ಉಡುಪಿ ನಗರದ ನಾರ್ತ್​ ಸ್ಕೂಲ್​ನಿಂದ ಶ್ರೀಕೃಷ್ಣ ಮಠದ ರಾಜಾಂಗಣ ಸಂಪರ್ಕಿಸುವ ಕಾಳಿಂಗ ಮರ್ಧನ ರಸ್ತೆ ಮಾರ್ಗದಲ್ಲಿರುವ ಕಸ, ತ್ಯಾಜ್ಯದ ರಾಶಿ. 
ಉಡುಪಿ

ಸಾರ್ವಜನಿಕ ಶೌಚಾಲಯದ ಬಳಿ ಕಸದ ರಾಶಿ

* ಉಡುಪಿ ರಾಜಾಂಗಣ ಸಂಪರ್ಕಿಸುವ ರಸ್ತೆ ಮಾರ್ಗ

* ದುರ್ವಾಸನೆಯಿಂದ ಸಾರ್ವಜನಿಕರಿಗೆ ತೊಂದರೆ

ಉಡುಪಿ: ನಗರದ ನಾರ್ತ್​ ಸ್ಕೂಲ್​ನಿಂದ ಶ್ರೀಕೃಷ್ಣ ಮಠದ ರಾಜಾಂಗಣ ಸಂಪರ್ಕಿಸುವ ಕಾಳಿಂಗ ಮರ್ಧನ ರಸ್ತೆ ಮಾರ್ಗದ ಸಮೀಪದಲ್ಲೇ ಇರುವ ನಗರಸಭೆಯ ಸಾರ್ವಜನಿಕ ಶೌಚಾಲಯದ ಬಳಿ ಕಸದ ರಾಶಿ ಬಿದ್ದಿದೆ.

ತಿಂಗಳಿಂದ ಕಸದ ರಾಶಿ ಇದ್ದು, ಹಲವು ದಿನಗಳಿಂದ ಪ್ಲಾಸ್ಟಿಕ್​ ಬ್ಯಾಗಗಳ ಒಳಗೆ ಇರುವ ತ್ಯಾಜ್ಯದಿಂದ ದುರ್ನಾತ ಬರುತ್ತಿದೆ. ಪರಿಸರದಲ್ಲಿ ಅಸಹ್ಯ ವಾತಾವರಣ ನಿರ್ಮಾಣಗೊಂಡಿದೆ.

ಯಾತ್ರಿಕರಿಗೂ ಅಸಹ್ಯ

ಈ ರಸ್ತೆ ಮಾರ್ಗದ ಮೂಲಕವೇ ಪ್ರತಿನಿತ್ಯ ಶ್ರೀಕೃಷ್ಣ ಮಠಕ್ಕೆ ಬರುವ ಯಾತ್ರಿಕರು ಸಂಚರಿಸುತ್ತಾರೆ. ಸಮೀಪದಲ್ಲೇ ಶಾಲೆಯೂ ಇದ್ದು, ಕಸದ ರಾಶಿಯಿಂದಾಗಿ ವಿದ್ಯಾರ್ಥಿಗಳೂ ದುರ್ನಾತದ ವಾಸನೆ ಸೇವಿಸುವಂತಾಗಿದೆ. ಸ್ಥಳಿಯ ನಿವಾಸಿಗರಿಗೂ ತೊಂದರೆ ಆಗುತ್ತಿದೆ. ಪಾದಚಾರಿಗಳು ಮೂಗು ಮುಚ್ಚಿಕೊಂಡು ಸಂಚರಿಸಬೇಕಿದೆ.

ಕ್ರಮಕ್ಕೆ ಆಗ್ರಹ

ನಗರದ ಹೃದಯ ಭಾಗದಲ್ಲೇ ಈ ರೀತಿ ಕಸ ಎಸೆದಿರುವುದು ಅನಾಗರಿಕರ ಲಕ್ಷಣವಾಗಿದೆ. ಈ ತ್ಯಾಜ್ಯವನ್ನು ಎಸೆದವರು ಸ್ಥಳೀಯ ಅಂಗಡಿಯವರೇ ಅಥವಾ ಅನ್ನಯ ಕಡೆಯ ಕಸ ತಂದು ಇಲ್ಲಿ ಎಸೆಯುತ್ತಾರೆಯೇ ಎನ್ನುವುದನ್ನು ನಗರಸಭೆಯ ಪರಿಸರ ಅಧಿಕಾರಿಗಳು ಪತ್ತೆ ಮಾಡಬೇಕು. ಕಸದ ರಾಶಿ ಪರಿಶೀಲಿಸಿದರೆ ಅಲ್ಲಿರುವ ಕವರ್​ ಅಥವಾ ಇನ್ನಾವುದೋ ಬಾಕ್ಸ್​ಗಳ ಮೇಲೆ ಸಂಬಂಧಪಟ್ಟವರ ಮೊಬೈಲ್​ ನಂಬರ್​ ಲಭಿಸಬಹುದು. ಅಥವಾ ಸುತ್ತಮುತ್ತಲೂ ಸಿಸಿ ಕ್ಯಾಮರಾ ಇದ್ದಲ್ಲಿ ಅದನ್ನೂ ಪರಿಶೀಲಿಸಿ ಕಸ ಎಸೆದವರು ಯಾರೆಂಬುದನ್ನು ಪತ್ತೆ ಮಾಡಿ ದಂಡ ವಿಧಿಸಿಬೇಕು. ಮತ್ತೆ ಕಸ ಎಸೆಯದಂತೆ ಕಾನೂನು ಕ್ರಮವನ್ನೂ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಗರ ಭಾಗದಲ್ಲಿ ತೀವ್ರ ಜನ ಸಂಚಾರ ಇರುವಲ್ಲಿ ಕಸದ ರಾಶಿ ಬಿದ್ದಿರುವುದು ನಿಜಕ್ಕೂ ಅಸಹ್ಯ. ಉಡುಪಿಗೆ ರಾಜ್ಯದಿಂದಷ್ಟೇ ಅಲ್ಲದೆ ವಿದೇಶಗಳಿಂದಲೂ ಪ್ರವಾಸಿಗರು, ಯಾತ್ರಿಕರು ಆಗಮಿಸುತ್ತಾರೆ. ಸಾರ್ವಜನಿಕ ಶೌಚಾಲಯಕ್ಕೆ ಬರುವವರಿಗೂ ಹೇಸಿಗೆ ಆಗುವಂತಿದೆ. ಇದು ಪರಿಸರದ ಸ್ವಚ್ಛತೆ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ನಗರಸಭೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಕಸದ ರಾಶಿ ತೆರವುಗೊಳಿಸಬೇಕು. ನಗರದಲ್ಲಿ ಕಸ, ತ್ಯಾಜ್ಯದ ಗುಡ್ಡೆ ಬೀಳದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.
ನಿತ್ಯಾನಂದ ಒಳಕಾಡು. ಉಡುಪಿ ನಗರಸಭೆಯ ಮಾಜಿ ಸದಸ್ಯ.