ಕುಕ್ಕೆ ದೇವಳದ ಆನೆ ಯಶಸ್ವಿ. 
ಉಡುಪಿ

ಕುಕ್ಕೆಯ ಆನೆ ಯಶಸ್ವಿಗೆ ಜನ್ಮದಿನ ಸಂಭ್ರಮ

ಸುಬ್ರಹ್ಮಣ್ಯ (ದ.ಕ.): ನಾಗಾರಾಧನೆಯ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸುಬ್ರಹ್ಮಣ್ಯನ ಸೇವೆ ಮಾಡುತ್ತಿರುವ ಶ್ರೀ ದೇವಳದ ಆನೆ ಯಶಸ್ವಿಗೆ ಶನಿವಾರ 22ನೇ ಜನ್ಮದಿನ ಆಚರಿಸಲಾಯಿತು.
ಶ್ರೀ ದೇವಳದ ಕಾಶಿಕಟ್ಟೆ ಮಹಾಗಣಪತಿ ದೇವಸ್ಥಾನದಲ್ಲಿ ಯಶಸ್ವಿಯ ಹೆಸರಿನಲ್ಲಿ ವಿಶೇಷ ರಂಗಪೂಜೆ ನೆರವೇರಿತು. ಪೂಜಾ ನಂತರ ಸೊಂಡಿಲೆತ್ತಿ ದೇವರಿಗೆ ಆನೆ ನಮಿಸಿತು. ಬಳಿಕ ಪುರೋಹಿತ ಪ್ರಸಾದ್ ಕಲ್ಲೂರಾಯ ಯಶಸ್ವಿಗೆ ಹೂಹಾರ ಹಾಕಿ ದೇವರ ಪ್ರಸಾದ ನೀಡಿದರು. ಯಶಸ್ವಿಯ ಹುಟ್ಟುಹಬ್ಬದ ಪ್ರಯುಕ್ತ ಕ್ಷೇತ್ರದ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಯಶಸ್ವಿಯ ಫೋಟೋ ಹಾಕಿ ಶುಭಾಶಯ ಕೋರಿದರು.
2004ರ ಜು.18ರಂದು ಯಶಸ್ವಿ ಜನಿಸಿತು. 2007ರಲ್ಲಿ ಡಿ.29ರಂದು ಯಶಸ್ವಿಯನ್ನು ಬಳ್ಳಾರಿ ಶಾಸಕ ಆನಂದ್ ಸಿಂಗ್ ಸೇವಾ ರೂಪದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ನೀಡಿದ್ದರು. ಕುಕ್ಕೆಗೆ ಆಗಮಿಸುವಾಗ ಹೆಣ್ಣಾನೆಗೆ 3 ವರ್ಷ ಪ್ರಾಯ. ಶ್ರೀ ದೇವಳಕ್ಕೆ ಸಮರ್ಪಣೆಯಾದ ಬಳಿಕ ಆನೆಗೆ ಯಶಸ್ವಿ ಎಂದು ನಾಮಕರಣ ಮಾಡಲಾಗಿತ್ತು. ಆ ಬಳಿಕ ಯಶಸ್ವಿಗೆ ತರಬೇತಿ ನೀಡಲಾಗಿತ್ತು. ಈ ಹಿಂದಿನ ಆನೆ ಇಂದುಮತಿ ಕಾಲವಾದ ನಂತರ ಯಶಸ್ವಿ ಶ್ರೀ ದೇವರ ಸೇವೆ ಆರಂಭಿಸಿತು. ಈ ಮೊದಲು ಇಂದುಮತಿಯೊಂದಿಗೆ ಸೇವೆಯನ್ನು ಮಾಡುತ್ತಿತ್ತು.