ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ಕಡಬದಲ್ಲಿ ಪ್ರಕೃತಿ ವಿಕೋಪ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಜಿಲ್ಲಾಧಿಕಾರಿ ದರ್ಶನ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಕರ್ನಾಟಕ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಸಮಿತಿ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್ ಮೊದಲಾದವರಿದ್ದರು. 
ಉಡುಪಿ

ದೂರದೃಷ್ಟಿ ಇಟ್ಟು ಯೋಜನೆ ರೂಪಿಸಿ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕಡಬ

ಯಾವ ಯೋಜನೆ ಮಾಡುವಾಗಲೂ ಕನಿಷ್ಠ 30 ವರ್ಷದ ದೂರಾಲೋಚನೆ ಇಟ್ಟು ಮಾಡಬೇಕು. ತತ್ಕಾಲಕ್ಕೆ ಬಸ್ ನಿಲ್ದಾಣ ಮಾಡುವ ವಿಚಾರ ಬೇಡ. ವ್ಯವಸ್ಥಿತ ಹಾಗೂ ವಿಶಾಲ ಜಾಗ ಗುರುತಿಸಿ ನಂತರ ಬಸ್ ನಿಲ್ದಾಣದ ವ್ಯವಸ್ಥೆ ಮಾಡೋಣ ಎಂದು ಯು.ಟಿ.ಖಾದರ್ ಹೇಳಿದರು.
ಕಡಬ ತಾಪಂನಲ್ಲಿ ಗುರುವಾರ ಪ್ರಕೃತಿ ವಿಕೋಪ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕಡಬ ತಾಲೂಕು ಕೇಂದ್ರವಾದರೂ ಇಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಇಲ್ಲ. ಕೆಎಸ್ಸಾರ್ಟಿಸಿ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಜಾಗ ನೀಡಿದರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಕೆಡಿಪಿ ನಾಮನಿರ್ದೇಶಿತ ಸದಸ್ಯ ಅಶ್ರಫ್ ಶೇಡಿಗುಂಡಿ, ಕಡಬ ಪಪಂ ಅಧ್ಯಕ್ಷೆ ತಮನ್ನಾ ಜಬೀನ್, ಸ್ಥಾಯಿ ಸಮಿತಿ ಅಧ್ಯಕ್ಷ ಹಾಜಿ ಕೆ.ಎಂ.ಹನೀಫ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಸ್ಥಾಯಿ ಸಮಿತಿ ಸದಸ್ಯ ಫಜಲ್ ಕೋಡಿಂಬಾಳ ಆರೋಪಿಸಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಪಾಯಕಾರಿ ಮರಗಳ ತೆರವಿಗೆ ಅರಣ್ಯ ಇಲಾಖೆ ದುಡ್ಡಿಲ್ಲ ಎಂದು ಹೇಳುತ್ತಿದೆ ಎಂದು ಪಪಂ ಅಧ್ಯಕ್ಷೆ ತಮನ್ನಾ ಜಬೀನ್ ಸಚಿವರ ಗಮನಕ್ಕೆ ತಂದರು. ಪಪಂ ಹಣ ಬಳಸಿ ಮರ ತೆರವು ಮಾಡುವಂತೆ ಸಚಿವರು ಸೂಚಿಸಿದರು.
ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಶಾಸಕಿ ಭಾಗೀರಥಿ ಮುರುಳ್ಯ, ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಸಮಿತಿ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಜಿಪಂ ಸಿಇಒ ನರ್ವಾಡೆ ವಿನಾಯಕ್ ಕಾರ್ಭಾರಿ, ಎಸ್‌ಪಿ ಡಾ.ಅರುಣ್ ಕುಮಾರ್ ಕೆ. ಮೊದಲಾದವರು ಉಪಸ್ಥಿತರಿದ್ದರು. ತಾಪಂ ಇಒ ನವೀನ್ ಭಂಡಾರಿ ಸ್ವಾಗತಿಸಿದರು. ಭರತ್ ನಿರೂಪಿಸಿದರು.

