ಉಡುಪಿ ಜಿಲ್ಲೆಯಲ್ಲಿ ಹಾಡಿಗಳಲ್ಲಿ ಬದುಕುತ್ತಿರುವ ಬುಡಕಟ್ಟು ಸಮುದಾಯವಾದ ಕೊರಗ ಸಮುದಾಯದ ಜನರ ಮನೆ ಬಾಗಿಲಿಗೆ ತೆರಳಿ ಪ್ರಾಥಮಿಕ ಆರೋಗ್ಯ ಸೇವೆ ನೀಡುವ ಸಂಚಾರಿ ಆರೋಗ್ಯ ಘಟಕ ’ಆರೋಗ್ಯ ಸೇತು’. 
ಉಡುಪಿ

ಕೊರಗರ ಮನೆ ಬಾಗಿಲಿಗೆ ‘ಆರೋಗ್ಯ ಸೇತು’

ರಾಘವೇಂದ್ರ ಪೈ ಕುಂದಾಪುರ
ಉಡುಪಿ ಜಿಲ್ಲೆಯಲ್ಲಿ ಹಾಡಿಗಳಲ್ಲಿ ಬದುಕುತ್ತಿರುವ ಬುಡಕಟ್ಟು ಸಮುದಾಯವಾದ ಕೊರಗ ಸಮುದಾಯದ ಜನರ ಮನೆ ಬಾಗಿಲಿಗೆ ತೆರಳಿ ಪ್ರಾಥಮಿಕ ಆರೋಗ್ಯ ಸೇವೆ ನೀಡುವ ಸಂಚಾರಿ ಆರೋಗ್ಯ ಘಟಕಗಳ ಸೇವೆ ‘ಆರೋಗ್ಯ ಸೇತು’ ಕಾರ್ಯಾರಂಭಗೊಂಡಿದೆ. ಉಡುಪಿ ಜಿಲ್ಲೆಗೆ 4 ಸಂಚಾರಿ ಆರೋಗ್ಯ ಘಟಕ ಮಂಜೂರಾಗಿದ್ದು ಕಾರ್ಯನಿರ್ವಹಿಸುತ್ತಿವೆ.
ಪಿಎಂ-ಜನ್ ಮನ್ ಯೋಜನೆಯಡಿ ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಬೈಂದೂರು ಹಾಗೂ ಕಾರ್ಕಳ ತಾಲೂಕಿಗೆ ತಲಾ ಒಂದರಂತೆ ಸಂಚಾರಿ ಆರೋಗ್ಯ ಘಟಕ ಮಂಜೂರಾಗಿದೆ. ಈ ತಾಲೂಕುಗಳ ವ್ಯಾಪ್ತಿಯ ದುರ್ಗಮ ಮತ್ತು ಆರೋಗ್ಯ ಸೇವೆಗಳಿಂದ ವಂಚಿತರಾಗಿರುವ ಆದಿವಾಸಿ ಜನರು ನೆಲೆಸಿರುವ ಪ್ರದೇಶಗಳಲ್ಲಿ ಗುರುತಿಸಿ, ಅಲ್ಲಿಗೆ ಈ ವಾಹನದ ಮೂಲಕ ತೆರಳಿ ತಪಾಸಣೆ, ಅಗತ್ಯವಿರುವ ಆರೋಗ್ಯ ಸೇವೆ ಹಾಗೂ ಆರೋಗ್ಯ ಶಿಕ್ಷಣ ನೀಡುವುದು ಇದರ ಪ್ರಮುಖ ಉದ್ದೇಶ.

ಹೀಗಿದೆ ಕಾರ್ಯನಿರ್ವಹಣೆ:

ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (ಪಿಎಂಜನ್‌ಮನ್) ಯೋಜನೆಯಡಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಬುಡಕಟ್ಟು ಜನಾಂಗ ಜಾಸ್ತಿಯಾಗಿರುವ 6 ಪ್ರಮುಖ ಜಿಲ್ಲೆಗಳಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಮೈಸೂರು, ಚಾಮರಾಜನಗರ, ಮಡಿಕೇರಿ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗಿದೆ. ಕೇಂದ್ರ ಮತ್ತು ರಾಜ್ಯದ ಸಹಭಾಗಿತ್ವದಲ್ಲಿ ಈ ಯೋಜನೆ ರೂಪುಗೊಂಡಿದ್ದು ಕರ್ನಾಟಕ ರಾಜ್ಯದಲ್ಲಿ ಆರೋಗ್ಯ ಸೇತು ಎಂಬ ಹೆಸರಿನಲ್ಲಿ ಡಿ.19ರಂದು ಸಿಎಂ ಅಧಿಕೃತ ಚಾಲನೆ ನೀಡಿದ್ದಾರೆ.

