ಉಡುಪಿ: ಜಿಪಂ ಅನುದಾನದಡಿ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್ಎಚ್ಎಂ)ದಡಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗೆ ಮೂರ್ನಾಲ್ಕು ತಿಂಗಳಿಂದ ವೇತನ ನೀಡಿಲ್ಲ. ಕೆಲಸಕ್ಕೆ ನೇಮಿಸಿದ್ದ ಖಾಸಗಿ ಏಜೆನ್ಸಿಯವರ ನಿರ್ಲಕ್ಷ್ಯ ಹಾಗೂ ತಾರತಮ್ಯ ಧೋರಣೆಯಿಂದ ನೌಕರರಿಗೆ 'ವೇತನ' ಕೊರಗು ಉಂಟಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಚೇರಿ ಹಾಗೂ ಅಧೀನ ಸಂಸ್ಥೆಗಳಲ್ಲಿ ಈ ಸಿಬ್ಬಂದಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ 167 ಸಿಬ್ಬಂದಿ ಹಾಗೂ ಎನ್ಎಚ್ಎಂ ಅಭಿಯಾನದಡಿ 130 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ.
ವೇತನ ಅನಿಶ್ಚಿತತೆ
ಮೂರ್ನಾಲ್ಜು ತಿಂಗಳು ಕಳೆದರೂ ಸಹ ದುಡಿತದ ವೇತನ ದೊರೆಯುತ್ತಿಲ್ಲವಲ್ಲ ಎಂದು ಸಿಬ್ಬಂದಿ ಅಳಲು ತೋಡಿಕೊಳ್ಳುವಂತಾಗಿದೆ. ಪ್ರತಿ ತಿಂಗಳ ವೇತನ ಪಾವತಿಯಲ್ಲಿ ಅನಿಶ್ಚಿತತೆ ಮತ್ತು ತಾರತಮ್ಯ ಮಾಡುತ್ತಿರುವುದಕ್ಕೆ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಹುತೇಕ ನೌಕರರಿಗೆ ಕಳೆದ ಆಗಸ್ಟ್ ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಅನೇಕರಿಗೆ ಜುಲೈ ತಿಂಗಳಿನಿಂದಲೇ ಸಂಬಳ ಬಾಕಿ ಉಳಿದಿದೆ.
ಪ್ರತಿ ತಿಂಗಳು ವೇತನ ನೀಡದಿದ್ದರೆ ಜೀವನ, ಕುಟುಂಬ ನಿರ್ವಹಣೆ ಮಾಡುವುದು ಹೇಗೆ? 3-4 ತಿಂಗಳಾದರೂ ವೇತನ ನೀಡದ್ದರಿಂದ ಹಾಗೂ ತಾರತಮ್ಯ ಮಾಡುವುದನ್ನು ಖಂಡಿಸಿ ಎಲ್ಲ ಹೊರಗುತ್ತಿಗೆ ನೌಕಕರು ಇಂದು ಕೆಲಸ ಸ್ಥಗಿತಗೊಳಿಸಿ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಿದ್ದೇವೆ. ವೇತನ ಪಾವತಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರಿಂದ ಮತ್ತೆ ಕೆಲಸಕ್ಕೆ ಹಾಜರಾಗಿದ್ದೇವೆ. ಈಗಿರುವ ಏಜೆನ್ಸಿಯವರನ್ನು ಬದಲಿಸುವಂತೆಯೂ ಜಿಲ್ಲಾಡಳಿತಕ್ಕೆ ವಿನಂತಿಸಿಕೊಳುತ್ತೇವೆ.ಹೆಸರು ಹೇಳಲಿಚ್ಛಿಸದ ಎನ್ಎಚ್ಎಂ ಸಿಬ್ಬಂದಿ.
ಹೊರಗುತ್ತಿಗೆ ನೌಕರರಾಗಿದ್ದರಿಂದ ಸಾಮಾಜಿಕ ಭದ್ರತಾ ಸೌಲಭ್ಯಗಳಿಗೂ ತೊಡಕಾಗುತ್ತಿದೆ. ಹೊಸದಾಗಿ ನೇಮಕಗೊಂಡ ಹಲವು ಸಿಬ್ಬಂದಿಗೆ ಇಎಸ್ಐ ಸೌಲಭ್ಯವಿಲ್ಲ. ಇಎಸ್ಐ ಸೌಲಭ್ಯ ಪಡೆಯಲು ಕೆಲಸದ ಪ್ರಮಾಣಪತ್ರ, ಸಂಬಂಧಿತ ದಾಖಲೆಗಳನ್ನು ಕೆಲಸಕ್ಕೆ ನೇಮಿಸಿಕೊಂಡ ಏಜೆನ್ಸಿಯ ದೃಢೀಕರಣ ಬೇಕಾಗುತ್ತದೆ. ವೇತನವನ್ನೇ ಸಕಾಲಕ್ಕೆ ನೀಡದ ಏಜೆನ್ಸಿಯವರು ಅಗತ್ಯ ದಾಖಲೆಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ ಎಂದು ಆರೋಪಿಸುತ್ತಾರೆ ಸಂಕಷ್ಟದಲ್ಲಿರುವ ಸಿಬ್ಬಂದಿ.
ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಸುಮಾರು 297 ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ. ಈಗಿರುವ ಸಿಬ್ಬಂದಿಗೆ ಕಾಂತಿ ಏಜೆನ್ಸಿಯವರು ವೇತನ ನೀಡುತ್ತಿದ್ದಾರೆ. ಅವರಿಗೆ ಇನ್ನೆರಡು ದಿನದಲ್ಲಿ ಬಾಕಿ ಇರುವ ಎಲ್ಲ ತಿಂಗಳ ವೇತನ ಪಾವತಿಸಲು ಗಡುವು ನೀಡಲಾಗಿದೆ. ಈ ಡಿಸೆಂಬರ್ ಅಂತ್ಯಕ್ಕೆ ಅವರ ಟೆಂಡರ್ ಅವಧಿ ಮುಗಿಯಲಿದ್ದು, ಸೂಕ್ತ ನಿರ್ವಹಣೆ ಮಾಡದ್ದರಿಂದ ಹೊಸ ಏಜೆನ್ಸಿಗಾಗಿ ಟೆಂಡರ್ ಕರೆಯಲಾಗುವುದು.ಡಾ. ಬಸವರಾಜ ಹುಬ್ಬಳ್ಳಿ. ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ.