ಗುರುನಗರ ಗುರುಪುರ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ‘ಆಟಿಡೊಂಜಿ ದಿನ’ ಕಾರ್ಯಕ್ರಮ ಉದ್ಘಾಟಿಸಲಾಯಿತು. ಗೌರವಾಧ್ಯಕ್ಷ ದೀಪಕ್ ಕೋಟ್ಯಾನ್, ಶೋಭಾ ಡಿ.ಗುರುಪುರ, ವಿನೋದಾ ಡಿ.ಅಂಚನ್, ದಿಲೀಪ್ ಅಮೀನ್, ತನಿಯಪ್ಪ ಪೂಜಾರಿ, ಸೀತಾರಾಮ ಪೂಜಾರಿ ಕರಿಮನೆ, ಪತ್ರಕರ್ತ ಮೋಹನದಾಸ ಮರಕಡ ಮತ್ತಿತರರಿದ್ದರು.
ಗುರುಪುರ: 30 ವರ್ಷಗಳ ಹಿಂದೆ ‘ಆಟಿ’ ಎಂದರೆ ಕೆಲಸವಿಲ್ಲದೆ ಕಷ್ಟದ ಜೀವನ ನಡೆಸಬೇಕಿದ್ದ ತಿಂಗಳಾಗಿತ್ತು. ಶ್ರೀಮಂತ ರೈತರಿಗೂ ಈ ತಿಂಗಳು ಕಷ್ಟವಾಗಿತ್ತು. ಈ ತಿಂಗಳಲ್ಲಿ ಪ್ರಕೃತಿ ಮಡಿಲಲ್ಲಿರುವ ಸೊತ್ತುಗಳ ಖಾದ್ಯ ಮಾಡಿ ತಿನ್ನುತ್ತಿದ್ದರು.
ಇದರಿಂದ ಅವರ ಆರೋಗ್ಯ ವರ್ಷಪೂರ್ತಿ ಉತ್ತಮವಾಗಿತ್ತು ಸಂಘದ ಗೌರವಾಧ್ಯಕ್ಷ ದೀಪಕ್ ಕೋಟ್ಯಾನ್ ಹೇಳಿದರು. ಗುರುನಗರ ಗುರುಪುರ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಭಾನುವಾರ 2ನೇ ವರ್ಷದ ‘ಆಟಿಡೊಂಜಿ ದಿನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತ ಮೋಹನದಾಸ ಮರಕಡ ಆಟಿ ತಿಂಗಳ ವೈಶಿಷ್ಟತೆ ಬಗ್ಗೆ ಮಾತನಾಡಿದರು. ಸಂಘ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಬರಿಪಟ್ಲ ಅಧ್ಯಕ್ಷತೆ ವಹಿಸಿದ್ದರು. ಗುರುಪುರ ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನದ ಧೂಮಾವತಿ ಪಾತ್ರಿ ತನಿಯಪ್ಪ ಪೂಜಾರಿ ಶುಭಹಾರೈಸಿದರು. ಸಂಘದ ಜತೆ ಕಾರ್ಯದರ್ಶಿ ಯೋಗಿತಾ ಯು. ಸ್ವಾಗತಿಸಿದರು.
ಸಂಘದ ಮಾಜಿ ಅಧ್ಯಕ್ಷ ಶೀನ ಕೋಟ್ಯಾನ್, ಉಪಾಧ್ಯಕ್ಷ ದಿಲೀಪ್ ಅಮೀನ್, ಪ್ರಧಾನ ಕಾರ್ಯದರ್ಶಿ ಶೋಭಾ ಡಿ.ಗುರುಪುರ, ಸ್ಫೂರ್ತಿ ಮಹಿಳಾ ಘಟಕ ಅಧ್ಯಕ್ಷೆ ವಿನೋದಾ ಡಿ.ಅಂಚನ್, ಹಿರಿಯರಾದ ಸೀತಾರಾಮ ಪೂಜಾರಿ ಕರಿಮನೆ, ಗಿರೀಶ್ ಪೂಜಾರಿ ಇಟ್ಟಬಾಗಿಲು, ಮಹಾಬಲ ಅಮೀನ್, ಸುಭಾಶ್ಚಂದ್ರ ಪೊನ್ನಲೆ, ಸಂಘದ ಹಾಲಿ ಹಾಗೂ ಮಾಜಿ ಪದಾಧಿಕಾರಿಗಳು, ಸದಸ್ಯರು, ಬಿಲ್ಲವ ಸಮಾಜ ಹಿರಿಯರು, ಅನ್ಯ ಸಮಾಜದವರು ಉಪಸ್ಥಿತರಿದ್ದರು.
ಸ್ಥಳೀಯ ಪ್ರತಿಭೆಗಳಿಂದ ಭರತ ನಾಟ್ಯ, ಹುಲಿ ಕುಣಿತ, ಆಧುನಿಕ ಶೈಲಿಯ ನೃತ್ಯ, ಜಾನಪದ ನೃತ್ಯ ಪ್ರದರ್ಶನಗೊಂಡವು. ಸಾನ್ವಿ ಗುರುಪುರ ನಿರೂಪಿಸಿದರು.ಸಂಘಟನಾ ಕಾರ್ಯದರ್ಶಿ ಯಶವಂತ ಕೋಟ್ಯಾನ್ ವಂದಿಸಿದರು.
ಆಟಿ ಖಾದ್ಯಗಳು
ತುಳುನಾಡಿನ ಜನಪದೀಯರು ಆಟಿ ತಿಂಗಳಲ್ಲಿ ಸೇವಿಸುತ್ತಿದ್ದ ಬಹುತೇಕ ಎಲ್ಲ ತಿಂಡಿ-ತಿನಸುಗಳು ಆಟಿಡೊಂಜಿ ದಿನದಲ್ಲಿ ಅನಾವರಣಗೊಂಡಿದ್ದವು. 32 ಬಗೆಯ ತಿಂಡಿ ತಿನಸುಗಳು ಇದ್ದವು.
ತುಳುನಾಡ ಪರಂಪರೆಯಲ್ಲಿ ಆಟಿ ತಿಂಗಳು ಅತಿ ಮಹತ್ವದ್ದಾಗಿದೆ. ಯುವ ಪೀಳಿಗೆಗೆ ಈ ತಿಂಗಳ ವಿಶೇಷತೆ ತಿಳಿಸುವ ಅಗತ್ಯವಿದೆ. ಹಿರಿಯರ ಆಚರಣೆ, ಸಂಪ್ರದಾಯಗಳಲ್ಲಿ ವೈಜ್ಞಾನಿಕ ಸತ್ಯ ಅಡಕವಾಗಿದ್ದು, ಸಾರಾಸಗಟಾಗಿ ಯಾವುದನ್ನೂ ಅಲ್ಲಗಳೆಯುವಂತಿಲ್ಲ.
— ಬಾಲಕೃಷ್ಣ ಪೂಜಾರಿ ಬರಿಪಟ್ಲ ಸಂಘ ಅಧ್ಯಕ್ಷ