ಕಾಪು ಶ್ರೀ ಹಳೇ ಮಾರಿಗುಡಿ, ಶ್ರೀ ಹೊಸ ಮಾರಿಗುಡಿ ಮತ್ತು ಕಲ್ಯ ಶ್ರೀ ಮೂರನೇ ಮಾರಿಗುಡಿ ಮಾರಿಯಮ್ಮ ದೇವರು. 
ಉಡುಪಿ

ಕಾಪು ದೇವಸ್ಥಾನದಲ್ಲಿ ಸುಗ್ಗಿ ಮಾರಿಪೂಜೆ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕಾಪು ಶ್ರೀ ಹಳೇ ಮಾರಿಗುಡಿ ದೇವಸ್ಥಾನ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಕಲ್ಯ ಶ್ರೀ ಮೂರನೇ ಮಾರಿಗುಡಿ ದೇವಸ್ಥಾನದಲ್ಲಿ ಏಕಕಾಲದಲ್ಲಿ ಜರುಗುವ ಕಾಲಾವಧಿ ಸುಗ್ಗಿ ಮಾರಿಪೂಜೆ ಮಾ.24 ಮತ್ತು 25ರಂದು ನಡೆಯಲಿದೆ.
ಮೂರೂ ಮಾರಿಗುಡಿಗಳಲ್ಲಿ ಏಕಕಾಲದಲ್ಲಿ ನಡೆಯುವ ಸುಗ್ಗಿ ಮಾರಿಪೂಜೆಯಲ್ಲಿ ಅವಿಭಜಿತ ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲದೆ ಕಾಸರಗೋಡು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಮುಂಬೈ, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸಿ, ಮಾರಿಯಮ್ಮ ದೇವಿ ಸನ್ನಿಧಿಯಲ್ಲಿ ವಿವಿಧ ಹರಕೆ, ಸೇವೆ ಸಲ್ಲಿಸುತ್ತಾರೆ.
ಮಾ.24ರಂದು ರಾತ್ರಿ ಹಳೇ ಮಾರಿಗುಡಿಗೆ ವೆಂಕಟರಮಣ ದೇವಸ್ಥಾನದಿಂದ ಹಾಗೂ ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಗೆ ಶ್ರೀ ಲಕ್ಷ್ಮೆ ಜನಾರ್ದನ ದೇವಸ್ಥಾನದಿಂದ ಮಾರಿಯಮ್ಮ ದೇವಿಯ ಬಿಂಬ ಮತ್ತು ಚಿನ್ನಾಭರಣಗಳನ್ನು ಶೋಭಾಯತ್ರೆಯಲ್ಲಿ ತಂದು ಗದ್ದುಗೆಯೇರಿಸಿ ಮಾರಿಪೂಜೆ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. 25ರಂದು ಸಂಜೆ ದರ್ಶನ ಸೇವೆ ನಡೆದು ಬಳಿಕ ಮಾರಿಯಮ್ಮ ದೇವಿಯ ಬಿಂಬ ವಿಸರ್ಜಿಸಲಾಗುತ್ತದೆ.
ಸುಗ್ಗಿ ಮಾರಿಪೂಜೆಯಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಧಾರ್ಮಿಕ ವಿಧಾನಗಳಲ್ಲಿ ಪಾಲ್ಗೊಂಡು ಭಕ್ತರಿಗೆ ಎಲ್ಲ ಹರಕೆ ಮತ್ತು ಸೇವೆ ಸಮರ್ಪಿಸಲು ಮುಕ್ತ ಅವಕಾಶ ಒದಗಿಸಲಾಗಿದೆ. ಮೂರೂ ಮಾರಿಗುಡಿಗಳಲ್ಲೂ ಮಾರಿಪೂಜೆಗಾಗಿ ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೊಸ ಮಾರಿಗುಡಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ಮತ್ತು ಕಾರ್ಯನಿರ್ವಹಣಾಧಿಕಾರಿ ರವಿಕಿರಣ್ ಕೆ., ಹಳೇ ಮಾರಿಯಮ್ಮ ದೇವಸ್ಥಾನ ಆಡಳಿತ ಮೊಕ್ತೇಸರ ಪ್ರಸಾದ್ ಗೋಕುಲ್‌ದಾಸ್ ಶೆಣೈ ಹಾಗೂ ಮೂರನೇ ಮಾರಿಗುಡಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ ಕಾಪು, ಕಾರ್ಯನಿರ್ವಹಣಾಧಿಕಾರಿ ಮಂಜುಳಾ ಟಿ.ಎನ್. ತಿಳಿಸಿದ್ದಾರೆ.

ಸ್ವರ್ಣ ಸಮರ್ಪಣಾ ಮಹಾ ಅಭಿಯಾನ

ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ 24ರಂದು ನಡೆಯುವ ಸುಗ್ಗಿ ಜಾತ್ರೆ ಪರ್ವಕಾಲದಂದು ರಾತ್ರಿ ನಡೆಯುವ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತರ ಬಹು ಕಾಲದ ಕನಸಾದ ಕಾಪು ಶ್ರೀ ಹಳೇ ಮಾರಿಯಮ್ಮ ಸನ್ನಿಧಾನ ಜೀರ್ಣೋದ್ಧಾರ ಪೂರ್ವಭಾವಿಯಾಗಿ ನವರತ್ನ ಖಚಿತ ಸ್ವರ್ಣ ಸಿಂಹಾಸನ(ಗದ್ದಿಗೆ) ನಿರ್ಮಾಣ ಮಹಾಸಂಕಲ್ಪ ಸ್ವರ್ಣ ಸಮರ್ಪಣಾ ಮಹಾ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಮೊಕ್ತೇಸರ ಪ್ರಸಾದ್ ಗೋಕುಲ್‌ದಾಸ್ ಶೆಣೈ ತಿಳಿಸಿದ್ದಾರೆ.