ಯಾವೆಲ್ಲ ಪ್ರದೇಶಗಳಿಗೆ ಭೇಟಿ?

ಉಡುಪಿ ಜಿಲ್ಲೆಯಲ್ಲಿ ಕೊರಗ ಸಮುದಾಯಗಳಿರುವ 280 ಹಾಡಿಗಳನ್ನು ಗುರುತಿಸಲಾಗಿದೆ. ಅವುಗಳ ಪೈಕಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಕನಿಷ್ಠ 5 ಕಿ.ಮೀ. ದೂರವಿರುವ ಹಾಡಿಗಳನ್ನು ಈ ಘಟಕದ ವ್ಯಾಪ್ತಿಗೆ ಆಯ್ಕೆ ಮಾಡಲಾಗಿದೆ. ಕುಂದಾಪುರ ತಾಲೂಕಿನ ರಟ್ಟಾಡಿ, ನಡಂಬೂರು, ಅಮಾಸೆಬೈಲು, ಜಡ್ಡಿನಗದ್ದೆ, ಕೆಳಸುಂಕ, ತೊಂಬಟ್ಟು, ಹಂಚಿಕಟ್ಟೆ, ಅರಸಮ್ಮಕಾನು, ಶೇಡಿಮನೆ, ಮಾಂಡಿ ಮೂರುಕೈ, ಹೆಂಗವಳ್ಳಿ. ಉಡುಪಿ (ಬ್ರಹ್ಮಾವರ, ಕಾಪು ಸಹಿತ) ತಾಲೂಕಿನಲ್ಲಿ ಮಟಪಾಡಿ, ಎಂಜಿ ಕಾಲೋನಿ, ಅಚ್ಲಾಡಿ, ರಂಗನಕೆರೆ ಎಸ್ಟಿ ಕಾಲೋನಿ, ಹಳೆಕೋಟೆ ಜೆಡ್ಡು, ಕೆಳಾರ್ಕಳಬೆಟ್ಟು, ನೇಜಾರು ನೀಡಂಬಳ್ಳಿ, ಉಚ್ಚಿಲ ಮುಳ್ಳುಗುಡ್ಡೆ, ಅದಮಾರು, ಮೂಡಾಬೆಟ್ಟು, ಕುಂಜಿಲ್ ಗುಡ್ಡೆ, ಬಂಡ್ಸಾಲೆ, ಕುತ್ಯಾರು ಎಸ್ಟಿ ಕಾಲೋನಿ, ಎಸ್ಟಿ ಕಾಲೋನಿ ಪಣಿಯೂರು, ದೇವೇಗೌಡ ಬಡಾವಣೆ, ಪಾದೂರು, ಎಸ್ಟಿ ಕಾಲೋನಿ 92 ಹೇರೂರು. ಕಾರ್ಕಳ (ಹೆಬ್ರಿ ಸಹಿತ) ತಾಲೂಕಿನಲ್ಲಿ ಸೋಮೇಶ್ವರ, ಸೀತಾನದಿ, ಮಂಡೆಗದ್ದೆ, ಕಬ್ಬಿನಾಲೆ, ಪಡುಕುಡೂರು, ಮುಟ್ಲುಪಾಡಿ, ಮುಂಡ್ಲಿ, ಶಿರ್ಲಾಲು, ನೂರಾಲುಬೆಟ್ಟು, ಗುಮ್ಮೆಟ್ಟು, ಬಾರಾಡಿ. ಬೈಂದೂರು ತಾಲೂಕಿನ ಕೆರಾಡಿ, ಹಯ್ಯಂಗಾರು, ಬೆಳ್ಳಾಲ, ಮೋರ್ಟು, ಉದಯನಗರ, ಮುದೂರು, ಕುಂಜ್ಞಾಡಿ, ಕಾಲ್ತೋಡು, ಉಳ್ಳೂರು, ತೂದಳ್ಳಿ, ಮುಳ್ಳಿಬೇರು ಪ್ರದೇಶಗಳಲ್ಲಿ ವಾಸಿಸುವ ಕೊರಗರಿಗೆ ಆರೋಗ್ಯ ಸೇವೆ ಮನೆ ಬಾಗಿಲಿಗೆ ತಲುಪಲಿದೆ.

