲ್ಲಿ ಒಂದಾದ ಒಪಿಡಿ ಲಾಂಜ್​ನಲ್ಲಿ ಅಳವಡಿಸಲಾಯಿತು.

ಆರೋಗ್ಯಕರ ಆಹಾರ, ನಿಯಮಿತ ದೈಹಿಕ ಚಟುವಟಿಕೆ, ತಂಬಾಕು ಸೇವನೆಯಿಂದ ದೂರವಿದ್ದರೆ ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು. 'ಹೃದಯದ ಒಂದು ಬಡಿತವನ್ನೂ ನಿರ್ಲಕ್ಷಿಸಬೇಡಿ, ಆರೋಗ್ಯ ತಪಾಸಣೆಯನ್ನೂ ತಪ್ಪಿಸಬೇಡಿ' ಇದು ಈ ವರ್ಷದ ಸಂದೇಶವಾಗಿದೆ.
> ಡಾ. ಅವಿನಾಶ್​ ಶೆಟ್ಟಿ. ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕ.