5 ವರ್ಷಗಳ ಜನಪ್ರತಿನಿಧಿ ಆಡಳಿತ ಕೊನೆಗೊಂಡ ಮಜೂರು ಗ್ರಾಮ ಪಂಚಾಯಿತಿ.
ಕಾಪು ತಾಲೂಕಿನ 16 ಗ್ರಾಮ ಪಂಚಾಯಿತಿಗಳಲ್ಲಿ 5 ವರ್ಷಗಳ ಜನಪ್ರತಿನಿಧಿಗಳ ಆಡಳಿತ ಅವಧಿ ಫೆ.14ರಿಂದ ಮುಕ್ತಾಯಗೊಳ್ಳಲಿದ್ದು, ಇನ್ನು ಆಡಳಿತಾಧಿಕಾರಿಗಳ ಅಧಿಕಾರ ಪರ್ವ ಶುರುವಾಗಲಿದೆ.
2021, ಫೆ.15ರಿಂದ ಪ್ರಥಮ ಗ್ರಾಮಸಭೆ ಗೊತ್ತುಪಡಿಸಿದ್ದ ತಾಲೂಕಿನ ಕೋಟೆ, ಕುರ್ಕಾಲು, ಮಜೂರು, ಮುದರಂಗಡಿ, ಪಲಿಮಾರು ಹಾಗೂ ಶಿರ್ವ ಗ್ರಾಮಗಳ ಅವಧಿ 14ರಂದು, ಬಡಾ, ಬೆಳಪು, ಬೆಳ್ಳೆ, ಹೆಜಮಾಡಿ, ಇನ್ನಂಜೆ, ಕಟಪಾಡಿ, ಕುತ್ಯಾರು, ತೆಂಕ ಗ್ರಾಪಂಗಳ ಅವಧಿ 15ಕ್ಕೆ, ಎಲ್ಲೂರು 16 ಹಾಗೂ ಪಡುಬಿದ್ರಿ ಗ್ರಾಪಂನ ಅವಧಿ 17ರಂದು ಕೊನೆಗೊಳ್ಳಲಿದೆ. ಜನಪ್ರತಿನಿಧಿಗಳ ಆಡಳಿತಾವಧಿಯಲ್ಲಿ ಕೆಲವೊಂದು ಗ್ರಾಪಂಗಳಲ್ಲಿ 5 ವರ್ಷಗಳಲ್ಲಿ ವಾರ್ಷಿಕವಾಗಿ 2 ಗ್ರಾಮಸಭೆಗಳು ನಡೆದಿದ್ದರೆ, ಚುನಾವಣಾ ನೀತಿ ಸಂಹಿತೆ ಹಾಗೂ ಆಂತರಿಕ ಗೊಂದಲಗಳಿಂದಾಗಿ ಕೆಲ ಗ್ರಾಪಂಗಳಲ್ಲಿ ಗ್ರಾಮಸಭೆಗಳ ಸಂಖ್ಯೆ ಕಡಿತಗೊಂಡಿರುವ ಘಟನೆಗಳು ನಡೆದಿವೆ. ತೆಂಕ ಗ್ರಾಪಂನಲ್ಲಿ ಆಂತರಿಕ ಗೊಂದಲಗಳಿಂದ ಪ್ರಸ್ತುತ ಸಾಲಿನ ಗ್ರಾಮಸಭೆಯೇ ಈವರೆಗೆ ನಿಗದಿಪಡಿಸಲು ಸಾಧ್ಯವಾಗಿಲ್ಲ. ಮಜೂರು ಗ್ರಾಪಂ ಸಹಿತ ಬೆರಳೆಣಿಕೆ ಗ್ರಾಮಗಳಲ್ಲಿ 5 ವರ್ಷಗಳಲ್ಲಿ 10 ಗ್ರಾಮಸಭೆಗಳು ನಡೆದಿರುವುದು ವಿಶೇಷವಾಗಿದೆ. ಹೆಚ್ಚಿನ ಜನಸಂಖ್ಯೆ ಹೊಂದಿರುವ ಶಿರ್ವ ಮತ್ತು ಪಡುಬಿದ್ರಿ ಗ್ರಾಪಂಗಳು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರುವಲ್ಲಿ ಸರ್ವಾನುಮತದ ನಿರ್ಣಯವನ್ನು ಕೈಗೊಂಡಿರುವುದು ಗಮನಾರ್ಹವಾಗಿದೆ.
ಅನರ್ಹಗೊಂಡ 4 ಸದಸ್ಯರು
ತಾಲೂಕಿನ ಬೆಳಪು, ಕುರ್ಕಾಲು, ಪಲಿಮಾರು ಹಾಗೂ ಎಲ್ಲೂರು ಗ್ರಾಪಂಗಳಲ್ಲಿನ ತಲಾ ಓರ್ವ ಸದಸ್ಯರು ಗ್ರಾಮಸಭೆಗಳಿಗೆ ಗೈರಾಗಿ 6 ವರ್ಷ ಗ್ರಾಪಂ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಂಡಿದ್ದಾರೆ. ಪಡುಬಿದ್ರಿ ಗ್ರಾಪಂನ 2 ಸದಸ್ಯರು ಹಾಗೂ ಇನ್ನಂಜೆ ಗ್ರಾಪಂ ಓರ್ವ ಸದಸ್ಯ ನಿಧನರಾಗಿ ಸ್ಥಾನ ತೆರವಾಗಿದೆ. ಬೆಳ್ಳೆ ಗ್ರಾಪಂ ಓರ್ವ ಸದಸ್ಯೆ 2024ರಲ್ಲಿ ರಾಜೀನಾಮೆ ನೀಡಿ ಸ್ಥಾನ ತೆರವುಗೊಂಡು ಉಪಚುನಾವಣೆ ಘೋಷಣೆಗೊಂಡರೂ ಸ್ಪರ್ಧೆಗೆ ಯಾರೂ ಉತ್ಸುಕತೆ ತೋರದೆ ಸ್ಥಾನ ಖಾಲಿ ಉಳಿಯುವಂತಾಯಿತು. ಪಡುಬಿದ್ರಿ ಗ್ರಾಪಂನ ಓರ್ವ ಸದಸ್ಯೆ ಕೊನೆ ಹಂತದಲ್ಲಿ ರಾಜೀನಾಮೆ ನೀಡಿ ಸ್ಥಾನ ತೆರವಾಗಿದೆ. ಪ್ರಥಮ ಹಂತದ ಮೀಸಲಾತಿಯಂತೆ ಶಿರ್ವ ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಬೆಂಬಲ ಪಡೆದು ಅಧ್ಯಕ್ಷ ಸ್ಥಾನಕ್ಕೇರಿದ ಕಾಂಗ್ರೆಸ್ ಬೆಂಬಲಿತ ಸದಸ್ಯರೊಬ್ಬರು ಮರಣಹೊಂದಿ ಉಪ ಚುನಾವಣೆ ನಡೆದ ಘಟನೆಯೂ ಸಂಭವಿಸಿತ್ತು. ಪ್ರಥಮ ಹಂತದಲ್ಲಿ ಬಿಜೆಪಿ ಬೆಂಬಲಿತರಿಗೆ ಬಹುಮತವಿದ್ದರೂ ಲಾಟರಿ ಎತ್ತುವ ಮೂಲಕ ಬಡಾ ಗ್ರಾಪಂ ಅಧ್ಯಕ್ಷಗಾದಿ ಕಾಂಗ್ರೆಸ್ ಬೆಂಬಲಿತರಿಗೆ ಹಾಗೂ ಎರಡನೇ ಅವಧಿಯಲ್ಲಿ ಮುದರಂಗಡಿ ಗ್ರಾಪಂನಲ್ಲಿಯೂ ಬಹುಮತವಿಲ್ಲದಿದ್ದರೂ ಕಾಂಗ್ರೆಸ್ ಬೆಂಬಲಿತೆ ಅಧ್ಯಕ್ಷೆಯಾಗುವ ಯೋಗ ಒಲಿದಿತ್ತು.
ಆಡಳಿತಾಧಿಕಾರಿಗಳ ನೇಮಕ
ಅವಧಿ ಪೂರ್ಣಗೊಂಡ ತಾಲೂಕಿನ ಬೆಳ್ಳೆ, ಶಿರ್ವ ಗ್ರಾಪಂಗೆ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ನಿಧೀಶ್ ಹೊಳ್ಳ, ಕುರ್ಕಾಲು, ಕಟಪಾಡಿಗೆ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಗುರುಪ್ರಸಾದ್, ಇನ್ನಂಜೆ, ಮಜೂರಿಗೆ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ವರುಣ್ ಕೆ.ಜಿ., ಕೋಟೆ ಗ್ರಾಪಂಗೆ ಪಶುವೈದ್ಯಾಧಿಕಾರಿ ಡಾ.ವಿಜಯಕುಮಾರ್, ಕುತ್ಯಾರು, ಮುದರಂಗಡಿಗೆ ಕೌಶಲಾಭಿವೃದ್ಧಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಅರುಣ್ ಬಿ., ಬೆಳಪು, ಬಡಾ ಗ್ರಾಪಂಗೆ ಬಂದರು ಮತ್ತು ಮೀನುಗಾರಿಕಾ ಇಲಾಖೆ ಸಹಾಯಕ ಇಂಜಿನಿಯರ್ ಭಾನುಪ್ರಕಾಶ್ ಜೆ.ಅತ್ತಾವರ, ಎಲ್ಲೂರು, ಪಲಿಮಾರಿಗೆ ತೋಟಗಾರಿಕಾ ಇಲಾಖೆ ಪುಷ್ಪ ಹರಾಜು ಕೇಂದ್ರದ ಸಹಾಯಕ ನಿರ್ದೇಶಕ ಸುನೀಲ್ ಕುಮಾರ್ ವೈ.ಎಚ್., ತೆಂಕ ಗ್ರಾಪಂಗೆ ಪುರಸಭೆ ಮುಖ್ಯಾಧಿಕಾರಿ ಎನ್.ಎಂ.ಮೇಸ್ತ, ಪಡುಬಿದ್ರಿ ಮತ್ತು ಹೆಜಮಾಡಿ ಗ್ರಾಪಂಗೆ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ರವಿ ಎಂ. ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
5 ವರ್ಷಗಳ ಜನಪ್ರತಿನಿಧಿ ಆಡಳಿತ ಕೊನೆಗೊಂಡ ಮಜೂರು ಗ್ರಾಮ ಪಂಚಾಯಿತಿ.