ಘಟಕದಿಂದ ಪ್ರಯೋಜನವೇನು?

ಕೊರಗ ಸಮುದಾಯದವರಲ್ಲಿ ಬಹುತೇಕರಿಗೆ ಅಪೌಷ್ಟಿಕತೆ ಹಾಗೂ ಬೇರೆಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುವುದು ಇತ್ತೀಚಿನ ವರ್ಷಗಳಲ್ಲಿ ಕಂಡುಬರುತ್ತಿರುವ ಗಂಭೀರ ವಿಚಾರ. ಅವರ ಆರೋಗ್ಯ ಸುಧಾರಣೆಗೆ ಈ ಸಂಚಾರಿ ಘಟಕ ಸಹಕಾರಿಯಾಗಲಿದೆ. ಆರೋಗ್ಯ ಶಿಕ್ಷಣವನ್ನೂ ನೀಡುವುದರಿಂದ ಆದಿವಾಸಿಗಳ ಆರೋಗ್ಯ ಸುಧಾರಣೆಯೇ ಈ ಯೋಜನೆಯ ಮುಖ್ಯ ಗುರಿಯಾಗಿದೆ.

ವಾರದಲ್ಲಿ ಐದು ದಿನ ಸೇವೆ

ಈ ಸಂಚಾರಿ ಘಟಕದಲ್ಲಿ ತಲಾ ಒಬ್ಬರು ವೈದ್ಯರು, ಶುಶ್ರೂಷಕಿ ಹಾಗೂ ಪ್ರಯೋಗಶಾಲಾ ತಂತ್ರಜ್ಞರು ಇರುತ್ತಾರೆ. ವಾರದಲ್ಲಿ ಐದು ದಿನ ಈ ಘಟಕ ಕಾರ್ಯಾಚರಿಸಲಿದ್ದು, ವಾರಕ್ಕೊಮ್ಮೆ ಹಾಡಿಯ ಮನೆಗೆ ಭೇಟಿ ನೀಡಿ, ಚಿಕಿತ್ಸೆ ನೀಡಲಿದ್ದಾರೆ. ಔಷಧವನ್ನು ಸಮೀಪದ ಸರ್ಕಾರಿ ಆಸ್ಪತ್ರೆಗಳಿಂದ ಪಡೆದುಕೊಳ್ಳಲಾಗುತ್ತದೆ. ಗಂಭೀರ ಸಮಸ್ಯೆಗಳಿದ್ದರೆ ಹೆಚ್ಚಿನ ಚಿಕಿತ್ಸೆಗೂ ಅವಕಾಶ ಮಾಡಿಕೊಡಲಾಗುತ್ತದೆ.

ಜಿಲ್ಲೆಯಲ್ಲಿ ಕೊರಗ ಸಮುದಾಯದವರು ವಾಸವಿರುವ ಹಾಡಿಗಳಿಗೆ ಭೇಟಿ ನೀಡಿ, ಆರೋಗ್ಯ ಸೇವೆ ನೀಡಲಾಗುತ್ತಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 4 ಸಂಚಾರಿ ಆರೋಗ್ಯ ಘಟಕ ಕಾರ್ಯಾಚರಿಸುತ್ತಿವೆ. ಈ ಮೂಲಕ ತಳ ಸಮುದಾಯಕ್ಕೆ ಸುವ್ಯಸ್ಥಿತ ಆರೋಗ್ಯ ಸೇವೆ ನೀಡಲಾಗುತ್ತಿದೆ.