ಭಾಗಶಃ ಅರಣ್ಯ ಸಮಸ್ಯೆಯಿಂದ ಹಕ್ಕುಪತ್ರಕ್ಕೆ ತೊಂದರೆ

ಭಾಗಶಃ ಅರಣ್ಯ ವಿಚಾರಕ್ಕೆ ಸಂಬಂಧಿಸಿ ಅರಣ್ಯ ಇಲಾಖೆ, ಕಂದಾಯ, ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಸಭೆ ನಡೆಸುವಂತೆ ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು. ಭಾಗಶಃ ಅರಣ್ಯ ಎಂಬ ಕಾರಣಕ್ಕಾಗಿ ಬಹಳಷ್ಟು ಜನರಿಗೆ ಹಕ್ಕುಪತ್ರ ಸಿಗುತ್ತಿಲ್ಲ. 94ಸಿ ಯೋಜನೆಗೆ ತೊಂದರೆಯಾಗುತ್ತಿದೆ. ಅರಣ್ಯ ಇಲಾಖೆ ಈ ನೆಪದಲ್ಲಿ ಎನ್‌ಒಸಿ ಕೊಡುತ್ತಿಲ್ಲ. ಜಂಟಿ ಸರ್ವೇ ನಡೆಸುವುದಕ್ಕೂ ಇಲಾಖೆಗಳು ಮುಂದಾಗುತ್ತಿಲ್ಲ ಎಂದು ಫಝಲ್ ಕೋಡಿಂಬಾಳ ಹಾಗೂ ಕೆಡಿಪಿ ಸದಸ್ಯ ಅಶ್ರಫ್ ಶೇಡಿಗುಂಡಿ ದೂರಿದರು. ಜಿಲ್ಲಾಧಿಕಾರಿ ದರ್ಶನ್ ಮಾತನಾಡಿ, ಈ ಸಮಸ್ಯೆ ಪುತ್ತೂರು ಉಪವಿಭಾಗದಲ್ಲಿ ಹೆಚ್ಚಾಗಿದೆ ಎಂದರು. ಈ ಬಗ್ಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವಂತೆ ಸಚಿವರು ಸೂಚಿಸಿದರು.

ಡಯಾಲಿಸಿಸ್ ಕೇಂದ್ರಕ್ಕೆ ಶೀಘ್ರ ಕಟ್ಟಡ ವ್ಯವಸ್ಥೆ

ಪ್ರಸ್ತುತ ಕಡಬ ಡಯಾಲಿಸಿಸ್ ಕೇಂದ್ರದಲ್ಲಿ 55 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. 7 ಮಂದಿ ವೇಯ್ಟಿಂಗ್ ಲಿಸ್ಟ್‌ನಲ್ಲಿದ್ದಾರೆ. ಆಸ್ಪತ್ರೆಯ ಮೀಟಿಂಗ್ ಹಾಲಿನಲ್ಲಿಯೇ ಈಗ ಡಯಾಲಿಸಿಸ್ ನಡೆಸಲಾಗುತ್ತದೆ. ಜಾಗದ ಕೊರತೆ ಇದೆ ಎಂದು ವೈದ್ಯರು ವಿವರ ನೀಡಿದಾಗ ಅನುದಾನ ಬರಬೇಕಾದರೆ ಬೆನ್ನುಹತ್ತಬೇಕು. ಸುಮ್ಮನಿದ್ದರೆ ಅನುದಾನ ಬರುವುದಿಲ್ಲ. ತಕ್ಷಣ ಅಂದಾಜುಪಟ್ಟಿ ತಯಾರಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡಿ. 2 ತಿಂಗಳೊಳಗೆ ನೂತನ ಕಟ್ಟಡದ ವ್ಯವಸ್ಥೆ ಮಾಡಲಾಗುವುದು ಎಂದರು ಸಚಿವ ಖಾದರ್ ಹೇಳಿದರು. ಸಮುದಾಯ ಆಸ್ಪತ್ರೆಯಲ್ಲಿ ಸಿಬ್ಬಂದಿ ಹಾಗೂ ವೈದ್ಯರ ಕೊರತೆ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಸಚಿವರ ಗಮನ ಸೆಳೆದರು.